ಮಂಗಳೂರು: ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದ ಕಳ್ಳರ ಮೇಲೆ ಪೊಲೀಸರು ಫೈರಿಂಗ್ ಮಾಡಿ, ಮೂವರನ್ನು ಬಂಧಿಸಿದ್ದಾರೆ.
ಆರೋಪಿಗಳಾದ ಮೊಹಮ್ಮದ್ ಮುಕ್ಸಿನ್ (23), ಮೊಹಮ್ಮದ್ ಇರ್ಷಾದ್ (29), ಸದ್ದಂ ಮಾರಿಪಳ್ಳ ಎಂಬವರನ್ನು ಬಂಧಿಸಲಾಗಿದೆ.
ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ 5 ಜನ ಮಾರಕಾಸ್ತ್ರಗಳನ್ನು ಹಿಡಿದು ಕೊಂಡು ಗುರುವಾಯನಕೆರೆ ಕಡೆ ಆರೋಪಿಗಳು ಹೋಗುತ್ತಿದ್ದಾರೆ ಎಂದು ಮಾಹಿತಿ ಬಂದಿತ್ತು. ಅಂತೆಯೇ ಚೆಕ್ ಪೋಸ್ಟ್‌ನಲ್ಲಿ ಕಾರನ್ನು ನಿಲ್ಲಿಸಲು ಪೊಲೀಸರು ಸೂಚಿಸಿದರೂ ನಿಲ್ಲಿಸದೆ ಬಿ.ಸಿ ರೋಡ್ ಕಡೆ ವೇಗವಾಗಿ ಹೋಗುತ್ತಿದ್ದರು.
ಈ ಕುರಿತು ವೈರಸ್‌ಲೆಸ್‌ನಲ್ಲಿ ಮಾಹಿತಿ ನೀಡಿಲಾಗಿತ್ತು. ಈ ಸಂದರ್ಭದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಮದ್ವ ಚೆಕ್ ಪಾಯಿಂಟ್‌ನಲ್ಲಿ ಇದ್ದ ಪೊಲೀಸ್ ಸಿಬ್ಬಂದಿಯು ಕಾರನ್ನು ನಿಲ್ಲಿಸಿ ಎಂದು ಹೇಳಿದಾಗಲೂ ಆರೋಪಿಗಳು ಕಾರನ್ನು ನಿಲ್ಲಿಸದೆ ಹೋಗಿದ್ದರು. ಬಳಿಕ ಪೊಲೀಸರು ಮಣಿಹಳ್ಳ ಜಂಕ್ಷನ್‌ನಲ್ಲಿ ಇಲಾಖಾ ವಾಹನವನ್ನು ರಸ್ತೆಗೆ ಅಡ್ಡ ಇಟ್ಟು ತಡೆಯಲು ಯತ್ನಿಸಿದರು.
ಆಗ ಆರೋಪಿಗಳು ವೇಗವಾಗಿ ಬಂದು ಸಿಬ್ಬಂದಿಯ ಮೆಲೆ ರಾಡ್ ಮತ್ತು ತಲವಾರಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ರಕ್ಷಣೆಗಾಗಿ ಬಂಟ್ವಾಳ ನಗರ ಠಾಣೆ ಪಿಎಸ್‌ಐ ಚಂದ್ರಶೇಖರ ಅವರು ತಮ್ಮ ಕೈಯಲ್ಲಿದ್ದ ಪಂಪ್ ಆಕ್ಷನ್ ವೆಪನ್‌ನಿಂದ ಮತ್ತು ಬಂಟ್ವಾಳ ಗ್ರಾಮಾಂತರ ಸಬ್ ಇನ್ಸ್‌ಪೆಕ್ಟರ್ ಪ್ರಸನ್ನ ಅವರು ತಮ್ಮ ಪಿಸ್ತೂಲ್‌ನಿಂದ ಕಾರಿನ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಕಾರನ್ನು ನಾವುರು ಕಡೆಗೆ ಹೋಗಲು ತಿರುಗಿಸಿದಾಗ ಕಾರ್ ಚರಂಡಿಯಲ್ಲಿ ಸಿಕ್ಕಿಹಾಕಿ ಕೊಂಡಿದ್ದು, ತಕ್ಷಣ ಹಿಂಬದಿಯಲ್ಲಿ ಕೂತಿದ್ದ ಇಬ್ಬರು ಪರಾರಿಯಾಗಿದ್ದಾರೆ.
ಕಾರನ್ನು ಸುತ್ತುವರೆದು ಕಾರಿನಲ್ಲಿದ್ದ ಮೂವರನ್ನು ಬಂಧಿಸಲಾಗಿದೆ. ಕಾರಲ್ಲಿ ಎರಡು ತಲವಾರು, ಒಂದು ರಾಡ್, ಮೆಣಸಿನಪುಡಿ, ಮಂಕಿ ಕ್ಯಾಪ್, ಹಗ್ಗಗಳಿರುವುದು ಕಂಡುಬಂದಿದೆ. ಆರೋಪಿಗಳನ್ನು ವಿಚಾರಿಸಿದಾಗ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ತಡೆದು ದರೋಡೆ ಹಾಗೂ ದಾರಿಯಲ್ಲಿನ ಮನೆಯಲ್ಲಿ ದನ ಕಳ್ಳತನ ಮಾಡಲು ಸಂಚು ರೂಪಿಸಿದ್ದಾಗಿ ಬಾಯ್ಬಿಟ್ಟಿದ್ದಾರೆ.
ಈ ಕುರಿತಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಅಕ್ಷಯ್ ಎಮ್ ಹಾಕೆ, ಬಂಟ್ವಾಳ ಗ್ರಾಮಾಂತರ ಠಾಣೆ ಪಿಎಸ್ಐ ಪ್ರಸನ್ನ, ಬಂಟ್ವಾಳ ನಗರ ಪಿಎಸ್ಐ ಚಂದ್ರಶೇಖರ, ಸಿಬ್ಬಂದಿಗಳಾದ ನಜೀರ್, ಸಂಪತ್, ಆದರ್ಶ, ಭಾಸ್ಕರ್ ಅವರು ಪಾಲ್ಗೊಂಡಿದ್ದರು. ಕಾನೂನು ಬಾಹಿರ ಕೃತ್ಯ ಎಸಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ ಜಿಲ್ಲಾ ಎಸ್‌ಪಿ ರವಿಕಾಂತೆ ಗೌಡ ತಿಳಿಸಿದ್ದಾರೆ.
Click this button or press Ctrl+G to toggle between Kannada and English