ರೈತರ ಸಾಲ ಮನ್ನಾಕ್ಕೆ ಸಮಯ ಬೇಕು, ಸಿಎಂ ಆಗುತ್ತಿರುವ ಬಗ್ಗೆ ಸಂಪೂರ್ಣ ತೃಪ್ತಿ ಇಲ್ಲ: ಹೆಚ್‌ಡಿಕೆ

11:44 AM, Wednesday, May 23rd, 2018
Share
1 Star2 Stars3 Stars4 Stars5 Stars
(No Ratings Yet)
Loading...

kumarswamy-speechಮೈಸೂರು: ಪ್ರಮಾಣವಚನಕ್ಕೂ ಮುನ್ನ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಾಡದೇವತೆ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದರು. ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ಇವತ್ತಿನ ಪರಿಸ್ಥಿತಿಯಲ್ಲಿ ಸಿಎಂ ಆಗುತ್ತಿರುವುದು ನನಗೆ ಸಂಪೂರ್ಣ ತೃಪ್ತಿ ತಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮನಸ್ಸಿನಲ್ಲಿ ಒಂದಷ್ಟು ನೋವು ತುಂಬಿಕೊಂಡೇ ಅಧಿಕಾರ ಸ್ವೀಕರಿಸುತ್ತಿದ್ದೇನೆ. ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕೆಂಬುದು ನನ್ನ ಆಸೆಯಾಗಿತ್ತು ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಇಂದು ಜಿ. ಪರಮೇಶ್ವರ್ ನನ್ನೊಂದಿಗೆ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಸಚಿವ ಸಂಪುಟದ ಸದಸ್ಯರ ಪ್ರಮಾಣವಚನ ನಂತರ ಗೊತ್ತಾಗಲಿದೆ. ರೈತರ ಸಾಲ ಮನ್ನಾ ವಿಚಾರದಲ್ಲಿ ಯೂ ಟರ್ನ್, ರೈಟ್ ಟರ್ನ್ ಯಾವುದೂ ಇಲ್ಲ. ಸಾಲ ಮನ್ನಾಕ್ಕೆ ಸಮಯ ಬೇಕು ಅಷ್ಟೆ. ಸಮ್ಮಿಶ್ರ ಸರ್ಕಾರವಾದ ಕಾರಣ ಕಾಂಗ್ರೆಸ್ ಪಕ್ಷವನ್ನು ವಿಶ್ವಾಸಕ್ಕೆ ಪಡೆದು ಆಡಳಿತ ಮಾಡಬೇಕಾಗಿದೆ. ರೈತರ ಸಾಲ‌ ಮನ್ನಾ ಬಗ್ಗೆ ಗಂಭೀರ ಚಿಂತನೆ ಆರಂಭವಾಗಿದೆ, ರೈತರು ಹಾಗೂ ರೈತ ಮುಖಂಡರು ತಾಳ್ಮೆ‌ ವಹಿಸಬೇಕು. ನಾನು ನೀಡಿದ ವಾಗ್ದಾನಗಳನ್ನು ಈಡೇರಿಸದೆ ಇರುವುದಿಲ್ಲ ಎಂದು ಭರವಸೆ ನೀಡಿದರು.

ಕುಮಾರಸ್ವಾಮಿ ಜನರ ಮಧ್ಯೆ‌ ಬೆಳೆದವನು, ಅವರಿಗೋಸ್ಕರನೇ ಅಧಿಕಾರಕ್ಕೆ ಬಂದಿರೋದು ಎಂಬ ನಂಬಿಕೆ ಇರಲಿ. ರೈತರ ಪರಿಸ್ಥಿತಿ ಕೇವಲ ಸಾಲ‌ ಮನ್ನಾಕ್ಕೆ ಸೀಮಿತಗೊಳಿಸುವುದಿಲ್ಲ. ಇಸ್ರೇಲ್ ಮಾದರಿಯ ಕೃಷಿ ನೀತಿ ಸೇರಿದಂತೆ ಹಲವಾರು ಸುಧಾರಿತ ಕೃಷಿ ಯೋಜನೆ ತರುವ ಆಲೋಚನೆ ಇದೆ. ನನ್ನ ಕಾರ್ಯವೈಖರಿ ಎಂದಿನಂತೆಯೇ ಇರುತ್ತದೆ.

ಸಮ್ಮಿಶ್ರ ಸರ್ಕಾರದಲ್ಲಿ ಇತಿಮಿತಿಗಳ ನಡುವೆ ಉತ್ತಮ ಆಡಳಿತ ನೀಡುವೆ. ಜನಸಾಮಾನ್ಯರಿಗೆ ಸಿಎಂ ಮನೆ ಬಾಗಿಲು ಸದಾ ತೆರೆದಿರುತ್ತದೆ. ಜನಸಾಮಾನ್ಯರಿಗೆ‌ ನೇರವಾಗಿ ಸ್ಪಂದಿಸುವುದೇ ನನ್ನ ಉದ್ದೇಶ. ರೈತ ಮುಖಂಡರು ಜಾತಿ ನೆಲೆಯಲ್ಲಿ ಆಲೋಚನೆ ಮಾಡಬಾರದು ಎಂದರು.

ಇನ್ನು ಇಂದು ಬಿಜೆಪಿಯವರು ಕರಾಳ ದಿನಾಚರಣೆ ಮಾಡಲಿ, ಅಭ್ಯಂತರವಿಲ್ಲ. ವಿಶ್ವಾಸಮತ ಮುಗಿದ ಮೇಲೆ ರಾಜಕಾರಣ ಬದಿಗಿಟ್ಟು ರಾಜ್ಯ ಕಟ್ಟುವ ಕೆಲಸದಲ್ಲಿ ಅವರು ಭಾಗಿಯಾಗಲಿ ಎಂದರು. ಇನ್ನು ಕುಮಾರಸ್ವಾಮಿ ಭೇಟಿ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English