ಬೆಂಗಳೂರು: ಶಾಸಕ ಬಿ.ಎನ್.ವಿಜಯ್‍ಕುಮಾರ್ ಅವರ ಅಕಾಲಿಕ ನಿಧನದಿಂದ ಮುಂದೂಡಲ್ಪಟ್ಟಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶುಕ್ರವಾರ ಬಿ.ಎನ್.ಪ್ರಹ್ಲಾದ್ ನಾಮಪತ್ರ ಸಲ್ಲಿಸಿದರು.
ಕೇಂದ್ರ ಸಚಿವ ಅನಂತಕುಮಾರ್ ಸೇರಿದಂತೆ ಇತರ ಬಿಜೆಪಿ ಮುಖಂಡರ ಜೊತೆ ತೆರಳಿದ ಪ್ರಹ್ಲಾದ್ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಜಯನಗರ ಅಭ್ಯರ್ಥಿಯಾಗಿದ್ದ ವಿಜಯ್‍ಕುಮಾರ್ ನಿಧನದಿಂದ ಮುಂದೂಡಲ್ಪಟ್ಟಿದ್ದ ಚುನಾವಣೆಯಲ್ಲಿ ವಿಜಯ್‍ಕುಮಾರ್ ಅವರ ಸಹೋದರ ಬಿ.ಎನ್.ಪ್ರಹ್ಲಾದ್ ಅವರಿಗೆ ಬಿ ಫಾರಂ ನೀಡಲು ಬಿಜೆಪಿ ತೀರ್ಮಾನಿಸಿ, ಕ್ಷೇತ್ರದಲ್ಲಿ ಅಭ್ಯರ್ಥಿಯ ಗೆಲುವಿನ ಹೊಣೆಗಾರಿಕೆಯನ್ನು ಕೇಂದ್ರ ಸಚಿವ ಅನಂತಕುಮಾರ್ ಅವರ ಹೆಗಲಿಗೆ ಹೊರಿಸಲಾಗಿದೆ.
ಜಯನಗರದಲ್ಲಿ ಶತಾಯ-ಗತಾಯ ಬಿಜೆಪಿಯನ್ನು ಗೆಲ್ಲಿಸಿಕೊಳ್ಳಲೇಬೇಕು ಎಂದು ಹಠಕ್ಕೆ ಬಿದ್ದಿರುವ ಕೇಂದ್ರ ಸಚಿವ ಅನಂತಕುಮಾರ್ ಹಾಗೂ ಮಾಜಿ ಡಿಸಿಎಂ ಆರ್.ಅಶೋಕ್ ಶುಕ್ರವಾರ ಬಿಬಿಎಂಪಿ ಸದಸ್ಯರ ಸಭೆ ನಡೆಸಿದರು.
ಸಭೆಯಲ್ಲಿ ಬಿಬಿಎಂಪಿ ಸದಸ್ಯರಾದ ಗೋವಿಂದ ನಾಯ್ಡು, ಎನ್.ನಾಗರಾಜ್, ನಾಗರತ್ನ ರಾಮಮೂರ್ತಿ, ಮಾಲತಿ ಸೋಮಶೇಖರ್, ಲಕ್ಷ್ಮಿ ನಟರಾಜ್, ದೀಪಿಕಾ ಮಂಜುನಾಥರೆಡ್ಡಿ ಹಾಗೂ ಮಾಜಿ ಮೇಯರ್ ಎಸ್.ಕೆ.ನಟರಾಜ್, ಬಿಬಿಎಂಪಿ ಮಾಜಿ ಸದಸ್ಯರಾದ ಸೋಮಶೇಖರ್, ಸಿ.ಕೆ.ರಾಮಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.
ಬಿಜೆಪಿ ತೀರ್ಮಾನಕ್ಕೆ ಬಹಿರಂಗವಾಗಿಯೇ ಟಾಂಗ್ ನೀಡಿದ್ದ ಎನ್.ನಾಗರಾಜ್, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಪರ ಮತಯಾಚಿಸುವುದಾಗಿ ಘೋಷಿಸಿದ್ದರು. ಉಳಿದ ಸದಸ್ಯರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸದಿದ್ದರೂ ಆರು ಬಿಬಿಎಂಪಿ ಸದಸ್ಯರಲ್ಲಿ ಒಬ್ಬರಿಗೆ ಟಿಕೆಟ್ ನೀಡಿದರೆ ಎಲ್ಲರೂ ಒಂದಾಗಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕರಿಸುತ್ತೇವೆ. ನಮ್ಮನ್ನು ಬಿಟ್ಟು ಬೇರೆಯವರನ್ನು ಚುನಾವಣೆಗೆ ನಿಲ್ಲಿಸಿದರೆ ನಾವು ತೆಪ್ಪಗಿರುತ್ತೇವೆ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದರು.
ಆರು ಬಿಬಿಎಂಪಿ ಸದಸ್ಯರು ಮತ್ತು ಮಾಜಿ ಸದಸ್ಯರ ಅಸಮಾಧಾನ ಹೋಗಲಾಡಿಸುವ ಕುರಿತಂತೆ ಇಂದು ಸಭೆ ನಡೆಸಿದ ಅನಂತಕುಮಾರ್ ಅವರು ವಿಜಯ್‍ಕುಮಾರ್ ಅವರ ಸಾವಿನ ಹಿನ್ನೆಲೆಯಲ್ಲಿ ಅವರ ಕುಟುಂಬ ವರ್ಗದವರಿಗೆ ಅನಿವಾರ್ಯವಾಗಿ ಟಿಕೆಟ್ ನೀಡಬೇಕಾಯಿತು. ನೀವು ಈ ಬಾರಿ ಪ್ರಹ್ಲಾದ್ ಪರ ಪ್ರಚಾರ ಮಾಡಿಸಿ ಅವರನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಬಿಬಿಎಂಪಿ ಸದಸ್ಯರು ಬೆಂಬಲ ನೀಡುವುದಾಗಿ ಘೋಷಿಸಿದ್ದರೂ ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ಅವರು ಸಕ್ರಿಯರಾಗುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
Click this button or press Ctrl+G to toggle between Kannada and English