ಮಂಗಳೂರು: ಚುನಾವಣೆ ಬಂದಾಗ ದಲಿತ ಮತಗಳ ಜಪ ಮಾಡುವ ಕಾಂಗ್ರೆಸಿಗರು ನಿರಂತರವಾಗಿ ನಮ್ಮನ್ನು ವಂಚಿಸಿರುವ ಕಾರಣ ಈ ಬಾರಿ ಚುನಾವಣೆಯಲ್ಲಿ ಎಲ್ಲ ದಲಿತ ಬಂಧುಗಳು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ಬಿಜೆಪಿ ಎಸ್ ಸಿ. ಮೋರ್ಚಾ ಹೇಳಿದ್ದಾರೆ.
ದಲಿತ ಅಭಿವೃದ್ದಿಗೆ ನಾವು ಕೆಲಸ ಮಾಡಿದ್ದೇವೆ ಎಂದು ತೋರಿಸಿಕೊಳ್ಳುವ ಕಾಂಗ್ರೆಸ್ ಬಿ.ಎಸ್.ಯಡಿಯೂರಪ್ಪ ಸರಕಾರವಿದ್ದಾಗ ಶಿಲಾನ್ಯಾಸ ಮಾಡಿರುವ ಅಂಬೇಡ್ಕರ್ ಭವನ ಯೋಜನೆಯನ್ನು ನೆನೆಗುದಿಗೆ ಹಾಕಿದೆ. ಇದು ಖಂಡಿತವಾಗಿ ದಲಿತ ವಿರೋಧಿ ನೀತಿ.ಇಂತಹವರಿಗೆ ಮತ ಕೇಳುವ ಹಕ್ಕು ಎಲ್ಲಿದೆ ಎಂದು ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಸ್. ವಸಂತ್‌ಕುಮಾರ್ ಪತ್ರಿಕಾಗೋಷ್ಠಿಯಲ್ಲಿಂದು ವಿವರಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಮೇಯರ್ , ಉಪಮೇಯರ್ ಹುದ್ದೆಯನ್ನು ದಲಿತರಿಗೆ ನೀಡಿದ್ದರು. ಕಾಂಗ್ರೆಸ್ ಯಾಕಾಗಿ ನೀಡಿಲ್ಲ. ಅಧಿಕಾರ ಬಂದಾಗ ಬೇರೆಯವರು , ಮತ ವಿಚಾರ ಬಂದಾಗ ದಲಿತರು ಬೇಕು ಎನ್ನುವುದಾದರೆ ನಾವು ಈ ಬಾರಿ ಬಿಜೆಪಿಯನ್ನು ಗೆಲ್ಲಿಸುತ್ತೇವೆ ಎಂದು ಅವರು ಹೇಳಿದರು.
ಅಲ್ಪಸಂಖ್ಯಾಕ ಕ್ರಿಶ್ಚಿಯನ್ ಬಂಧುಗಳಿಗೆ ಕಾಂಗ್ರೆಸ್ ಸರಕಾರ ಜಮೀನು ಹಾಗೂ ಜಾಗಕ್ಕೆ ಪಟ್ಟ ಹಕ್ಕನ್ನು ನೀಡಿದೆ. ಅದೂ ಕೂಡಾ ಕಾನೂನು ಪ್ರಕಾರ ನಡೆದಿಲ್ಲ ಎನ್ನುವ ಆರೋಪಿ ಕೇಳಿಬಂದಿದೆ. ಯಾಕಾಗಿ ದಲಿತ ಬಂಧುಗಳಿಗೆ ಈ ಸವಲತ್ತು ನೀಡಲಿಲ್ಲ. ಮನೆ ಕೊಡುತ್ತೇವೆ ಎಂದು ದಲಿತರಿಂದ ಅರ್ಜಿಯೊಂದಕ್ಕೆ 500ರೂ.ರಿಂದ 1 ಸಾವಿರ ರೂ. ವಸೂಲಿ ಮಾಡಿದ್ದಾರೆ. ತರಾತುರಿಯಲ್ಲಿ ಒಂದಿಷ್ಟು ಮಂದಿಗೆ ಆರ್‌ಟಿಸಿ ಕೊಟ್ಟು ಉಳಿದವರಿಗೆ ಮೋಸ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು , ಯಾಕೆ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಮುಂದೆ ಬರಲಿಲ್ಲ. ಬಿಜೆಪಿ ಓರ್ವ ದಲಿತ ನಾಯಕರನ್ನು ರಾಷ್ಟ್ರಪತಿ ಹುದ್ದೆ ನೀಡಿ ಗೌರವಿಸುತ್ತದೆ ಎಂದಾದರೆ , ಕಾಂಗ್ರೆಸ್ ಇದುವರೆಗೆ 70 ವರ್ಷಗಳಿಂದ ಮಾಡಿರುವುದು ಬರೀ ಮೋಸದ ನಾಟಕವಲ್ಲದೇ ಮತ್ತೇನು? ಕಾಂಗ್ರೆಸಿನ ಎಲ್ಲ ದಲಿತ ವಿರೋಧಿ ನೀತಿಗಳಿಗೆ ಈ ಬಾರಿ ತಕ್ಕ ಉತ್ತರ ದೊರೆಯಲಿದೆ ಎಂದು ಅವರು ಹೇಳಿದರು.
Click this button or press Ctrl+G to toggle between Kannada and English