ಬಳ್ಳಾರಿ: ಈಗಾಗಲೇ ಕಾಂಗ್ರೆಸ್‌ನ 20ಕ್ಕೂ ಹೆಚ್ಚು ಶಾಸಕರು ತೀವ್ರ ಅಸಮಾಧಾನಗೊಂಡಿದ್ದು, ಬಹುಮತ ಸಾಬೀತು ದಿನವೇ ಜೆಡಿಎಸ್-ಕಾಂಗ್ರೆಸ್‌ನ ಸರ್ಕಾರ ಬಿದ್ದು ಹೋಗಲಿದೆ ಎಂದು ಶಾಸಕ ಸೋಮಶೇಖರ ರೆಡ್ಡಿ ಹೇಳಿದರು.
ಪಕ್ಷದ ಕಾರ್ಯಕರ್ತರೊಂದಿಗೆ ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ರಾಜ್ಯದಲ್ಲಿ ಅಪವಿತ್ರ ಮೈತ್ರಿಯ ಸರ್ಕಾರ ರಚನೆ ಆಗುವುದನ್ನು ವಿರೋಧಿಸಿ ಕರಾಳ ದಿನಾಚರಣೆ ಹಿನ್ನೆಲೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ಅವರು, ಕಾಂಗ್ರೆಸ್ ಸರ್ಕಾರದ ಜಾಯಮಾನವೆಂದರೆ ಇನ್ನೊಬ್ಬರ ಕಾಲೆಳೆಯುವುದಾಗಿದೆ. ಈ ಹಿಂದೆ ದೇವೇಗೌಡರಿಗೆ ಬೆಂಬಲ ನೀಡಿ ಪ್ರಧಾನಿ ಮಾಡಿ ನಂತರ ಕಾಲೆಳೆದು ಕೆಳಗಿಳಿಸಲಾಯಿತು. ಈಗ ಕುಮಾರಸ್ವಾಮಿಯವರಿಗೆ ಬೆಂಬಲ ನೀಡಿ ಸಮ್ಮಿಶ್ರ ಸರ್ಕಾರ ರಚನೆ ಮಾಡುತ್ತಿದ್ದು, ಕಾಂಗ್ರೆಸ್ ತನಗೆ ಬೇಕಾದಾಗ ಇವರ ಕಾಲನ್ನು ಹಿಡಿದು ಕೆಡವಲಿದೆ.
ಅವರಪ್ಪನ ಆಣೆಯಾಗಿ ಮುಖ್ಯಮಂತ್ರಿಯಾಗಲ್ಲ ಎಂದ ಅವರು, ಈಗ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಲು ಹೊರಟಿರುವುದು ಸೂಜಿಗದ ಸಂಗತಿಯಾಗಿದೆ. ಈಗ ಜೆಡಿಎಸ್‌ಗೆ ತಲೆಬಾಗಿರುವ ಕಾಂಗ್ರೆಸ್ ಪೂರ್ಣಾವಧಿ ಸರ್ಕಾರ ನಡೆಸಲು ಅವಕಾಶ ಕೊಡುವುದಿಲ್ಲ. ಮಧ್ಯದಲ್ಲಿಯೇ ಈ ಸರ್ಕಾರ ಬೀಳಲಿದೆ. ಆದಾಗದಿದ್ದರೆ ನಾನು ರಾಜಕೀಯ ಜೀವನದಿಂದಲೇ ನಿವೃತ್ತಿ ಪಡೆಯುವೆ ಎಂದು ಹೇಳುವ ಮೂಲಕ ಸೋಮಶೇಖರ ರೆಡ್ಡಿ ಅಚ್ಚರಿ ಮೂಡಿಸಿದರು.
Click this button or press Ctrl+G to toggle between Kannada and English