ಮಂಗಳೂರುಃ ತಾನೀಗ ಸಕ್ರಿಯ ರಾಜಕಾರಣದಲ್ಲಿದ್ದು, ಮಂದಿನ ದಿನಗಳಲ್ಲಿ ತನ್ನ ರಾಜಕಾರಣವನ್ನು ದಕ್ಷಿಣ ಭಾರತದ ರಾಜ್ಯಗಳಿಗೆ ವಿಸ್ತರಿಸಲಿದ್ದೇನೆ ಎಂದು ಖ್ಯಾತ ಚಿತ್ರನಟ ಪ್ರಕಾಶ್ ರೈ ಹೇಳಿದ್ದಾರೆ.
ದೇಶದಲ್ಲಿ ಪರ್ಯಾಯ ರಾಜಕೀಯ ಶಕ್ತಿಯನ್ನು ಸಂಘಟಿಸಬೇಕಾಗಿದ್ದು, ದೇಶ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ. ಈಗಾಗಲೇ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಈ ನಿಟ್ಟಿನಲ್ಲಿ ಕೆಲಸ ಮಾಡುವ ಸಂಘಟನೆಗಳು ಸಂಪರ್ಕದಲ್ಲಿವೆ ಎಂದು ಶನಿವಾರ ನಗರದಲ್ಲಿ ತನ್ನನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಹೇಳಿದರು.
ಚುನಾವಣೆ ಮುಕ್ತಾಯ ತನಕ ರಾಜ್ಯದ ಎಲ್ಲಡೆ ಪ್ರವಾಸ ನಡೆಸಲಿದ್ದೇನೆ. ಅನಂತರ, ಯುವ ನಾಯಕರಾದ ಜಿಗ್ನೇಶ್ ಮೇವಾನಿ, ಕನ್ಣಯ್ಯ ಕುಮಾರ್, ಶೆಹ್ಲಾ ರಶೀದ್ ಮುಂತಾದವರನ್ನು ಕರೆದು ಚರ್ಚೆ ನಡೆಸಲಿದ್ದೇನೆ. ಹೊಸ ಚಿಂತನೆಯ, ಪ್ರಾಮಾಣಿಕ ಮತ್ತು ಸ್ಪಷ್ಟ ನಿಲುವು ಹೊಂದಿರುವ ಯುವ ನಾಯಕರು ಮುಂದೇ ಬರಬೇಕಾಗಿದೆ ಎಂದರು.
ಈಗಾಗಲೇ ತೆಲಂಗಾಣ ರಾಷ್ಟ್ರ ಸಮಿತಿಯ ಕೆ.ಚಂದ್ರಶೇಖರ್ ರಾವ್, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಬಿಜು ಜನತಾದಳ ನಾಯಕ ನವೀನ್ ಪಟ್ನಾಯಕ್, ನಟ ಕಮಲಹಾಸನ್ ಸೇರಿದಂತೆ ಹಲವರೊಡನೆ ಮಾತುಕತೆ ನಡೆಸಿದ್ದೇನೆ ಎಂದು ಪ್ರಾಕಶ್ ರೈ ಹೇಳಿದರು.
ಹಳೇ ಕಾಲದ ಚಿಂತನೆಗಳು ಇಂದಿನ ಜನರ ಗಮನ ಸೆಳೆಯಲು ವಿಫಲವಾಗುತ್ತಿದೆ. ಇಂದಿನ ಯುವ ಸಮೂಹದ ಬೇಡಿಕೆಗಳು ಭಿನ್ನವಾಗಿವೆ. ಹಳೇ ಕಾಲದ ಫ್ಯಾಸಿಸಂ ಮುಂತಾದ ಶಬ್ದಗಳು ಜನರಿಗೆ ಅರ್ಥ ಆಗುತ್ತಿಲ್ಲ. ಆದರೆ, ಈ ದೇಶದ ಜನರಿಗೆ ರಾಜಕೀಯ ವ್ಯವಸ್ಥೆಯ ವಿರುದ್ಧ ಅತೀವವಾದ ಅಸಹನೆ ಇದೆ. ಒಂದಲ್ಲ ಒಂದು ದಿನ ಅದು ಸ್ಪೋಟಗೊಳ್ಳುತ್ತದೆ. ಆಗ ರಾಜಕೀಯ ವ್ಯವಸ್ಥೆ ಬದಲಾಗಬಹುದು. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರ ನಡೆಯಲಿದೆ ಎಂದರು.
ತಾನು ಈಗ ಮಾಡುತ್ತಿರುವುದು ರಾಜಕೀಯವೇ. ಹಾಗೆಂದು ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಿಲ್ಲ ಎಂದು ಪ್ರಕಾಶ್ ರೈ ಸ್ಪಷ್ಟಪಡಿಸಿದ್ದಾರೆ.
Click this button or press Ctrl+G to toggle between Kannada and English