ಬೆಂಗಳೂರು: ರಾಣಿ ಬೆನ್ನೂರು ಕ್ಷೇತ್ರದಲ್ಲಿ ಕೆಪಿಜೆಪಿ ಅಭ್ಯರ್ಥಿ ವಿರುದ್ಧ ಸೋಲು ಅನುಭವಿಸಿರುವ ಮಾಜಿ ಸ್ಪೀಕರ್, ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ.ಕೋಳಿವಾಡ ಅವರು ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬುಧವಾರ ತೀವ್ರ ವಾಗ್ಧಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೋಳಿವಾಡ ಅವರು ಏಕವಚನದಲ್ಲೇ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ‘ಪಕ್ಷ ಈ ಸ್ಥಿತಿಗೆ ಬರಲು ಇವನೇ ಸಿದ್ದರಾಮಯ್ಯ ಕಾರಣ. ಸರ್ವಾಧಿಕಾರಿ ಧೋರಣೆ ಅವನದ್ದು’ ಎಂದರು.
‘ಹಿಂದೇ ಪರಮೇಶ್ವರ್ ಸೋಲಿಗೂ ಇವನೇ ಕಾರಣ , ಕಳೆದ ಬಾರಿ ನನ್ನನ್ನು ,ಇನಾಮ್‌ದಾರ್‌ನನ್ನು ಸೋಲಿಸಲು ಬಹಳ ಪ್ರಯತ್ನ ಮಾಡಿದ ಆಗಲಿಲ್ಲ.ಈ ಬಾರಿ ಟಿಕೆಟ್ ತಡೆಯಲು ಪ್ರಯತ್ನ ಮಾಡಿದ. ನೇರವಾಗಿ ರಾಹುಲ್ ಗಾಂಧಿ ಜೊತೆ ಮಾತನಾಡಿ ಟಿಕೆಟ್ ಪಡೆದೆ ಆದರೆ ಕೆಪಿಜೆಪಿಯ ಶಂಕರ್‌ಗೆ ಬೆಂಬಲ ನೀಡಿ ನಾನು ಸೋಲುವಂತೆ ಮಾಡಿದ’ ಎಂದರು.
‘ಈ ಮನುಷ್ಯನಿಂದ ಕಾಂಗ್ರೆಸ್ ಪಕ್ಷಕ್ಕೆ ಉಪಯೋಗ ಆಗುವುದಿಲ್ಲ.ಅವನಿಗೆ ಪಕ್ಷದಲ್ಲಿ ಮಹತ್ವ ಕೊಟ್ಟರೆ ಪಕ್ಷದ ಅವನತಿಗೆ ಕಾರಣ ಆಗುತ್ತದೆ. ಜೆಡಿಎಸ್‌ಗೆ ಮೋಸ ಮಾಡಿ ಬಂದ’ ಎಂದರು.
‘ನನ್ನ ಮೇಲೆ ಕ್ರಮ ಕೈಗೊಳ್ಳಲು ಅವನ ಅಪ್ಪನಾಣೆ ಸಾಧ್ಯವಿಲ್ಲ. ನಾನು ಹುಟ್ಟು ಕಾಂಗ್ರೆಸಿಗ’ ಎಂದು ಕಿಡಿ ಕಾರಿದರು.
‘ಕುಮಾರಸ್ವಾಮಿಗೆ ಅಧಿಕಾರ ಕೊಡಲು ಸಿದ್ದರಾಮಯ್ಯ ಬಿಡುವುದಿಲ್ಲ. ಅವನನ್ನು ದೂರ ಇಡಬೇಕು’ ಎಂದರು.
‘ಏನೇನೆಲ್ಲಾ ಮಾಡಾಕ್ ಹೋದ,ಏನೆಲ್ಲಾ ಮಾಡ್ದ,ಇಲ್ಲಸಲ್ಲದ್ದೆಲ್ಲಾ ಹುಟ್ಟು ಹಾಕಿದ. ಮಾಡಿ ಅನುಭವಿಸಿದ ಈ ಮನುಷ್ಯನ ನಡವಳಿಕೆ ಅಹಂ, ಇವನ ಭಾಷಣ ಗೆಲ್ಲಿಸಬೇಕಿತ್ತಲ್ಲ. ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತ, ಬಾದಾಮಿಯಲ್ಲಿ ಕೆಲವೇ ಮತಗಳ ಅಂತರದಿಂದ ಗೆದ್ದ, ನಾಚಿಗೆಯಾಗಬೇಕು’ ಎಂದು ಕಿಡಿ ಕಾರಿದರು.
‘ಅವನದ್ದು ಕಾಂಗ್ರೆಸ್ ರಕ್ತ ಅಲ್ಲ, ಇಂತಹ ಮನುಷ್ಯನನ್ನು ಕಾಂಗ್ರೆಸ್‌ನಲ್ಲಿ ಉಳಿಸಿಕೊಳ್ಳಬಾರದು, ಲೋಕಸಭೆ ಚುನಾವಣೆಗೆ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಹೋಗಬೇಕು’ ಎಂದರು.
Click this button or press Ctrl+G to toggle between Kannada and English