ಬೆಂಗಳೂರು: ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಘೋಷಿಸಿದರು. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ 1 ಲಕ್ಷ ರೂ. ಸಾಲ ಮನ್ನಾ ಹಾಗೂ ಸಹಕಾರಿ ಸಂಘಗಳಲ್ಲಿನ ಸಾಲ50 ಸಾವಿರದಿಂದ 1 ಲಕ್ಷಕ್ಕೆ ವಿಸ್ತರಣೆ ಮಾಡಲಾಗುತ್ತದೆ ಎಂದು ಘೋಷಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ಶಾಸಕ ವಿಜಯಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಬಳಿಕ ಸುರೇಶ್ ಕುಮಾರ್ ನೇತೃತ್ವದ ಸಮಿತಿ ರಚಿಸಿರುವ ಪ್ರಣಾಳಿಕೆಯನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಯಡಿಯೂರಪ್ಪ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಮನ್ನಾ ಮಾಡುವಂತೆ ಹೋದಲ್ಲೆಲ್ಲಾ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕ ಆಗ್ರಹಿಸಿ ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ನಾವು ಅಧಿಕಾರಕ್ಕೆ ಬಂದ ಕೂಡಲೇ ಕೇಂದ್ರದ ಕಡೆ ನೋಡದೇ ರಾಷ್ಟ್ರೀಕೃತ ಬ್ಯಾಂಕ್‌ಗಳ 1 ಲಕ್ಷದವರೆಗಿನ ರೈತರ ಸಾಲ ಮನ್ನಾ ಮಾಡಿ ಆದೇಶ ಹೊರಡುಸುತ್ತೇವೆ. ಜೊತೆಗೆ ಸಹಕಾರಿ ಸಂಘದ ಸಾಲ ಮನ್ನಾವನ್ನು 50 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಳ ಮಾಡುತ್ತೇನೆ. ಮೂರು ತಿಂಗಳ ಒಳಗೆ ನೇಕಾರರ 1 ಲಕ್ಷದವರೆಗಿನ ಸಾಲವನ್ನೂ ಮನ್ನಾ ಮಾಡುವುದಾಗಿ ಬಿಎಸ್‌ವೈ ಪ್ರಕಟಿಸಿದರು.
ರಾಜ್ಯದ 224 ಕ್ಷೇತ್ರಗಳ ಪ್ರವಾಸದ ವೇಳೆ ಕಂಡು ಬಂದ ಸಮಸ್ಯೆಗಳನ್ನು ಕ್ರೂಢೀಕರಿಸಿ ಪ್ರಣಾಳಿಕೆ ಸಿದ್ಧಪಡಿಸಿದ್ದೇವೆ. ಅದನ್ನು ಗೌರವದಿಂದ ನಾಡಿನ ಜನತೆಗೆ ಅರ್ಪಣೆ ಮಾಡುತ್ತಿದ್ದೇವೆ. ಮುಂದಿನ 5 ವರ್ಷ ರಾಜ್ಯದ ಅಭಿವೃದ್ಧಿಗೆ ಪೂರಕ ರೀತಿಯಲ್ಲಿ ಪ್ರಣಾಳಿಕೆ ಸಿದ್ಧಪಡಿಸಿದ್ದೇವೆ. ಜನರ ಆಶೋತ್ತರ ತಿಳಿದು ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ಮೋದಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಮಾರ್ಗಸೂಚಿ ಇದಾಗಿದೆ ಎಂದು ಪ್ರಣಾಳಿಕೆಯನ್ನು ಸಮರ್ಥಿಸಿಕೊಂಡರು.
ಇದು ಈಡೇರಿಸಲಾಗದ ಭರವಸೆಯ ಪಟ್ಟಿ ಅಲ್ಲ, ನಮ್ಮನ್ನು ಅಧಿಕಾರಕ್ಕೆ ತರುವುದು ಖಚಿತ, ಹಾಗಾಗಿ ಇದು ಹಣಕಾಸು ವಿವರ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕರ್ನಾಟಕದ ಯುವ ಜನತೆ ಭವಿಷ್ಯ, ಸರ್ವರಿಗೂ ಸಮಪಾಲು ಸಮಬಾಳು ಸಾಮಾಜಿಕ ನ್ಯಾಯ, ಮಕ್ಕಳ ಶಿಕ್ಷಣಕ್ಕೆ ಕಾಯಕಲ್ಪ, ಆರೋಗ್ಯ ಕರ್ನಾಟಕ, ಮೂಲಸೌಕರ್ಯ ವಿಸ್ತರಣೆ, ಆರ್ಥಿಕ ಔದ್ಯೋಗಿಕ ವಿಸ್ತರಣೆ, ನವ ಭಾರತಕ್ಕಾಗಿ ನವ ಬೆಂಗಳೂರು ಸೇರಿದಂತೆ ಹತ್ತು ಹಲವು ಅಂಶ ಒಳಗೊಂಡ ಪ್ರಣಾಳಿಕೆ ಇದಾಗಿದೆ. ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ ಉದ್ದೇಶದೊಂದಿಗೆ ಪ್ರಣಾಳಿಕೆ ರಚಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಚಿವ ಸುರೇಶ್ ಕುಮಾರ್, ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ರಾಜ್ಯ ಉಸ್ತುವಾರಿ ಮುರುಳೀಧರರಾವ್, ಸಂಸದ ಪಿ.ಸಿ ಮೋಹನ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English