ಸುಳ್ಯ: ಸುಳ್ಯ ಬಿಜೆಪಿ ಮಂಡಲ ವತಿಯಿಂದ ಮಂಗಳವಾರ ಸಂಜೆ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ಬೃಹತ್ ಚುನಾವಣಾ ಪ್ರಚಾರ ಸಭೆ ನಡೆಯಿತು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ, ಕರ್ನಾಟಕದಲ್ಲಿ ಗೂಂಡಾಗಿರಿ, ಗೋಹತ್ಯೆ, ಅಸುರಕ್ಷತೆ, ಜೆಹಾದಿ ಕೃತ್ಯಗಳನ್ನು ಮಟ್ಟ ಹಾಕಿ ಆದರ್ಶದ ಆಳ್ವಿಕೆಯ ಪ್ರತೀಕವಾಗಿರುವ ರಾಮರಾಜ್ಯ ನಿರ್ಮಾಣಕ್ಕಾಗಿ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ ಎಂದು ಕರೆ ನೀಡಿದ ಅವರು, ಧರ್ಮ, ಜಾತಿ ವಿಘಟನೆಯ ಮೂಲಕ ಸಮಾಜವನ್ನು ಒಡೆಯುವ ಕಾಂಗ್ರೆಸ್ ಸರಕಾರವನ್ನು ಕಿತ್ತೂಗೆಯುವಂತೆ ಅವರು ಮನವಿ ಮಾಡಿದರು.
ದ.ಕ. ಜಿಲ್ಲಾ ಚುನಾವಣಾ ಪ್ರಭಾರಿ ಕೆ. ಸುರೇಂದ್ರನ್ ಮಾತನಾಡಿ, ಕೇರಳ, ಪಂಜಾಬ್ ಚುನಾವಣೆಗಳಲ್ಲಿ ಇವಿಎಂ ಬಗ್ಗೆ ಮಾತನಾಡದ ಕಾಂಗ್ರೆಸ್ ಕರ್ನಾಟಕದಲ್ಲಿ ಬಿಜೆಪಿ ಗೆದ್ದರೆ ಇವಿಎಂ ಸರಿ ಇಲ್ಲ ಅನ್ನಬಹುದು. ಕರ್ನಾಟಕ ಚುನಾವಣೆ ಮತ ಎಣಿಕೆ ಅನಂತರ ರಾಹುಲ್ ಗಾಂಧಿ, ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ ಎಂದು ಟೀಕಿಸಿದರು.
ಶಾಸಕ ಎಸ್. ಅಂಗಾರ ಮಾತನಾಡಿ, ಸುಳ್ಯದ 110 ಕೆವಿ ಸಬ್‌ಸ್ಟೇಷನ್ ಬಗ್ಗೆ ಸದನದಲ್ಲಿ 24 ಬಾರಿ ಸಚಿವ ಡಿಕೆಶಿ ಅವರನ್ನು ನಾನು ಪ್ರಶ್ನಿಸಿದ್ದೆ. ಆದರೂ ಅಂಗಾರ ಅವರ ಮುಖವನ್ನೇ ಕಂಡಿಲ್ಲ ಎಂಬ ಡಿಕೆಶಿ ಹೇಳಿಕೆ ಅವರ ಸಣ್ಣತನವನ್ನು ತೋರಿಸುತ್ತದೆ ಎಂದ ಅವರು, ಕಾಂಗ್ರೆಸ್ ಮುಖಂಡರು ನನ್ನಲ್ಲಿ ಬೇನಾಮಿ ಆಸ್ತಿ ಇದೆ ಎಂದು ಆಪಾದಿಸಿದ್ದಾರೆ. ಅವರು ಅದನ್ನು ತೋರಿಸಿದರೆ, ತತ್‌ಕ್ಷಣವೇ ಬಿಟ್ಟು ಕೊಡುವುದಾಗಿ ಸವಾಲೆಸೆದರು.
ಸುಳ್ಯಕ್ಕೆ 3 ಗಂಟೆ ಹೊತ್ತಿಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಯೋಗಿ ಆದಿತ್ಯನಾಥ್ ಅವರನ್ನು ಕೊಡಿಯಾಲಬೈಲು ಮಹಾತ್ಮಾಗಾಂಧಿ ಪ್ರೌಢಶಾಲೆಯ ಆವರಣದಲ್ಲಿನ ಹೆಲಿಪ್ಯಾಡ್‌ನಲ್ಲಿ ಶಾಸಕ ಅಂಗಾರ ಸಹಿತ ಬಿಜೆಪಿ ಮುಖಂಡರು ಸ್ವಾಗತಿಸಿದರು. ಕೆವಿಜಿ ಆಯುರ್ವೇದ ಕಾಲೇಜಿಗೆ ತೆರಳಿ ಕೆಲ ಕಾಲ ವಿಶ್ರಾಂತಿ ಪಡೆದು ಆಸ್ಪತ್ರೆ ವೀಕ್ಷಿಸಿದರು. ಕೆವಿಜಿ ಸಂಸ್ಥೆಯ ಡಾ| ಕೆ.ವಿ. ಚಿದಾನಂದ ಅವರ ಬಳಿ ಸಂಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭ ಬಿಜೆಪಿ ಮಾಧ್ಯಮ ವಕ್ತಾರ ಕೇಶವ ಭಟ್ ಮುಳಿಯ ಉಪಸ್ಥಿತರಿದ್ದರು. ಸಂಜೆ 4.20ರ ಹೊತ್ತಿಗೆ ಸಮಾವೇಶದ ಸ್ಥಳಕ್ಕೆ ಆಗಮಿಸಿದ್ದರು.
ಯೋಗಿ ಆದಿತ್ಯನಾಥ ಆಗಮನ ಹಿನ್ನೆಲೆಯಲ್ಲಿ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿತ್ತು. ಕೆಲ ಹೊತ್ತು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಗರದ ನಾನಾ ಭಾಗದಲ್ಲಿ ಅರೆಸೇನಾ ಪಡೆ, ವಿಶೇಷ ಭದ್ರತಾ ದಳ, ನೂರಾರು ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ಮಾತನಾಡಿದರು. ವೇದಿಕೆಯಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ ವಳಲಂಬೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹೆಗ್ಡೆ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ಜಿ.ಪಂ. ಉಪಾಧ್ಯಕ್ಷ ಕಸ್ತೂರಿ ಪಂಜ, ಎಪಿಎಂಸಿ ಅಧ್ಯಕ್ಷ ದೇರಣ್ಣ ಗೌಡ, ಎಸ್.ಎನ್. ಮನ್ಮಥ ಉಪಸ್ಥಿತರಿದ್ದರು.
ಚುನಾವಣಾ ಉಸ್ತುವಾರಿ ಎ.ವಿ. ತೀರ್ಥರಾಮ ಸ್ವಾಗತಿಸಿ, ಮಂಡಲ ಕಾರ್ಯದರ್ಶಿ ಸುಬೋಧ ಶೆಟ್ಟಿ ಮೇನಾಲ ವಂದಿಸಿದರು. ನಗರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ನಿರೂಪಿಸಿದರು. ಮಾಧ್ಯಮ ಪ್ರಮುಖ್ ಮುಳಿಯ ಕೇಶವ ಭಟ್ ಸಹಕರಿಸಿದರು.
ಕುರುಂಜಿ ವೆಂಕಟರಮಣ ಗೌಡ ಅವರನ್ನು ಸ್ಮರಿಸಿದ ಯೋಗಿ ಆದಿತ್ಯನಾಥ್, ಹತ್ತಾರು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸುಳ್ಯವನ್ನು ಶಿಕ್ಷಣದ ಕಾಶಿಯನ್ನಾಗಿಸಿರುವ ಅವರ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿಸಿದರು. ಆದಿಚುಂಚನಗಿರಿ ಕ್ಷೇತ್ರದ ಸಾಮಾಜಿಕ, ಶೈಕ್ಷಣಿಕ ಕೊಡುಗೆಗಳನ್ನು ಯುಪಿ ಮುಖ್ಯಮಂತ್ರಿ ಕೊಂಡಾಡಿದರು.
ಮಧ್ಯಾಹ್ನ ಕುಮಟಾ ಪ್ರವಾಸ ಮುಗಿಸಿದ ಅನಂತರ ಗೋಣಿಕೊಪ್ಪ, ವಿರಾಜಪೇಟೆ ಕಾರ್ಯಕ್ರಮಕ್ಕೆ ಹೆಲಿಕಾಪ್ಟರ್‌ನಲ್ಲಿ ತೆರಳಬೇಕಿದ್ದ ಯೋಗಿ ಆದಿತ್ಯನಾಥ ಅವರು ಮಳೆಯ ಕಾರಣದಿಂದ ಅಲ್ಲಿನ ಪ್ರವಾಸ ಮೊಟಕುಗೊಳಿಸಿ ಸುಳ್ಯಕ್ಕೆ ಆಗಮಿಸಿದ್ದರು. ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಮಳೆ ಆರಂಭಗೊಳ್ಳುವ ಮುನ್ಸೂಚನೆ ಅರಿತು ಯೋಗಿ ಆದಿತ್ಯನಾಥ್ ಅವರು ಭಾಷಣ ಕೊನೆಗೊಳಿಸಿ, ಅನಂತರ ಮಂಗಳೂರು ಮೂಲಕ ಲಕ್ನೋಗೆ ತೆರಳಿದರು.
Click this button or press Ctrl+G to toggle between Kannada and English