ಹೊಸದಿಲ್ಲಿ :”ದೇಶದ ಜನರು ಖರೀದಿಸುವ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 25 ರೂ.ಗಳನ್ನು ಕೇಂದ್ರ ಸರಕಾರ ಬಾಚಿ ಕೊಳ್ಳುತ್ತಿದೆ ಮತ್ತು ತನ್ನ ಖಜಾನೆಯನ್ನು ಅದು ತುಂಬಿಸಿಕೊಳ್ಳುತ್ತಿದೆ” ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಆರೋಪಿಸಿದ್ದಾರೆ.
ದಿಲ್ಲಿಯಲ್ಲಿಂದು ಪೆಟ್ರೋಲ್ ಲೀಟರ್ ದರ 30 ಪೈಸೆಯಷ್ಟು ಏರಿ 77 ರೂ. ಗಡಿ ದಾಟಿದ ಸಂದರ್ಭದಲ್ಲಿ ಚಿದಂಬರಂ ಅವರು ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಟ್ವಿಟರ್ ವಾಗ್ಧಾಳಿ ಆರಂಭಿಸಿದರು.
ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿದಾಗ ಕೇಂದ್ರ ಸರಕಾರ ಜನರು ಖರೀದಿಸುವ ಪ್ರತೀ ಲೀಟರ್ ಇಂಧನ ದರದಲ್ಲಿ 15 ರೂ.ಗಳನ್ನು ಕೇಂದ್ರ ಸರಕಾರ ಉಳಿಸುತ್ತದೆ. ಇದಲ್ಲದೆ ಕೇಂದ್ರ ಸರಕಾರ ಪ್ರತೀ ಲೀಟರ್ ಪೆಟ್ರೋಲ್‌ಗೆ 10 ರೂ.ಹೆಚ್ಚುವರಿ ತೆರಿಗೆಯನ್ನು ಹೇರುತ್ತದೆ. ಎಂದರೆ ಕೇಂದ್ರ ಸರಕಾರ ಜನರ ಹಣದಿಂದ 25 ರೂ. ಬಾಚಿಕೊಳ್ಳುತ್ತದೆ.
ನಿಜಕ್ಕಾದರೆ ಈ ಹಣ ಸಾಮಾನ್ಯ ಬಳಕೆದಾರನಿಗೆ ಸೇರಿದ್ದು; ಹೀಗಿರುವಾಗ ಸರಕಾರ ಪೆಟ್ರೋಲ್ ದರವನ್ನು 25ರೂ. ನಷ್ಟು ಕಡಿತ ಮಾಡಬಹುದು; ಆದರೆ ಅದು ಮಾಡುವುದಲ್ಲಿ; ಸರಕಾರ ಪೆಟ್ರೋಲ್ ದರವನ್ನು 1 ರೂ., 2 ರೂ. ಕಡಿಮೆ ಮಾಡುವ ಮೂಲಕ ಜನರನ್ನು ವಂಚಿಸುತ್ತಿದೆ’ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಚಿದಂಬರಂ ಅವರು ಕಾಂಗ್ರೆಸ್ ಸರಕಾರದಲ್ಲಿ ಹಣಕಾಸು ಸಚಿವರಾಗಿದ್ದಾಗ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ (2008ರಲ್ಲಿ) ಬ್ಯಾರಲ್ ಗೆ 147.3 ಡಾಲರ್‌ಗಳ ಗರಿಷ್ಠ ಮಟ್ಟವನ್ನು ತಲುಪಿತ್ತು. ಈಗ ಮೋದಿ ಸರಕಾರದ ಆಡಳಿತೆಯ ವೇಳೆ ಅದು 88 ಡಾಲರ್ ಇದೆ. ಚಿದಂಬರಂ ಕಾಲದಲ್ಲಿ ಪೆಟ್ರೋಲ್ ದರಗಳು ಈಗಿನದ್ದಕ್ಕಿಂತ ಸ್ವಲ್ಪ ಕಡಿಮೆ ಇದ್ದವು.
ದೇಶದಲ್ಲಿ ಪೆಟ್ರೋಲ್, ಡೀಸಿಲ್ ಬೆಲೆಗಳು ಒಂದೇ ಸಮನೆ ಏರುತ್ತಿರುವುದು ವಿರೋಧ ಪಕ್ಷಗಳಿಗೆ ಕೇಂದ್ರ ಸರಕಾರವನ್ನು ಟೀಕಿಸಲು ಒಂದು ಆಸ್ತ್ರವಾಗಿದೆ.
Click this button or press Ctrl+G to toggle between Kannada and English