ಬೆಂಗಳೂರು: ಸೆಂಚೂರಿ ಸ್ಟಾರ್ ಶಿವರಾಜಕುಮಾರ್ ಅಭಿನಯದ `ಟಗರು’ ಚಿತ್ರ ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದೆ. ಈ ವರ್ಷ ಶತ ದಿನಗಳನ್ನು ಪೂರೈಸಿದ ಮೊದಲ ಚಿತ್ರವಾಗಿ `ಟಗರು’ ಹೊರಹೊಮ್ಮಿದೆ.
ಚಿತ್ರತಂಡವು ಇದೇ ತಿಂಗಳು ದೊಡ್ಡ ಸಮಾರಂಭ ಮಾಡಿ, ಚಿತ್ರಕ್ಕೆ ದುಡಿದ ಕಲಾವಿದರು ಮತ್ತು ತಂತ್ರಜ್ಞರನ್ನು ಗೌರವಿಸಲಿದೆ. ಅದಕ್ಕೂ ಮುನ್ನ ಶಿವರಾಜಕುಮಾರ್ ಅಭಿಮಾನಿಗಳಿಂದ ಅಭಿಮಾನದ 100ನೇ ದಿನದ ಸಂಭ್ರಮಾಚರಣೆ ನಡೆಯಿತು.
ಭಾನುವಾರ ಅಖಿಲ ಕರ್ನಾಟಕ ಡಾ. ಶಿವರಾಜಕುಮಾರ್ ಸೇನಾ ಸಮಿತಿ ಮತ್ತು ಗಂಡುಗಲಿ ಡಾ. ಶಿವರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಸಂತೋಷ್ ಚಿತ್ರಮಂದಿರದಲ್ಲಿ ಸಂಭ್ರಮಾಚರಣೆ ನಡೆಯಿತು.
ಈ ಸಂದರ್ಭದಲ್ಲಿ ಶಿವರಾಜಕುಮಾರ್, ಧನಂಜಯ್, ಮಾನ್ವಿತಾ ಹರೀಶ್, ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಮುಂತಾದವರು ಹಾಜರಿದ್ದರು. ಆ ನಂತರ ಸಂಜೆ ವೀರೇಶ್ ಚಿತ್ರಮಂದಿರದಲ್ಲಿ ಅಖಿಲ ಕರ್ನಾಟಕ ಡಾ. ಶಿವರಾಜಕುಮಾರ್ ಅಭಿಮಾನಿಗಳ ವತಿಯಿಂದ ಶಿವರಾಜಕುಮಾರ್ ಅವರಿಗೆ ಸನ್ಮಾನ ಮಾಡಿ, ಸಿಹಿ ಹಂಚಲಾಯಿತು. ಇದಲ್ಲದೆ ಮೈಸೂರಿನ ಶಿವರಾಜಕುಮಾರ್ ಸಂಘದ ವತಿಯಿಂದಲೂ `ಟಗರು’ ಚಿತ್ರದ ಶತದಿನೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
`ಟಗರು’ ಚಿತ್ರವನ್ನು ಸೂರಿ ನಿರ್ದೇಶಿಸಿದ್ದು, ಚಿತ್ರದಲ್ಲಿ ಶಿವರಾಜಕುಮಾರ್ ಅವರೊಂದಿಗೆ ಭಾವನಾ ಮೆನನ್, ಮಾನ್ವಿತಾ ಹರೀಶ್, ಧನಂಜಯ್, ವಸಿಷ್ಠ ಸಿಂಹ, ದೇವರಾಜ್, ಸುಧಿ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಮಹೇಂದ್ರ ಸಿಂಹ ಛಾಯಾಗ್ರಹಣ ಮಾಡಿದರೆ, ಚರಣ್‍ರಾಜ್ ಸಂಗೀತ ಸಂಯೋಜಿಸಿದ್ದಾರೆ.
Click this button or press Ctrl+G to toggle between Kannada and English