ಬೆಳ್ತಂಗಡಿ: ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು ಉಭಯ ಜಿಲ್ಲೆಗಳಲ್ಲಿ ಕಳೆದ ಬಾರಿಗಿಂತ ಎರಡು ಸ್ಥಾನ ಜಾಸ್ತಿ ಗಳಿಸಲಿದ್ದೇವೆ ಎಂದು ಇಂಧನ ಸಚಿವ ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಅವರು ಬುಧವಾರ ಬೆಳ್ತಂಗಡಿ ಅಂಬೇಡ್ಕರ್ ಭವನದ ಬಳಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ಮಾಜಿ ಸಚಿವ ಕೆ. ಗಂಗಾಧರ ಗೌಡ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕತರರ್ನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ ಪ್ರಣಾಳಿಕೆಯನ್ನು ಈಡೇರಿಸಿ, ನುಡಿದಂತೆ ನಡೆದ ಸರ್ಕಾರವಾಗಿದೆ. ಕಳೆದ 5 ವರ್ಷದ ಅವಧಿಯಲ್ಲಿ ಅಭಿವೃದ್ಧಿಯನ್ನೇ ಮೂಲಮಂತ್ರವಾಗಿ ಆಡಳಿತ ನಡೆಸಿದೆಯೇ ಹೊರತು ಭ್ರಷ್ಟಾಚಾರಕ್ಕೆ ಎಲ್ಲಿಯೂ ಅವಕಾಶ ನೀಡಿಲ್ಲ. ನಮ್ಮವರ ಮೇಲೆ ಬೊಟ್ಟು ಮಾಡಿ ತೋರಿಸಲು ಆಗಿಲ್ಲ ಎಂದರು.
ಮೇಧಾವಿ ಮುಖಂಡರಿಬ್ಬರು ಒಂದೇ ಪಕ್ಷದಲ್ಲಿರುವುದರಿಂದ ಪಕ್ಷಕ್ಕೆ ಭಾರೀ ಬಲ ಬಂದಂತಾಗಿದೆ. ಪಕ್ಷಕ್ಕೆ ಸೇರ್ಪಡೆಯಾದ ಹಿರಿಯರಾದ ಗಂಗಾಧರ ಗೌಡರಿಗೆ ಹಾಗು ಅವರ ಮಗನಿಗೆ ಕಾಂಗ್ರೆಸ್‌ನಲ್ಲಿ ಉಜ್ವಲ ಭವಿಷ್ಯವಿದೆ. ಮುಂದಿನ ದಿನಗಳಲ್ಲಿ ಮೋದಿಗೆ ಸೋಲಿನ ಸಂದೇಶ ಕೊಡಲು ಈ ಮೂಲಕ ಕಾಂಗ್ರೆಸ್ ಸಜ್ಜಾದಂತಾಗಿದೆ ಎಂದು ಹೇಳಿದರು.
ಕಾಂಗ್ರೆಸ್‌ಗೆ ಸೇರ್ಪಡೆಗೊಂಡು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕೆ. ಗಂಗಾಧರ ಗೌಡ ಅವರು, ಹೋರಾಟವೆಂಬುದು ನನ್ನ ಮೂಲ ಪ್ರವೃತ್ತಿಯಾಗಿದೆ. ನನ್ನ ಕೋಣೆಯಲ್ಲಿ ಇಂದಿಗೂ ಇಂದಿರಾಗಾಂಧಿ, ರಾಜೀವ್ ಗಾಂಧಿ, ಗುಂಡೂರಾವ್ ಅವರ ಫೋಟೊ ಇದೆ. ನಾನು ಅವರ ಆದರ್ಶಗಳನ್ನು ಮರೆಯದೆ ಪಾಲಿಸಿಕೊಂಡು ಬಂದಿದ್ದೇನೆ. ಬಿಜೆಪಿಗರಿಗೆ ಪಕ್ಷ ಸಂಘಟನೆ ಮಾಡಿ 60 ಸಾವಿರ ಮತ ಗಳಿಸಿಕೊಡಲು ನಾವು ಬೇಕಾಯಿತು. ಪಕ್ಷ ಸಂಘಟನೆ ಆದ ಮೇಲೆ ನಮ್ಮನ್ನು ತುಳಿಯುವ ಪ್ರಯತ್ನ ಬಿಜೆಪಿ ಪಕ್ಷದ್ದಾಗಿದೆ. ರಾಜಕೀಯ ನೈತಿಕತೆ ಇಲ್ಲದ, ಸಾಮಾಜಿಕ ಮೌಲ್ಯ ಇಲ್ಲದ ವ್ಯಕ್ತಿಯನ್ನು ಬಿಜೆಪಿ ಅಭ್ಯರ್ಥಿಯಾಗಿ ನಿಲ್ಲಿಸಿದೆ. ಮರ್ಯಾದಸ್ಥ ವ್ಯಕ್ತಿಗಳ ಗೆಲುವಾಗಬೇಕು ಎಂಬ ಉದ್ದೇಶ ಇದ್ದುಕೊಂಡು ಕಾಂಗ್ರೆಸ್ ಪಕ್ಷ ಸೇರಿದ್ದು, ಬೆಳ್ತಂಗಡಿಯ ಮರ್ಯಾದೆಯನ್ನು ಉಳಿಸಬೇಕಾದರೆ, ಮುಂಬರುವ ಅಪಾಯದಿಂದ ಪಾರಾಗಬೇಕಾದರೆ ಮತ್ತೆ ಬಂಗೇರರನ್ನು ಗೆಲ್ಲಿಸಬೇಕು ಎಂದರು.
ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಮೋದಿ ಸರಕಾರ ಅಧಿಕಾರಕ್ಕೆ ಬಂದು ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ತಳ್ಳಿದೆ. ಕಾಂಗ್ರೆಸ್ ಮುಕ್ತ ಎನ್ನುವ ಅವರ ಘೋಷಣೆ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದರು.
ಯುಪಿಎ ಸರಕಾರವಿದ್ದಾಗ ಪೆಟ್ರೋಲ್ ದರ ಏರಿದಾಗ ಪ್ರತಿಭಟನೆ ಮಾಡುಸುತ್ತಿದ್ದ ಬಿಜೆಪಿಯವರು ಈಗ ಯಾಕೆ ಸುಮ್ಮನಿದ್ದಾರೆ, ಬೆಲೆಗಳನ್ನು ಇಳಿಸುತ್ತೇವೆ ಎಂದ ಮೋದಿ ಸರಕಾರ ಇಳಿಸುವ ವಿಚಾರವಿರಲಿ ಮನಬಂದಂತೆ ಏರಿಸಿದ್ದಾರೆ. ಸಾಮಾನ್ಯ ಜನರು ಬದುಕುವುದೇ ಅಸಾಧ್ಯವಾಗಿದೆ ಎಂದರು.
ವೇದಿಕೆಯಲ್ಲಿ ಚಲನಚಿತ್ರ ನಟ ಸಾಧು ಕೋಕಿಲ, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ವಿಷ್ಣುನಾಥನ್, ಐವನ್ ಡಿಸೋಜಾ, ಸವಿತಾ ರಮೇಶ್, ಎ.ಸಿ. ಜಯರಾಜ್, ಶ್ರೀಧರ ಭಿಡೆ, ಸುಜಿತಾ ವಿ. ಬಂಗೇರ, ಧನಂಜಯ ಅಡ್ಪಂಗಾಯ, ಕೋಡಿಜಾಲು ಇಬ್ರಾಹಿಂ, ಕಣಚೂರು ಮೋನು, ಮಿಥುನ್ ರೈ, ನವೀನ್ ಡಿಸೋಜ, ರಾಮಚಂದ್ರ ಗೌಡ, ಪಿತಾಂಬರ ಹೇರಾಜೆ, ಸುಂದರ ಗೌಡ, ಲೋಕೇಶ್ವರಿ ವಿನಯಚಂದ್ರ, ಅಭಿನಂದನ್ ಹರೀಕ್ ಕುಮಾರ್ ಮತ್ತಿತರು ಇದ್ದರು.
ಈ ಸಂದರ್ಭ ನೂರಾರು ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಕೆ. ಗಂಗಾಧರ ಗೌಡರಿಗೆ ಪಕ್ಷದ ಧ್ವಜ ನೀಡಿ, ಸ್ವಾಗತಿಸಲಾಯಿತು. ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜಶೇಖರ ಅಜ್ರಿ ಸ್ವಾಗತಿಸಿದರು. ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ರೀನಿವಾಸ ಕಿಣಿ ವಂದಿಸಿದರು. ಕೇಶವ ಬೆಳಾಲು ಹಾಗೂ ಪ್ರಾನ್ಸಿಸ್ ವಿ.ವಿ. ಕಾರ್ಯಕ್ರಮ ನಿರ್ವಹಿಸಿದರು.
Click this button or press Ctrl+G to toggle between Kannada and English