ಚಿಕ್ಕಮಗಳೂರು: ಮುಖ್ಯಮಂತ್ರಿ ಸ್ಥಾನವನ್ನು ಅಷ್ಟು ಸುಲಭವಾಗಿ ನಿಭಾಯಿಸಲು ಸಾಧ್ಯವಿಲ್ಲ ಎಂಬುದು ನನಗೆ ಗೊತ್ತಿದೆ. ನನ್ನ ಜೀವನದಲ್ಲಿ ಇದೊಂದು ದೊಡ್ಡ ಸವಾಲು ಎಂದು ನಿಯೋಜಿತ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಶೃಂಗೇರಿಯಲ್ಲಿ ಮಾತನಾಡಿದ ಅವರು, ಜನತೆಯಲ್ಲಿಯೂ ಯಾರು ರಾಜ್ಯ ಆಳುತ್ತಾರಾ ಎಂಬ ಅನುಮಾನ ಇದೆ. ತಾಯಿ ಶಾರದಾಂಬೆಯ ಆಶೀರ್ವಾದದಿಂದ ಎಲ್ಲವೂ ಸುಗಮ ಆಗುತ್ತೆ ಎಂಬ ನಂಬಿಕೆ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಡಿಸಿಎಂ ಸ್ಥಾನಕ್ಕೆ ಪೈಪೋಟಿ ವಿಚಾರದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಈ ಬಗ್ಗೆ ಸಂಜೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಸ್ವತಂತ್ರ ಸರ್ಕಾರ ಕೊಟ್ಟರೆ ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತೇನೆ ಎಂದು ರಾಜ್ಯದ ಜನತೆಗೆ ಹೇಳಿದ್ದೆ. ಆದ್ರೆ ಜನ ನಮ್ಮನ್ನು ತಿರಸ್ಕಾರ ಮಾಡಿದ್ದಾರೆ. ಇದನ್ನ ನೋಡಿದ್ರೆ ಸಾಲ ಮನ್ನಾ ಮಾಡೋದು ಜನರಿಗೆ ಇಷ್ಟ ಇಲ್ಲ ಅನ್ಸುತ್ತೆ. ಈ ಬಗ್ಗೆ ಇನ್ನೂ ಕೆಲವರು ಕೀಳಾಗಿ ಮಾತಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚಿಕ್ಕಮಗಳೂರಿನ ಐದಕ್ಕೆ ಐದು ಕ್ಷೇತ್ರದಲ್ಲೂ ನಮ್ಮನ್ನ ಸೋಲಿಸಿದ್ದೀರಿ. ನನಗೆ ಸ್ವತಂತ್ರ ಸರ್ಕಾರ ಕೊಟ್ಟಿದ್ರೆ 24 ಗಂಟೆಯಲ್ಲೇ ಸಾಲ ಮನ್ನಾ ಮಾಡುತ್ತಿದ್ದೆ. ಈಗ ಸಮ್ಮಿಶ್ರ ಸರ್ಕಾರ ರಚಿಸುತ್ತಿದ್ದೇವೆ. ಆ ಪಕ್ಷದವರನ್ನೂ ನಾನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಎರಡೂ ಪಕ್ಷಗಳೂ ಒಟ್ಟಿಗೆ ಹೋಗಬೇಕು. ಜನತೆಗೆ ಕೊಟ್ಟ ಮಾತನ್ನ ಉಳಿಸಿಕೊಳ್ಳಬೇಕು. ನಾನು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಜನ ಸ್ವಲ್ಪ ದಿನ ಕಾಯಬೇಕು ಎಂದು ಹೆಚ್‌ಡಿಕೆ ತಿಳಿಸಿದರು.
ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ರೇವಣ್ಣ ಅವರೊಂದಿಗೆ ಹೆಚ್‌ಡಿಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಹಾಗೆಯೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪತ್ನಿ ಚನ್ನಮ್ಮ ಅವರೊಂದಿಗೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಹಿಂದಿರುಗಿದರು.
Click this button or press Ctrl+G to toggle between Kannada and English