ಬೆಂಗಳೂರು: ರೈತರ ಸಾಲಮನ್ನಾ ಮಾಡಲು ಕಾಂಗ್ರೆಸ್ ಪಕ್ಷದ ವಿರೋಧವಿಲ್ಲ ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.
ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸಾಲಮನ್ನಾ ಕುರಿತ ಪ್ರಮುಖ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಜೆಡಿಎಸ್‌ಗೆ ಬಹುಮತ ಬಂದಿದ್ದರೆ ಕುಮಾರಸ್ವಾಮಿ ಈ ಹೊತ್ತಿಗೆ ಸಾಲಮನ್ನಾ ಮಾಡಿರುತ್ತಿದ್ದರು, ಆದರೆ ಸಮ್ಮಿಶ್ರ ಸರ್ಕಾರವಾದ್ದರಿಂದ ಚರ್ಚಿಸಿಯೇ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ರೈತರೊಂದಿಗಿನ ಸಭೆಯಲ್ಲೂ ಈ ವಿಷಯ ಮಾತನಾಡಿದ ಪರಮೇಶ್ವರ್ ಅವರು, ಮನೆ, ವಾಹನಕ್ಕೆ ಮಾಡಿದ ಸಾಲಗಳನ್ನು ಮನ್ನಾ ಮಾಡುವುದು ಹೇಗೆ. 500 ಎಕರೆ ಜಮೀನು ಹೊಂದಿರುವ ರೈತನದ್ದೂ ಸಾಲ ಮನ್ನಾ ಮಾಡು ಅಂದ್ರೆ ಹೇಗೆ? ಎಂದು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಅವರು ಮಾಡಿದರು.
ಮನಮೋಹನ್ ಸಿಂಗ್ ಅವರು ಸಾಲಮನ್ನಾ ಮಾಡಿದ್ದರು. ಈ ಬಾರಿ ನಾವು ಕೇಂದ್ರಕ್ಕೆ ನಿಯೋಗ ಕೊಂಡೊಯ್ದು ಸಾಲಮನ್ನಾ ಮಾಡಲು ಕೇಳಿದ್ದೆವು ಆದರೆ ಕೇಂದ್ರ ಒಪ್ಪಲಿಲ್ಲ ಎಂದು ಅವರು ಹೇಳಿದರು.
ಸಾಲಮನ್ನಾ ಮಾಡಲು ಕಾಂಗ್ರೆಸ್‌ನಿಂದ ಯಾವುದೇ ವಿರೋಧ ಇಲ್ಲ, ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಮಿತಿಗಳಿರುತ್ತವೆ, ಎಲ್ಲವನ್ನೂ ಚರ್ಚಿಸಿಯೇ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ರಾಜ್ಯಕ್ಕೆ ಉತ್ತಮ ಆಡಳಿತ ಕೊಡಲೆಂದು ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದೆ ಅದಕ್ಕೆ ನಾವು ಬದ್ಧವಾಗಿದ್ದೇವೆ ಎಂದರು.
Click this button or press Ctrl+G to toggle between Kannada and English