ಮಂಗಳೂರು: “ಬಿಜೆಪಿಯಿಂದ ಧರ್ಮರಾಜಕಾರಣಕ್ಕೆ ಬಳಸಲ್ಪಡುವ ಹಿಂದುಳಿದ ವರ್ಗದ ಯುವಕರನ್ನು ರಾಜಕೀಯ ಪ್ರಾತಿನಿಧ್ಯದ ಪ್ರಶ್ನೆ ಬಂದಾಗ ಕ್ರಿಮಿನಲ್ ಗಳೆಂದು ದೂರ ಇಡಲಾಗುತ್ತದೆ. ಬಿಜೆಪಿ ಹಿರಿಯ ಮುಖಂಡ ಸತ್ಯಜಿತ್ ಸುರತ್ಕಲ್ ಇದಕ್ಕೊಂದು ಉದಾಹರಣೆ” ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಅವರು ಸಂಜೆ ಕೋಡಿಕಲ್ ನಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತಾಡುತ್ತಿದ್ದರು.
“ಬಿಜೆಪಿ ಹಿಂದುಳಿದ ವರ್ಗಗಳ ಯುವಕರಿಗೆ ಪ್ರಚೋದನೆ ಕೊಟ್ಟು ಅವರನ್ನು ಹಿಂಸಾ ರಾಜಕೀಯಕ್ಕೆ ಬಳಸಿಕೊಳ್ಳುತ್ತದೆ. ಧರ್ಮದ ಅಮಲಿನಲ್ಲಿ ಕೊಲೆ ಆರೋಪ ಹೊತ್ತು ಜೈಲು ಸೇರುವವರು, ಮತ್ತೊಂದೆಡೆ ಕೊಲೆಯಾಗಲ್ಪಡುವವರು ಹಿಂದುಳಿದ ವರ್ಗದ ಯುವಕರು. ಬಿಜೆಪಿಯ ಈ ರಾಜಕಾರಣಕ್ಕೆ ಬಲಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಸುರಿಸಿದ ಸತ್ಯಜಿತ್ ಸುರತ್ಕಲ್ ಪರಿಸ್ಥಿತಿ ಬಿಜೆಪಿಯಲ್ಲಿರುವ ಹಿಂದುವಳಿದ ವರ್ಗಗಳ ಯುವಕರಿಗೊಂದು ಪಾಠವಾಗಬೇಕು” ಎಂದು ಅವರು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಅವರು, “ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಶ್ರೀಮಂತಿಕೆಯ ಏಕೈಕ ಅರ್ಹತೆಯ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತದೆ. ಈ ಕಾರಣಕ್ಕಾಗಿಯೇ ಬಿಜೆಪಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ಭರತ್ ಶೆಟ್ಟರಿಗೆ ಟಿಕೆಟ್ ನೀಡಿದೆ. ಯಾವುದೇ ಹೋರಾಟದ ಹಿನ್ನೆಲೆ ಹೊಂದಿರದ ಮೊಯ್ದಿನ್ ಬಾವಾ ಕೂಡಾ ಹಣ ಬಲದಿಂದ ಟಿಕೆಟ್ ಪಡೆದುಕೊಂಡಿದ್ದಾರೆ. ಚುನಾವಣೆಗೆ ನಿಲ್ಲುವ ಬಿಲ್ಡರುಗಳು, ವ್ಯಾಪಾರಸ್ಥರ ಉದ್ದೇಶ ಜನರನ್ನು ಉದ್ಧಾರ ಮಾಡುವುದಲ್ಲ; ಬದಲಾಗಿ ಸ್ವತಃ ಅವರ ಭವಿಷ್ಯವನ್ನು ಅಭಿವೃದ್ಧಿ ಮಾಡುವುದು” ಎಂದು ಆರೋಪಿಸಿದರು.
“ಬಡವರ, ಜನಸಾಮಾನ್ಯರ ಸಂಕಷ್ಟದ ಅರಿವಿಲ್ಲದ ಜನ ಪ್ರತಿನಿಧಿಗಳಿಗೆ ಜನರ ಸಮಸ್ಯೆ ಪರಿಹಾರ ಮಾಡಲು ಸಾಧ್ಯವೇ?” ಎಂದು ಪ್ರಶ್ನಿಸಿದ ಮುನೀರ್ ಕಾಟಿಪಳ್ಳ, “ವೈಯಕ್ತಿಕ ಪರಿಚಯ, ಸಮುದಾಯ ಹಾಗೂ ಹಣ ಬಲ ನೋಡಿ ಮತ ಚಲಾಯಿಸಬೇಡಿ. ನಮ್ಮ ರಾಜಕೀಯ ಪಕ್ಷದ ಸಾಧನೆ, ನೀತಿ ಹಾಗೂ ಅಭ್ಯರ್ಥಿಯ ಅರ್ಹತೆ ನೋಡಿ ಮತದಾನ ಮಾಡಿ. ಇದರಿಂದ ಸಮಾಜದ ಬದಲಾವಣೆ ಸಾಧ್ಯವಾಗುತ್ತದೆ. ನನ್ನ ಹೋರಾಟದ ಹಿನ್ನೆಲೆಯನ್ನು ನೋಡಿ, ನನಗೆ ಮತ ನೀಡಿ” ಎಂದು ಮುನೀರ್ ಕಾಟಿಪಳ್ಳ ಸಭಿಕರಲ್ಲಿ ಮತ ಯಾಚಿಸಿದರು.
ಬಿ ಕೆ ಇಮ್ತಿಯಾಜ್, ಮನೋಜ್ ಕೋಡಿಕಲ್, ಅಶೋಕ್ ಶ್ರೀಯಾನ್, ಸ್ಯಾಮುವೆಲ್ ಟೈಟಟ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English