ಮೂಡುಬಿದಿರೆ: ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಉಮಾನಾಥ ಕೋಟ್ಯಾನ್ ಹಾಗೂ ಕಾರ್ಯಕರ್ತರಿಗೆ ಭಾರತೀಯ ಜನತಾ ಪಾರ್ಟಿ ಮೂಡುಬಿದಿರೆ ಇದರ ವತಿಯಿಂದ ಅಭಿನಂದನಾ ಕಾರ್ಯಕ್ರಮವು ರವಿವಾರ ಪದ್ಮಾವತಿ ಕಲಾ ಮಂಟಪದಲ್ಲಿ ನಡೆಯಿತು.
ಸಂಸದ ನಳಿನ್ ಕುಮಾರ್ ಕಟೀಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜಕೀಯವಾಗಿ ಬೆಳೆದಿರುವ ಕ್ಷೇತ್ರ ಮೂಡುಬಿದಿರೆಯಲ್ಲಿ ಬಿಜೆಪಿಯ ಗೆಲುವಿನ ಸಾಧನೆ ಅದ್ಭುತ. ಈ ಗೆಲುವಿನ ಹಿಂದೆ ಸಹಸ್ರರು ಕಾರ್ಯಕರ್ತರ ಪರಿಶ್ರಮವಿದೆ. ಕಾಂಗ್ರೆಸ್ ಮುಕ್ತ ಕ್ಷೇತ್ರವಾಗಿ ಮೂಡುಬಿದಿರೆಯು ಮಾರ್ಪಾಡಾಗಬೇಕೆಂಬುದು ಭಾರತೀಯ ಜನತಾ ಪಾರ್ಟಿಯ ಬಹು ವರ್ಷಗಳ ಕನಸಾಗಿತ್ತು. ಇದೀಗ ಹಿಂದುತ್ವದ ಆಧಾರದಲ್ಲಿ ಮತ್ತು ಕಾರ್ಯಕರ್ತರ ಶ್ರಮದಿಂದಾಗಿ ಗಟ್ಟಿಗೊಳಿಸುವ ಮೂಲಕ ಮೊದಲ ಬಾರಿಗೆ ಇತಿಹಾಸವನ್ನು ನಿರ್ಮಾಣ ಮಾಡಿ ಹೆಜ್ಜೆಯ ಗುರುತನ್ನು ಉಳಿದ್ದೇವೆ ಎಂದು ಹೇಳಿದ ಅವರು ಮುಂದಿನ 30-40 ವರ್ಷಗಳ ಕಾಲ ಲೋಕಸಭಾ ಕ್ಷೇತ್ರವನ್ನು ಬಿಟ್ಟು ಕೊಡಲ್ಲ ಇದಕ್ಕಾಗಿ ಕಾರ್ಯಕರ್ತರು ಇನ್ನೂ ಹೆಚ್ಚಿನ ರೀತಿಯಲ್ಲಿ ಶ್ರಮವಹಿಸಬೇಕೆಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಮೂಡುಬಿದಿರೆ ಶಾಪ ವಿಮೋಚನೆಯಾಗಿದೆ. ಇನ್ನು ಮುಂದೆ ಈ ಕ್ಷೇತ್ರವು ಜನಸಾಮಾನ್ಯರ ಕ್ಷೇತ್ರ ಎಂಬಂತೆ ಜನರಿಗೆ ಅನುಭವವಾಗುವಂತೆ ಉಮಾನಾಥ ಕೋಟ್ಯಾನ್ ಅವರು ಮಾಡಬೇಕಾಗಿದೆ. ಮಹಿಳೆಯರ, ದುರ್ಬಲರ, ಬಡವರ ಪರವಾಗಿ ಕೆಲಸ ಮಾಡುವ ಜೊತೆಗೆ, ಈ ಜಿಲ್ಲೆಯ ಶಾಸಕರನ್ನು ಒಟ್ಟುಗೂಡಿಸಿ ಹೋರಾಟವನ್ನು ಮಾಡುವ ಮೂಲಕ ಈ ಜಿಲ್ಲೆಗೆ ನ್ಯಾಯ ಒದಗಿಸಬೇಕಾಗಿದೆ ಎಂದರು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್ ಅವರು ಹಲವಾರು ಕಾರ್ಯಕರ್ತರ ಶ್ರಮದ ಫಲದಿಂದಾಗಿ ಮತ್ತು ಈ ಕ್ಷೇತ್ರದಲ್ಲಿ ಹಿಂದಿನಿಂದ ಈವರೆಗೆ ಕ್ಷೇತ್ರಾಧ್ಯಕ್ಷರುಗಳಾಗಿ ಕೆಲಸ ಮಾಡಿ ಪಕ್ಷವನ್ನು ಗಟ್ಟಿಗೊಳಿಸಿರುವರಿಗೆ ಹಾಗೂ ಪಕ್ಷಕ್ಕಾಗಿ ತಮ್ಮನ್ನು ಬಲಿದಾನ ಮಾಡಿರುವವರಿಗೆ ಈ ನನ್ನ ಗೆಲುವನ್ನು ಅರ್ಪಿಸುತ್ತೇನೆ ಎಂದು ಹೇಳಿದ ಅವರು ಮುಂದಿನ ನಮ್ಮ ಗುರಿ ಮೂಡುಬಿದಿರೆ ಪುರಸಭೆಯನ್ನು ಕಾಂಗ್ರೆಸ್ ಮುಕ್ತ ಮಾಡುವುದು ಎಂದು ಹೇಳಿದರು.
ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ ಅಧಿಕಾರಿ, ಪ್ರಧಾನ ಕಾರ್ಯದರ್ಶಿ ಗಳಾದ ಕಿಶೋರ್ ಕುಮಾರ್ ರೈ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಜಯಾನಂದ ಮೂಲ್ಕಿ, ಚುನಾವಣಾ ಸಂಚಾಲಕ ಬಾಲಕೃಷ್ಣ ಶೆಟ್ಟಿ, ಅಭ್ಯರ್ಥಿ ಪ್ರಮುಖ್ ಮೇಘನಾಧ ಶೆಟ್ಟಿ, ಎಸ್‌ಸಿ-ಎಸ್‌ಡಿ ಮೋರ್ಚಾದ ಶಿನ ಮಾಸ್ತಿಕಟ್ಟೆ, ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತರ ಜೋಯ್ಲಸ್ ತಾಕೋಡೆ, ಮುಖಂಡರಾದ ಭುವನಾಭಿರಾಮ ಉಡುಪ, ಬಾಹುಬಲಿ ಪ್ರಸಾದ್, ಕೆ.ಆರ್.ಪಂಡಿತ್, ದಯಾನಂದ ಪೈ, ದೇವಪ್ರಸಾದ್ ಪುನರೂರು, ಕೆ.ಕೃಷ್ಣರಾಜ ಹೆಗ್ಡೆ, ರಮನಾಥ ಅತ್ತಾರ್ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಮೂಡುಬಿದಿರೆ ಮಂಡಲ ಅಧ್ಯಕ್ಷ ಈಶ್ವರ ಕಟೀಲು ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು. ಮಂಡಲ ಕಾರ್ಯದರ್ಶಿ ಸುಕೇಶ್ ಶೆಟ್ಟಿ ಶಿರ್ತಾಡಿ ವಂದಿಸಿದರು.
Click this button or press Ctrl+G to toggle between Kannada and English