ಒಂದೇ ದಿನದ ಮಳೆಗೆ 16 ಮನೆಗಳು ಸಂಪೂರ್ಣ ನಾಶ, 41.38 ಲಕ್ಷ ರೂ.ನಷ್ಟ: ಮೇಯರ್ ಭಾಸ್ಕರ ಮೊಯ್ಲಿ

2:47 PM, Friday, June 1st, 2018
Share
1 Star2 Stars3 Stars4 Stars5 Stars
(No Ratings Yet)
Loading...

bhaskar-moilyಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಂಗಳವಾರ ಸುಮಾರು 4 ಗಂಟೆಗಳ 215 ಮಿ.ಮೀ. ಅನಿರೀಕ್ಷಿತ ಮಳೆಯಾಗಿದ್ದು, ಇದರಿಂದ 16 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಪಾಲಿಕೆಯಲ್ಲಿ ಮನೆಗಳ ಹಾನಿಯಿಂದ ಒಟ್ಟು ಅಂದಾಜು 41,38,000 ರೂ. ನಷ್ಟವಾಗಿದೆ ಎಂದು ಮೇಯರ್ ಭಾಸ್ಕರ ಮೊಯ್ಲಿ ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕೊಠಡಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಮಳೆಯಿಂದ ಆರು ಮನೆಗಳು ತೀವ್ರ ಹಾನಿಗೊಳಗಾಗಿದ್ದು, 18 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದರು.

ಮಂಗಳವಾರ ಸುರಿದ ಮಳೆ ಕಳೆದ 12 ವರ್ಷಗಳಲ್ಲಿ ಅತೀ ಹೆಚ್ಚಿನ ಮಳೆಯಾಗಿದೆ. ಸಾಮಾನ್ಯವಾಗಿ ಮುಂಗಾರು ದ.ಕ. ಜಿಲ್ಲೆಗೆ ಜೂನ್ ಒಂದರ ನಂತರ ಪ್ರವೇಶವಾಗುತ್ತದೆ. ಆದರೆ ಮಂಗಳವಾರದ ಮಳೆ ಅನಿರೀಕ್ಷಿತವಾಗಿತ್ತು. ಪ್ರತೀ ವರ್ಷದಂತೆ ಮಳೆಗಾಲಕ್ಕೆ ಮುಂಚಿತವಾಗಿ ಈ ಬಾರಿಯು ಪಾಲಿಕೆ ವ್ಯಾಪ್ತಿಯ ಬೃಹತ್ ತೋಡು ಮತ್ತು ಸಣ್ಣ ತೋಡುಗಳನ್ನು ಶೇ.90ರಷ್ಟು ಸ್ವಚ್ಛಗೊಳಿಸಲಾಗಿತ್ತು. ರಾಜಕಾಲುವೆ ಹಾಗೂ ಚರಂಡಿಗಳ ಹೂಳು ತೆಗೆಯಲಾಗಿತ್ತು. ಆದರೆ ಮಳೆ ನಿರಂತರವಾಗಿ ಬಂದ ಹಿನ್ನೆಲೆಯಲ್ಲಿ ಮೇಲ್ಭಾಗದಲ್ಲಿ ಶೇಖರವಾಗಿದ್ದ ತ್ಯಾಜ್ಯಗಳು ಚರಂಡಿಗಳಲ್ಲಿ ಬಂದು ಸೇರಿ ನೀರು ಸರಾಗವಾಗಿ ಹರಿಯಲು ತೊಂದರೆಯಾದ ಕಾರಣ ಕೃತಕ ನೆರೆ ಉಂಟಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಯಿತು. ಹಾಗಿದ್ದರೂ ಈ ಸಂದರ್ಭ ಸಾರ್ವಜನಿಕರು ಸಂಯಮದಿಂದ ವರ್ತಿಸಿದ್ದಲ್ಲದೆ, ತೊಂದರೆಯಲ್ಲಿದ್ದವರಿಗೆ ಸ್ಥಳೀಯ ಜನಪ್ರತಿನಿಧಿಗಳ ಜೊತೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಸಹಾಯವನ್ನು ನೀಡಿವೆ. ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಮನಪಾ ವ್ಯಾಪ್ತಿಯ ಎಲ್ಲಾ ಅಧಿಕಾರಿ, ಸಿಬ್ಬಂದಿಯನ್ನು ನೆರವು ಕಾರ್ಯಾಚರಣೆಗಾಗಿ ಆಯಾಕಟ್ಟಿನ ಸ್ಥಳಗಳಿಗೆ ನಿಯೋಜಿಸಲಾಗಿತ್ತು. ನೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲರಿಗೂ ತಾನು ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ನಗರದ 60 ವಾರ್ಡ್‌ಗಳಲ್ಲೂ ಮಳೆಗಾಲದ ಸಂದರ್ಭ ಎರಡು ತಿಂಗಳ ಅವಧಿಗೆ ಆರು ಮಂದಿಯ 60 ಗ್ಯಾಂಗ್‌ಗಳು ಕಾರ್ಯನಿರ್ವಹಿಸುತ್ತಿವೆ. ಗ್ಯಾಂಗ್‌ಗಳು ಜೇಸಿಬಿ ಮೂಲಕ ಚರಂಡಿ ಹೂಳೆತ್ತುವ ಕೆಲಸವನ್ನು ಮಾಡಿವೆ. ರಾತ್ರಿ ಪಾಳಯಕ್ಕೆ 2 ವಿಶೇಷ ಗ್ಯಾಂಗ್‌ಗಳನ್ನು ಮೀಸಲಿಡಲಾಗಿದೆ. ಐದು ವಾರ್ಡ್‌ಗಳಿಗೆ ನೋಡಲ್ ಅಧಿಕಾರಿಗಳನ್ನು ಸಮಸ್ಯೆ ಬಗೆಹರಿಸಲು ನೇಮಕ ಮಾಡಲಾಗಿದೆ. ಪಂಪ್‌ವೆಲ್ ಹಾಗೂ ಕೊಟ್ಟಾರದಲ್ಲಿ ಸಂಭವಿಸಿದ ಕೃತಕ ನೆರೆಗೆ ರಾಷ್ಟ್ರೀಯ ಹೆದ್ದಾರಿಯ ಅಸಮರ್ಪಕ ಹಾಗೂ ವಿಳಂಬ ಗತಿಯ ಕಾಮಗಾರಿಯೇ ಕಾರಣ. ಪಂಪ್‌ವೆಲ್‌ನ ಮೇಲ್ಸೇತುವೆ ಕಾಮಗಾರಿ ಕಳೆದ ಸುಮಾರು ಐದು ವರ್ಷಗಳಿಂದ ನಡೆಯುತ್ತಿದೆ. ಮಳೆಗಾಲ ಆರಂಭವಾಗುವ ಕೆಲ ದಿನಗಳ ಹಿಂದೆಯೇ ಇಲ್ಲಿ ರಸ್ತೆ ಅಗೆಯಲಾಗಿದೆ. ಸರ್ವಿಸ್ ರಸ್ತೆಯನ್ನು ಕಲ್ಪಿಸಲಾಗಿಲ್ಲ. ಇವೆಲ್ಲದರ ಕಾರಣ ನೀರು ಹರಿದುಹೋಗುವ ತೋಡುಗಳು ಅನಿರೀಕ್ಷಿತ ಮಳೆಯಿಂದ ಮಣ್ಣಿನಿಂದ ಮುಚ್ಚಿ ಸಮಸ್ಯೆಯಾಗಿದೆ. ಹೈವೇ ಮುಖ್ಯಸ್ಥರಿಗೆ ಕರೆ ಮಾಡಿದರೆ ಅವರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ರಾಜಕಾಲುವೆಗಳ ಒತ್ತುವರಿ ಕುರಿತಂತೆ ಜಿಲ್ಲಾಧಿಕಾರಿ ಈಗಾಗಲೇ ಸಮಿತಿ ರಚಿಸಿ ವರದಿಗೆ ಸೂಚಿಸಿದ್ದಾರೆ. ವರದಿ ಆಧಾರದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಲು ಪಾಲಿಕೆಯ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಮಳೆಯಾದ ದಿನ ನಾನು ರಾತ್ರಿಯವರೆಗೂ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಬಳಿಕ ರಾತ್ರಿ ಸುಮಾರು 1 ಗಂಟೆಯವರೆಗೂ ಕಚೇರಿಯಲ್ಲಿದ್ದು, ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಪ್ರವೀಣ್‌ಚಂದ್ರ ಆಳ್ವ, ಸತೀಶ್ ಸಾಲ್ಯಾನ್, ನವೀನ್ ಡಿಸೋಜ, ಅಶೋಕ್ ಡಿ.ಕೆ. ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English