ಬೆಂಗಳೂರು: ನಾಳೆಯೇ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತು ಪಡಿಸಲು ಸೂಚಿಸಿರುವ ಸುಪ್ರೀಂಕೋರ್ಟ್ ಆದೇಶವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. ತೀರ್ಪು ನೀಡಿರುವ ನ್ಯಾಯಮೂರ್ತಿಗಳನ್ನು ಅಭಿನಂದಿಸುತ್ತೇನೆ. ದೇಶದ ಇತಿಹಾಸದಲ್ಲಿ ಇದು ಮೈಲಿಗಲ್ಲಾಗುವ ತೀರ್ಪು ಎಂದು ಸಿದ್ದರಾಮಯ್ಯ ಹೇಳಿದರು.
ಸುಪ್ರೀಂಕೋರ್ಟ್ ಆದೇಶ ಹೊರ ಬರುತ್ತಿದ್ದಂತೆ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್ ನಗರದ ಕೆಪಿಪಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ತೀರ್ಪಿನ ಮೂಲಕ ನ್ಯಾಯಾಧೀಶರು ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆ ಮಾಡುವ ಕರ್ತವ್ಯ ನಿರ್ವಹಿಸಿದ್ದಾರೆ. ಸುಪ್ರೀಂ ನ್ಯಾಯಾಧೀಶರಿಗೆ ಧನ್ಯವಾದ ತಿಳಿಸುತ್ತೇನೆ. ಸಂವಿಧಾನದಲ್ಲಿ ರಾಜ್ಯಪಾಲರ ಪಾತ್ರ ಮಹತ್ವದ್ದು, ಅವರು ಸಂವಿಧಾನ ಎತ್ತಿ ಹಿಡಿಯಬೇಕು. ರಾಜ್ಯಪಾಲರು ಯಾರು ಪರವಾಗಿಯೂ ಇರಬಾರದು ಎಂದರು.
ಸರ್ಕಾರ ರಚನೆ ವಿಷಯದಲ್ಲಿ ರಾಜ್ಯಪಾಲರು ಸಂವಿಧಾನದ ವಿಧಿ-ವಿಧಾನ ಗಾಳಿಗೆ ತೂರಿದ್ದರು. ಬಿಜೆಪಿ ಸರ್ಕಾರದ ಆಳಂತೆ ನಡೆದುಕೊಂಡಿದ್ದರು. ನಾನು ರಾಜ್ಯಪಾಲರ ನಡೆಯನ್ನು ಖಂಡಿಸುತ್ತೇನೆ. ಯಾರೂ ಕೂಡ ಪ್ರಜಾಪ್ರಭುತ್ವದ ಕೊಲೆ ಮಾಡಬಾರದು ಎಂದು ತಿಳಿಸಿದರು.
ಮೋದಿ ಹಾಗೂ ಅಮಿತ್ ಶಾ ಹಿಟ್ಲರ್‌ನ ಪಳೆಯುಳಿಕೆಗಳು ಎಂದು ಕಿಡಿಕಾರದ ಸಿದ್ದರಾಮಯ್ಯ, ನಮ್ಮೊಂದಿಗೆ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಇಬ್ಬರು ಪಕ್ಷೇತರ ಶಾಸಕರು ಕೂಡ ಇದ್ದಾರೆ. ನಮ್ಮಲ್ಲಿ 117 ಸಂಖ್ಯಾಬಲವಿದೆ ಎಂದು ಸ್ಪಷ್ಟಡಿಸಿದರು.
ಮುಂದವರಿದು,ನಮ್ಮ ಶಾಸಕರಿಗೆ ಯಡಿಯೂರಪ್ಪ,ಜನಾರ್ದನ ರೆಡ್ಡಿ, ಶ್ರೀರಾಮುಲು ಯಾರೊಂದಿಗೆ ಮಾತನಾಡಿದ್ದಾರೆ ಎಂಬ ಎಲ್ಲಾ ದಾಖಲೆ ಇದೆ. ಅದನ್ನು ಶೀಘ್ರವೇ ಬಿಡುಗಡೆ ಮಾಡಿತ್ತೇವೆ. ಆನಂದ ಸಿಂಗ್‌ರನ್ನು ಬಿಜೆಪಿಯವರು ಕಿಡ್ನಾಪ್ ಮಾಡಿದ್ದಾರೆ. ಕೇಂದ್ರ ಸರ್ಕಾರ ಆನಂದ್ ಸಿಂಗ್‌ರನ್ನು ಕೂಡಿ ಹಾಕಿದೆ. ಇಡಿ ಮತ್ತು ಆದಾಯ ತೆರಿಗೆ ಇಲಾಖೆ ಬಳಿಸಿಕೊಂಡು ಆನಂದ್ ಸಿಂಗ್‌ರನ್ನು ಬಂಧನದಲ್ಲಿಟ್ಟಿದ್ದಾರೆ. ಅಮಿತ್ ಶಾ ಎಲ್ಲ ರಾಜ್ಯಗಳಲ್ಲಿಯೂ ಇದೆ ತಂತ್ರ ಅನುಸರಿಸಿದ್ದಾರೆ. ಆದರೆ, ರಾಜ್ಯದಲ್ಲಿ ಶಾ ಆಟ ನಡೆಯುದಿಲ್ಲ. ಆನಂದ್ ಸಿಂಗ್ ನಮಗೆ ಮತ ಹಾಕುತ್ತಾರೆ ಎಂದರು.
ಇದಕ್ಕೂ ಮನ್ನ ಮಾತನಾಡಿ ಗುಲಾಂ ನಬಿ ಆಜಾದ್, ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಕೃತಜ್ಞತೆ. ಅವರ ತೀರ್ಪಿನಿಂದ ಪ್ರಜಾತಂತ್ರ ಉಳಿದಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರ ನಿರ್ಧಾರಕ್ಕೆ ಹಿನ್ನಡೆ ಆಗಿದೆ. ನ್ಯಾಯಸಮ್ಮತವಾಗಿ ನಡೆಯದೆ ದೇಶದ ಕಾನೂನನ್ನು ಉಲ್ಲಂಘನೆ ಮಾಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಅತಿದೊಡ್ಡ ಪಕ್ಷವಾಗಿದೆ, ಆದರೆ ಬಹುಮತ ಇಲ್ಲ. ನಮ್ಮ ಹಾಗೂ ಜೆಡಿಎಸ್ ಸೇರಿ 117 ಸ್ಥಾನಗಳು ಇದೆ. ಸರ್ಕಾರ ರಚನೆಗೆ ಬೇಕಾದ ಸಂಖ್ಯೆ ನಮ್ಮಲ್ಲಿದೆ. ಮಣಿಪುರ, ಗೋವಾ, ಮೇಘಾಲಯದಲ್ಲಿ ಸಂಖ್ಯಾಬಲ ಹೊಂದಿರುವವರಿಗೆ ಸರ್ಕಾರ ರಚನೆ ಮೂಡುವ ನಿಯಮ ಇವರೇ ಜಾರಿಗೆ ತಂದಿದ್ದರು. ಅದೇ ಮಾದರಿಯಲ್ಲಿ ನಮಗೆ ಅವಕಾಶ ನೀಡಿ ಎಂದು ಎಲ್ಲಾ ಶಾಸಕರ ಪಟ್ಟಿ ನೀಡಿದ್ದೆವು. ಆದರೆ, ಕೇವಲ 104 ಇದ್ದರೂ ಬಿಜೆಪಿಗೆ ರಾಜ್ಯಪಾಲರು ಆಹ್ವಾನ ನೀಡಿದ್ದರು ಎಂದು ಗುಲಾಂ ನಬಿ ಆಜಾದ್ ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೇ, ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಹುಮತ ಸಾಬೀತು ಪಡಿಸಲು ರಾಜ್ಯಪಾಲರು 15 ದಿನಗಳ ಕಾಲಾವಕಾಶ ನೀಡಿದ್ದರು. ಪ್ರಜಾತಂತ್ರ ವ್ಯವಸ್ಥೆ ಹಾಳು ಮಾಡುವ ಹುನ್ನಾರ ಮಾಡಿದ್ದರು. ಇದೀಗ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಪ್ರಜಾತಂತ್ರ ಹಾಗೂ ಸಂವಿಧಾನವನ್ನು ಎತ್ತಿ ಹಿಡಿದಿದೆ ಎಂದರು.
Click this button or press Ctrl+G to toggle between Kannada and English