ಮಂಗಳೂರು: ರಾಜ್ಯ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ದ.ಕ.ಜಿಲ್ಲೆಯಲ್ಲಿ ಸೋತಿದ್ದರೂ ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಸೋಲನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ದ.ಕ.ಜಿಲ್ಲಾ ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಮಂಗಳವಾರ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪರಾಮರ್ಶೆಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪಕ್ಷದ ಸೋಲಿಗೆ ಅಪಪ್ರಚಾರವೇ ಮುಖ್ಯ ಕಾರಣ. ಸೋಲಿನಿಂದ ಯಾರೂ ಧೃತಿಗೆಡಬೇಡಿ. ಈ ಸೋಲು ಶಾಶ್ವತವಲ್ಲ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ. ಚುನಾವಣೆಯ ಸೋಲನ್ನು ಒಪ್ಪಿಕೊಂಡು ಮುನ್ನಡೆಯಬೇಕು. ನಾಯಕರಲ್ಲದೆ ಪಕ್ಷದ ಸಾಮಾನ್ಯ ಕಾರ್ಯಕರ್ತ ಕೂಡಾ ಸೋಲಿನ ಬಗ್ಗೆ ಆತ್ಮವಿಮರ್ಶೆ ಮಾಡಬೇಕಾಗಿದೆ ಎಂದು ರಮಾನಾಥ ರೈ ಹೇಳಿದರು.
ರಾಜ್ಯ ಸರಕಾರ ಉತ್ತಮ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರೂ ಈ ಬಗ್ಗೆ ಪ್ರಚಾರ ಮಾಡಲು ಪಕ್ಷದ ಕಾರ್ಯಕರ್ತರು ಮುತುವರ್ಜಿ ವಹಿಸದಿರುವುದು ಕೂಡಾ ಪಕ್ಷದ ಸೋಲಿಗೆ ಕಾರಣವಾಗಿದೆ. ಹಿಂದುತ್ವದ ನೆಲೆಯಲ್ಲಿ ಮತಗಳನ್ನು ವಿಭಜನೆ ಮಾಡಿರುವುದರಿಂದ ಬಿಜೆಪಿಗೆ ತಾತ್ಕಾಲಿಕ ಗೆಲುವಾಗಿದೆ. ವಚನಭ್ರಷ್ಟ ಬಿಜೆಪಿಯ ವೈಫಲ್ಯವನ್ನು ಜನತೆಗೆ ಮನದಟ್ಟು ಮಾಡಿಕೊಳ್ಳಲು ಪಕ್ಷದ ಕಾರ್ಯಕರ್ತರು ಮುಂದಾಗಬೇಕು ಎಂದು ರಮಾನಾಥ ರೈ ಕರೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಇವಿಎಂ ಯಂತ್ರದ ಬಗ್ಗೆ ಇರುವ ಸಂಶಯ ಇನ್ನೂ ನಿವಾರಣೆಯಾಗಿಲ್ಲ. ಅಲ್ಲದೆ ಪಕ್ಷದ ಅಭ್ಯರ್ಥಿಗಳ ಮನೆ, ಕಚೇರಿಗಳಿಗೆ ಆದಾಯ ತೆರಿಗೆ ಮೂಲಕ ದಾಳಿ ನಡೆಸಿ ಆತ್ಮಸ್ಥೆರ್ಯವನ್ನು ಕುಂದಿಸಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿದರು.
ಸಭೆಯಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಕುಮಾರ್ ಮತ್ತು ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಎಂ.ಪಿ. ದಿನೇಶ್, ಮಾಜಿ ಶಾಸಕರಾದ ಅಭಯಚಂದ್ರ ಜೈನ್, ಗಂಗಾಧರ್ ಗೌಡ, ಜೆ.ಆರ್. ಲೋಬೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ್, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮುಹಮ್ಮದ್, ಮಮತಾ ಗಟ್ಟಿ, ಇಬ್ರಾಹೀಂ ಕೋಡಿಜಾಲ್, ಧನಂಜಯ ಅಡ್ಪಂಗಾಯ, ಆರ್.ಕೆ. ಪೃಥ್ವಿರಾಜ್, ಈಶ್ವರ್ ಉಲ್ಲಾಳ್, ಶಾಹುಲ್ ಹಮೀದ್, ಶೇಖರ್ ಕುಕ್ಕೇಡಿ, ಸುರೇಶ್ ಬಲ್ಲಾಳ್, ಶಾಲೆಟ್ ಪಿಂಟೊ, ಉಮಾನಾಥ್ ಶೆಟ್ಟಿ, ಲೋಕೇಶ್ ಹೆಗ್ಡೆ, ಎ.ಸಿ. ಭಂಡಾರಿ, ಅಬ್ದುಲ್ಲಾ ಬಿನ್ನು, ಸೇವಾದಳದ ಅಶ್ರಫ್, ಸದಾಶಿವ ಉಳ್ಳಾಲ್, ವಿವಿಧ ಬ್ಲಾಕ್ ಅಧ್ಯಕ್ಷರುಗಳು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಜಿಲ್ಲಾ ಯುವ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರು, ಜಿಪಂ ಸದಸ್ಯರು, ತಾಪಂ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English