ಬಿಜೆಪಿ ಸರ್ಕಾರ ಉಳಿಯುತ್ತಾ? ಉರುಳುತ್ತಾ?.. ಗುಟ್ಟು ಬಿಟ್ಟುಕೊಡದ ನಾಯಕರು!

6:04 PM, Friday, May 18th, 2018
Share
1 Star2 Stars3 Stars4 Stars5 Stars
(No Ratings Yet)
Loading...

kumarswamyಬೆಂಗಳೂರು: ರಾಜ್ಯದಲ್ಲಿ ನಾಳೆ ಸಂಜೆ ಏನಾಗಲಿದೆ ಎನ್ನುವ ಕುತೂಹಲ ರಾಜ್ಯದ ಜನತೆಯಲ್ಲಿ ಮನೆ ಮಾಡಿದೆ. ಹೀಗೆಯೇ ಆಗಬಹುದು ಎಂದು ಊಹಿಸುವ ಅವಕಾಶ ಕೂಡ ಸಿಗದ ರೀತಿ ರಾಜ್ಯದ ಮೂರೂ ಪಕ್ಷದ ನಾಯಕರು ಗುಟ್ಟು ಬಿಟ್ಟುಕೊಡುತ್ತಿಲ್ಲ.

ಒಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಹೈದರಾಬಾದ್‍ನಲ್ಲಿರುವ ತಮ್ಮ ಶಾಸಕರ ಭೇಟಿಗೆ ಆಪ್ತ ಶಾಸಕರ ಜತೆ ತೆರಳಿದ್ದಾರೆ. ಇನ್ನೊಂದೆಡೆ ದೇವೇಗೌಡರು ಕುಟುಂಬ ಸಮೇತ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ಬಿಜೆಪಿ ಹಿರಿಯ ನಾಯಕರೆಲ್ಲಾ ಸೇರಿ ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಸಭೆ ನಡೆಸುತ್ತಿದ್ದಾರೆ. ಎಲ್ಲಿಯೂ ನಾಳೆ ಏನಾಗಲಿದೆ ಎನ್ನುವ ಆತಂಕ, ಗೊಂದಲ, ಬೇಸರ, ಸಿಟ್ಟು ಅಥವಾ ಅನುಮಾನಗಳು ಯಾರ ಮುಖದಲ್ಲೂ ಕಾಣಿಸುತ್ತಿಲ್ಲ.

ಆದರೆ ನಾಳೆ ಸಂಜೆಯೇ ಗಡುವು ನೀಡಿದ್ದರಿಂದ ಬಿಜೆಪಿ ನಾಯಕರಲ್ಲಿ ಕೊಂಚ ಗೊಂದಲ, ಆತುರತೆ ಕಂಡು ಬರುತ್ತಿದೆ. ಆದರೆ ಇಂದು ಮಾತನಾಡಿದ ಬಹುತೇಕ ಎಲ್ಲಾ ನಾಯಕರೂ ಆತ್ಮವಿಶ್ವಾಸದಿಂದ ಕೂಡಿದ್ದು, ಸರ್ಕಾರ ಭದ್ರಪಡಿಸಿಕೊಂಡಿದ್ದೇವೆ ಎನ್ನುವ ರೀತಿಯಲ್ಲೇ ಮಾತನಾಡಿದ್ದಾರೆ.

ಬಿಜೆಪಿ ನಾಯಕರು ಸದ್ಯ ಒಂದಿಷ್ಟು ಆತುರದಲ್ಲಿರುವಂತೆ ಕಾಣಿಸುತ್ತಿದ್ದು, ಸರ್ಕಾರ ಉಳಿಸಿಕೊಳ್ಳುವ ವಿಚಾರದಲ್ಲಿ ದೃಢವಾಗಿದ್ದಾರೆ ಎಂದು ಭಾಸವಾಗುತ್ತಿದೆ. ಸದ್ಯ ಇವರ ಮುಂದೆ ಆಯ್ಕೆಯೂ ಇದ್ದು, ನಾಳೆ 8 ಮಂದಿ ಶಾಸಕರು ತಮ್ಮ ಪರವಾಗಿ ಮತ ಚಲಾಯಿಸುವಂತೆ ಮಾಡಿಕೊಳ್ಳಬೇಕಾಗುತ್ತದೆ. ಬಹುತೇಕ ಮೂರೂ ಪಕ್ಷಗಳೂ ವಿಪ್ ಜಾರಿ ಮಾಡುತ್ತವೆ. ಇಬ್ಬರು ಪಕ್ಷೇತರರನ್ನು ಸೆಳೆಯುವುದು ಕಷ್ಟವಾಗಲ್ಲ. ಆದರೆ ಉಳಿದ ಶಾಸಕರನ್ನು ಸೆಳೆಯುವುದು ಸುಲಭವಲ್ಲ. ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಪಕ್ಷದಿಂದ ಅಮಾನತು ಆಗಬೇಕಾಗುತ್ತದೆ.

ಜೆಡಿಎಸ್ ಅಥವಾ ಕಾಂಗ್ರೆಸ್‍ನಿಂದ ಆರು ಶಾಸಕರನ್ನು ಕರೆತರುವುದು ಸುಲಭವಲ್ಲ. ಬಿಜೆಪಿ ಪರ ಇವರು ಮತದಾನ ಮಾಡಬೇಕು ಇಲ್ಲವೇ ಅವರು ಸದನದೊಳಗೆ ಬಂದು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸದಂತೆ ನೋಡಿಕೊಳ್ಳಬೇಕಾಗಿದೆ. ಇನ್ನೊಂದು ಆಯ್ಕೆ ಎಂದರೆ 14 ಶಾಸಕರನ್ನು ತಮ್ಮತ್ತ ಸೆಳೆದು ಅವರು ನಾಳೆ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸದಂತೆ ನೋಡಿಕೊಳ್ಳಬೇಕು. ಆಗ ಸಂಖ್ಯಾಬಲದ ಮೇಲೆ 104 ಶಾಸಕರದ್ದೇ ವಿಶ್ವಾಸಮತ ಗಳಿಸಲಿದ್ದಾರೆ. ಆದರೆ ಬಿಜೆಪಿ ಯಾವ ವಿಧದ ಲೆಕ್ಕಾಚಾರ ಮಾಡಿದೆ ಎನ್ನುವುದು ತಿಳಿಯುತ್ತಿಲ್ಲ.

ಕಾಂಗ್ರೆಸ್ ನಾಯಕರು ಕೂಡ ನಿರಾಳರಾಗಿದ್ದು, ಸಿದ್ದರಾಮಯ್ಯ ಬಹಳ ಆತ್ಮವಿಶ್ವಾಸದಿಂದಲೇ ಹೈದರಾಬಾದ್‍ಗೆ ತೆರಳಿದ್ದಾರೆ. ನಮ್ಮ ಶಾಸಕರು ಕುದುರೆ ವ್ಯಾಪಾರಕ್ಕೆ ಒಳಗಾಗಿಲ್ಲ. ನಾವು ಸಂತೋಷಗೊಂಡಿದ್ದೇವೆ. ಪ್ರಜಾಪ್ರಭುತ್ವ ಉಳಿದಿದೆ. ನ್ಯಾಯಾಂಗದ ಮೇಲೆ ವಿಶ್ವಾಸ ಹೆಚ್ಚಿದೆ ಎಂದು ಹೇಳಿಕೊಂಡಿದ್ದಾರೆ.

ಇನ್ನೊಂದೆಡೆ ಜೆಡಿಎಸ್ ಕೂಡ ಆತ್ಮವಿಶ್ವಾಸದಿಂದ ಇದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸಂಭ್ರಮದಿಂದ ಇದ್ದು, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಕುಟುಂಬ ಸದಸ್ಯರೊಂದಿಗೆ ಕುಳಿತು ಮಾತುಕತೆ ನಡೆಸುತ್ತಿದ್ದಾರೆ.

ಒಟ್ಟಾರೆ ಯಾವ ಪಕ್ಷ ಎಷ್ಟರಮಟ್ಟಿಗೆ ನಾಳಿನ ದಿನದ ಸನ್ನಿವೇಶಗಳ ಬಗ್ಗೆ ನಿಖರತೆ ಹೊಂದಿವೆ ಎನ್ನುವುದೇ ಇನ್ನೂ ಅರಿವಾಗುತ್ತಿಲ್ಲ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English