ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆಯ ಬಿಸಿ ಈಗ ರಕ್ತದಾನಕ್ಕೂ ತಟ್ಟಿದ್ದು, ತುರ್ತು ಚಿಕಿತ್ಸೆಗೆ ರಕ್ತಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಕೊರತೆ ಕಂಡು ಬಂದಿದ್ದು , ತುರ್ತು ಚಿಕಿತ್ಸೆಗಾಗಿ ರೋಗಿಯ ಕುಟುಂಬಸ್ಥರು ಈಗ ರಕ್ತದಾನಿಗಳನ್ನು ಹುಡುಕುವಂತಾಗಿದೆ. ಕರಾವಳಿಯ ಎರಡೂ ಜಿಲ್ಲೆಗಳಲ್ಲಿ ಈ ಸಮಸ್ಯೆ ತಲೆದೋರಿದ್ದು, ರೋಗಿಯ ಸಂಬಂಧಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ರೀತಿಯಾಗಿ ರಕ್ತದ ಕೊರತೆಗೆ ಪ್ರಮುಖ ಕಾರಣ ಕರ್ನಾಟಕ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ. ಕಟ್ಟುನಿಟ್ಟಿನ ಆದೇಶ ಕಾರಣ ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಅಧಿಕಾರಿಗಳು ನೀತಿ ಸಂಹಿತೆಯನ್ನು ಜನಸಾಮಾನ್ಯರ ಮೇಲೆ ಹೇರಿ, ಒಂದು ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಡೆಯುವ ಶುಭ ಸಮಾರಂಭ, ಮದುವೆ ಕಾರ್ಯಕ್ರಮಗಳಿಗೂ ಆಯೋಗದಿಂದ ಅನುಮತಿ ಪಡೆಯಬೇಕೆಂದು ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದರು.
ಈ ರೀತಿಯಾಗಿ ಕಟ್ಟು ನಿಟ್ಟಿನ ನೀತಿ ಸಂಹಿತೆ ಜಾರಿಯಿಂದ ಸಂಘ ಸಂಸ್ಥೆಗಳು ರಕ್ತದಾನ ಕಾರ್ಯಕ್ರಮಗಳನ್ನು ಸಂಘಟಿಸದೆ ಜಿಲ್ಲೆಯ ಬ್ಲಂಡ್ ಬ್ಯಾಂಕ್ ಗಳಲ್ಲಿ ರಕ್ತದ ಕೊರತೆ ಕಂಡು ಬರಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಶೇ.30 ರಷ್ಟು ರಕ್ತದ ಕೊರತೆ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು , ಬೆಳ್ತಂಗಡಿ ಮತ್ತು ಮಂಗಳೂರು ನಗರದಲ್ಲಿ ಒಟ್ಟು 14 ಬ್ಲಂಡ್ ಬ್ಯಾಂಕ್ ಗಳಿವೆ. ಉಡುಪಿ ಜಿಲ್ಲೆಯ ಕುಂದಾಪುರ, ಮಣಿಪಾಲ ಮತ್ತು ಉಡುಪಿ ನಗರದಲ್ಲಿ ಒಟ್ಟು ಮೂರು ರಕ್ತ ಸಂಗ್ರಹ ಕೇಂದ್ರಗಳಿವೆ ಈ ಎಲ್ಲಾ ಕೇಂದ್ರಗಳಲ್ಲಿ ಶೇಕಡ 30 ರಷ್ಟು ರಕ್ತದ ಕೊರತೆ ಕಂಡು ಬಂದಿದೆ.
ಕ್ಯಾಂಪ್ ಮೂಲಕ ರಕ್ತ ಸಂಗ್ರಹ ಉಡುಪಿ ಜಿಲ್ಲಾಸ್ಪತ್ರೆಯ ಬ್ಲಡ್ ಬ್ಯಾಂಕ್ ನಲ್ಲಿ ದೈನಂದಿನ ತುರ್ತು ಅಗತ್ಯಕ್ಕೆ ಮಾತ್ರ ರಕ್ತ ಸಂಗ್ರಹವಿದ್ದು , 15 ದಿನದಿಂದ ಹೆಚ್ಚುವರಿಯಾಗಿ ರಕ್ತ ಸೇರ್ಪಡೆಗೊಳ್ಳದೆ ಇರುವುದರಿಂದ ಅವಶ್ಯಕತೆ ಇರುವ ಕಡೆ ರಕ್ತ ಸರಬರಾಜು ಮಾಡಲು ಸಮಸ್ಯೆಯಾಗುತ್ತಿದೆ. ಆಸ್ಪತ್ರೆಯ ವೈದ್ಯರು , ಸಿಬ್ಬಂದಿ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಮೂಲಕ ರಕ್ತದಾನಕ್ಕೆ ಮನವಿ ಮಾಡಿ ಕೊರತೆ ಭರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ ರೆಡ್ ಕ್ರಾಸ್ ಸಂಸ್ಥೆ ಅಲ್ಲಲ್ಲಿ ಸಣ್ಣ ಪುಟ್ಟ ಕ್ಯಾಂಪ್ ಗಳನ್ನು ನಡೆಸುವುದರ ಮೂಲಕ ರಕ್ತ ಸಂಗ್ರಹ ಮಾಡುತ್ತಿದೆ.
ಅನುಮತಿಗೆ ಕಿರಿಕಿರಿ ಪ್ರತಿವರ್ಷ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ರಕ್ತದ ಕೊರತೆ ಕಾಣುವುದು ಸಾಮಾನ್ಯ. ಆದರೆ ಈ ಬಾರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರೆಡ್ ಕ್ರಾಸ್, ಜೇಸಿ, ರೋಟರಿ ಸಂಸ್ಥೆಗಳಿಗೆ ಬೃಹತ್ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಕಾರ್ಯಕ್ರಮ ಆಯೋಜಿಸಲು ಅನುಮತಿಗಳ ಕಿರಿಕಿರಿ ಇರುವುದರಿಂದ ಸಂಘಟನೆಗಳ ಪ್ರಮುಖರು ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ. ವೈದ್ಯರು ವಿಧ್ಯಾರ್ಥಿಗಳ ಮೂಲಕ ಬ್ಲಡ್ ಬ್ಯಾಂಕ್ ಗೆ ಬಂದು ರಕ್ತದಾನ ಮಾಡಲು ಮನವಿ ಮಾಡಲಾಗುತ್ತಿದ್ದು, ಪ್ರಸ್ತುತ ತುರ್ತು ಸಂದರ್ಭದಲ್ಲಿ ರಕ್ತದಾನಿಗಳು ಕಾರ್ಯಪ್ರವೃತರಾಗಬೇಕಿದೆ.
Click this button or press Ctrl+G to toggle between Kannada and English