ಮಂಗಳೂರು: ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ 30 ದಿನಗಳಲ್ಲಿ ಲೈಟ್‌ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ ನಾಮಕರಣವನ್ನು ಕಾರ್ಯಗತಗೊಳಿಸುವುದಾಗಿ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ನಾಗರಾಜ ಶೆಟ್ಟಿ ತಿಳಿಸಿದ್ದಾರೆ.
ಬಿಜೆಪಿ ಮಂಗಳೂರು ದಕ್ಷಿಣ ಪ್ರಚಾರ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದರು. ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲೇ ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ ನಾಮಕರಣವಾಗಿ, ರಾಜ್ಯ ಸರಕಾರದಿಂದ ಅಧಿಸೂಚನೆಯೂ ಆಗಿತ್ತು. ಹಾಗಿದ್ದರೂ ಶಾಸಕರಾಗಿದ್ದ ಜೆ.ಆರ್. ಲೋಬೋ ಅದಕ್ಕೆ ತಡೆ ತಂದು ಇದೀಗ ಪ್ರಕರಣ ನ್ಯಾಯಾಲಯದಲ್ಲಿ ಹೋರಾಟ ನಡೆಯುತ್ತಿದೆ. ಈ ನಡುವೆ ಬಿಜೆಪಿಯಲ್ಲಿದ್ದ ಶ್ರೀಕರ ಪ್ರಭು ಈ ರಸ್ತೆ ಬಗ್ಗೆ ಜೆ.ಆರ್.ಲೋಬೋ ಪರವಾಗಿ ಹೇಳಿಕೆ ನೀಡಿರುವುದಾಗಿ ಜನರಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಬಿಜೆಪಿ ವತಿಯಿಂದ ತಾನು ಈ ಬಗ್ಗೆ ಸ್ಪಷ್ಟನೆ ನೀಡುತ್ತಿರುವುದಾಗಿ ಅವರು ಹೇಳಿದರು.
ಮುಲ್ಕಿ ಸುಂದರರಾಮ ಶೆಟ್ಟರ ಹೆಸರಿನಲ್ಲಿ ಸರಕಾರದಿಂದ ಅಧಿಕೃತವಾಗಿ ರಸ್ತೆಯೊಂದಿಗೆ ನೀಡಲಾದ ಹೆಸರಿಗೆ ತಡೆ ತಂದಿರುವುದರಿಂದ ಜನತೆಗೆ ನೋವಾಗಿದೆ. ಈ ಬಗ್ಗೆ ಬಿಜೆಪಿ ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ತಾನು ಕೂಡಾ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಲಿತವನಾಗಿದ್ದು, ಆ ಸಂಸ್ಥೆಯ ಬಗ್ಗೆ ಅಪಾರ ಗೌರವವಿದೆ. ಕಾಲೇಜು ಈ ರಸ್ತೆಯಿಂದಾಗಿ ಗುರುತಿಸಬೇಕಾಗಿಲ್ಲ. ಹಾಗಾಗಿ ಸರಕಾರದಿಂದಲೇ ಮಾನ್ಯತೆ ದೊರಕಿರುವ ಮುಲ್ಕಿ ಸುಂದರ ಶೆಟ್ಟಿ ಹೆಸರನ್ನು ರಸ್ತೆಗೆ ನಾಮಕರಣ ಮಾಡಲು ಪಕ್ಷ ಬದ್ಧ ಎಂದು ಅವರು ಹೇಳಿದರು.
ಯಡಿಯೂರಪ್ಪ ನೇತೃತ್ವದ ಸರಕಾರ ಆಡಳಿತದಲ್ಲಿದ್ದ ವೇಳೆ ಮುಂದಿನ 20 ವರ್ಷಗಳ ಗುರಿಯಿಟ್ಟುಕೊಂಡು ನಗರಕ್ಕೆ ನೀರು ವಿತರಣೆ ಮಾಡುವ ಉದ್ದೇಶದಿಂದ ತುಂಬೆಯಲ್ಲಿ ನೂತನ ಅಣೆಕಟ್ಟು ನಿರ್ಮಾಣಕ್ಕೆ 40 ಕೋ.ರೂ. ವೆಚ್ಚದ ಯೋಜನೆ ಮಂಜೂರಾಗಿತ್ತು. ಅದರ ವೆಚ್ಚ ಅಂತಿಮವಾಗಿ 75.50 ಕೋಟಿ ರೂ.ಗೆ ಏರಿಕೆಯಾಗಿದ್ದು, ಹೆಚ್ಚುವರಿ ಆಗಲು ಯಾರು ಕಾರಣ, ಯಾಕಾಗಿ ಆಗಿದೆ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ ಎಂದು ನಾಗರಾಜ ಶೆಟ್ಟಿ ಹೇಳಿದರು.
ಎಡಿಬಿ ಯೋಜನೆಯಡಿ 307 ಕೋಟಿ ರೂ.ಗಳನ್ನು ವ್ಯಯಿಸಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮತ್ತು ಒಳಚರಂಡಿ ವ್ಯವಸ್ಥೆ ಮಾಡಲಾಗಿದೆ. ಇದೀಗ ಸ್ಥಳೀಯ ಶಾಸಕ ಜೆ.ಆರ್. ಲೋಬೋ, ನಗರಕ್ಕೆ 24X7 ಕುಡಿಯವ ನೀರು ಎಂದು ಹೇಳುತ್ತಿದ್ದಾರೆ. ಆದರೆ ಬಿಜೈನಲ್ಲಿರುವ ನನ್ನ ಮನೆಗೆ ಕಳೆದ ಎರಡು ವರ್ಷಗಳಿಂದ ನೀರಿಲ್ಲ. ಇಷ್ಟು ಕೋಟಿ ರೂ. ಖರ್ಚು ಮಾಡಿಯೂ ಏನೂ ಆಗಿಲ್ಲವೆಂದರೆ ಬೇಸರದ ಸಂಗತಿ ಎಂದವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಭಾಸ್ಕರ ಚಂದ್ರ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ಸುಧಾಕರ ಜೋಶಿ, ರಮೇಶ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English