ಮಂಗಳೂರು: ಕರಾವಳಿಯಲ್ಲಿಕಾಂಗ್ರೆಸ್ ಧೂಳಿಪಟವಾಗಿದೆ. ಬಿಜೆಪಿಯ ದಿಗ್ವಿಜಯವನ್ನು ದುಷ್ಕರ್ಮಿಗಳ ದಾಳಿಗೆ ಬಲಿಯಾದ ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ್ , ದೀಪಕ್ ರಾವ್ ಮಡಿಲಿಗೆ ಅರ್ಪಣೆ ಮಾಡುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಕರಾವಳಿಯಲ್ಲಿ ಜನಾಶೀರ್ವಾದ ಬಿಜೆಪಿಗೆ ದೊರೆತಿದೆ. ಜಿಲ್ಲೆಯ 8 ಕ್ಷೇತ್ರಗಳ ಪೈಕಿ 7 ರಲ್ಲಿ ಬಿಜೆಪಿ ಆಭ್ಯರ್ಥಿಗಳು ಜಯಗಳಿಸಿದ್ದಾರೆ. ದುರಾಡಳಿತ, ಭ್ರಷ್ಟಾಚಾರ, ಕೋಮುಭಾವನೆ ಕೆರಳಿಸುವ ಗೂಂಡಾಗಿರಿ ರಾಜಕಾರಣದಿಂದ ಜನರು ಬೇಸತ್ತಿದ್ದರು.
ಈ ಹಿನ್ನೆಲೆಯಲ್ಲಿ ಕರಾವಳಿಯ ಜನರು ಕಾಂಗ್ರೆಸ್ ಪಕ್ಷವನ್ನು ತಿಸ್ಕರಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ಚುನಾವಣಾ ಫಲಿತಾಂಶ 2018: ಬಿಜೆಪಿ ಗೆದ್ದವರ ಪಟ್ಟಿ ಬಿಜೆಪಿ ಜಯಕ್ಕೆ ಕಾರಣರಾದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ನಳಿನ್ ಕುಮಾರ್ ಕಟೀಲ್, ಜನ ಹಾಕಿದ ಮತಕ್ಕೆ ಚ್ಯುತಿಯಾಗದಂತೆ ಆಡಳಿತ ನಡೆಸಲಾಗುವುದು ಎಂದು ಹೇಳಿದರು. ಕೇಂದ್ರದ ಜನಪರ ಯೋಜನೆಗಳು ಕಾಂಗ್ರೆಸ್ ನ ನಿರ್ಲಕ್ಷ್ಯದಿಂದಾಗಿ ಕುಂಠಿತವಾಗಿದ್ದವು ಎಂದು ಆರೋಪಿಸಿದ ಅವರು ಬಿಜೆಪಿ ಶಾಸಕರ ಮೂಲಕ ಕೇಂದ್ರದ ಯೋಜನೆಗಳನ್ನು ಪೂರ್ಣರೀತಿಯಲ್ಲಿ ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದರು.
ಸೋಲಿನ ಬಳಿಕ ಇ ವಿ ಎಂ ನಲ್ಲಿ ಸಮಸ್ಯೆಯಿದೆ ಎಂದು ಕಾಂಗ್ರೆಸ್ ಅಭ್ಯರ್ಥಿಗಳು ಆರೋಪಿಸಿದ್ದ ವಿಚಾರವಾಗಿ ಪ್ರತಿಕ್ರಿಯಿಸಿದ ನಳಿನ್ , ಮಂಗಳೂರು ಕ್ಷೇತ್ರದಲ್ಲಿ ಹಾಗೂ ಬಾದಾಮಿಯಲ್ಲಿ ಏನಾಗಿದೆ? ಅಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಅಲ್ಲಿ ಏನಾದರೂ ಬೇರೆ ಇವಿಎಂ ಮಷಿನ್ ಬಂದಿದೆಯೇ ಎಂದು ನೋಡಿ ಹೇಳಲಿ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸರಕಾರ ರಚನೆಯ ಮಾತುಕತೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಒಂದು ದಿನ ಕಾದು ನೋಡಿದಲ್ಲಿ ಎಲ್ಲಾ ತಿಳಿಯುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಈ ಚುನಾವಣೆ ಕಾಂಗ್ರೆಸ್ ಮುಕ್ತ ಕರ್ನಾಟಕ, ಕಾಂಗ್ರೆಸ್ ಮುಕ್ತ ಕರಾವಳಿ ಸಂದೇಶ ನೀಡಿದೆ. ಈ ಚುನಾವಣೆಯಲ್ಲಿ ಪೇಜ್ ಪ್ರಮುಖರು ಮಹತ್ವದ ಪಾತ್ರ ವಹಿಸಿದ್ದರಿಂದ ಗೆಲುವು ಸಾಧ್ಯವಾಗಿದೆ ಎಂದು ಅವರು ಹೇಳಿದರು.
Click this button or press Ctrl+G to toggle between Kannada and English