ಬೆಂಗಳೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮುಂದಿನ ದಿನಗಳಲ್ಲಿ ಸದನದಲ್ಲಿ ಏನಾದರು ಗೊಂದಲ ಇಲ್ಲವೆ, ಮೈತ್ರಿ ಪಕ್ಷದಲ್ಲಿ ಅಪಸ್ವರ ಕಂಡು ಬಂದರೆ ನೆರವಿಗೆ ಇರಲಿ ಎಂಬ ಕಾರಣಕ್ಕೆ ಜೆಡಿಎಸ್ ಪಕ್ಷ ಸ್ಪೀಕರ್ ಸ್ಥಾನ ತಮಗಿರಲಿ ಎಂಬ ಲೆಕ್ಕಾಚಾರದಲ್ಲಿ ಬಿಗಿ ಪಟ್ಟು ಹಿಡಿದಿದೆ ಎಂದು ತಿಳಿದುಬಂದಿದೆ.
ಸಂಪುಟ ಸ್ಥಾನ ಹಂಚಿಕೆ ಗೊಂದಲದಲ್ಲಿರುವ ಕಾಂಗ್ರೆಸ್‌ಗೆ ಸ್ಪೀಕರ್ ಸ್ಥಾನ ಬಿಟ್ಟುಕೊಡಬೇಕೇ ಅಥವಾ ಬೇಡವೇ ಎನ್ನುವ ಹೊಸ ಗೊಂದಲ ಈಗ ಆರಂಭವಾಗಿದೆ. ಎರಡು ದಿನದೊಳಗೆ ನೂತನ ಸ್ಪೀಕರ್ ಪ್ರಮಾಣವಚನ ನಡೆಯಬೇಕಿರುವುದರಿಂದ ಆದಷ್ಟು ಬೇಗ ಸ್ಪೀಕರ್ ಗೊಂದಲ ಬಗೆಹರಿಯಬೇಕಿದೆ. ಆದರೆ ಈಗ ಸಂಪುಟ ಸ್ಥಾನ ಹಂಚಿಕೆ ಗೊಂದಲದಲ್ಲಿರುವ ಕಾಂಗ್ರೆಸ್ಸಿಗೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಜೆಡಿಎಸ್ ಸ್ಪೀಕರ್ ಹುದ್ದೆ ನಮ್ಮದೇ ಎಂದು ಶಾಸಕರಲ್ಲಿ ಹಿರಿಯ ಹಾಗೂ ಅನುಭವಿಗಳಾದವರ ಹುಡುಕಾಟದಲ್ಲಿ ತೊಡಗಿದೆ. ಸರ್ಕಾರ ರಚನೆಯಾದಾಗ 78 ಶಾಸಕರನ್ನು ಹೊಂದಿರುವ ಕಾಂಗ್ರೆಸ್‌ಗೆ ಸ್ಪೀಕರ್ ಸ್ಥಾನ ಸಿಗಬಹುದೆಂಬ ಮಾತುಗಳು ಕೇಳಿ ಬಂದಿದ್ದವು.
ಸ್ಪೀಕರ್ ಸ್ಥಾನಕ್ಕೆ ಸದನದ ಹಿರಿಯ ಸದಸ್ಯರಾದ ಆರ್.ವಿ. ದೇಶಪಾಂಡೆ ಮತ್ತು ರಮೇಶ್ ಕುಮಾರ್ ಹೆಸರು ಮುಂಚೂಣಿಯಲ್ಲಿದೆ. ಈಗ ಜೆಡಿಎಸ್ ಸ್ಪೀಕರ್ ಸ್ಥಾನಕ್ಕೆ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಮುಂದೆ ಯಾರು ಸ್ಪೀಕರ್ ಆಗಲಿದ್ದಾರೆ ಎನ್ನುವ ಕುತೂಹಲಕ್ಕೆ ಎರಡು ದಿನಗಳಲ್ಲಿ ತೆರೆಬೀಳಲಿದೆ.
Click this button or press Ctrl+G to toggle between Kannada and English