ಮಂಗಳೂರು: ರಾಜ್ಯದಲ್ಲಿ ಶಾಲೆ ಆರಂಭವಾಗಿವೆ. ಮಕ್ಕಳಿಗೆ ಸಮರ್ಪಕವಾಗಿ ಪಠ್ಯ ಪುಸ್ತಕಗಳೂ ಸರಬರಾಜಾಗಿವೆ . ಅದರ ಬೆನ್ನಲೇ ವಿವಾದಗಳು ಕೂಡ ಸುತ್ತಿಕೊಳ್ಳಲಾರಂಭಿಸಿವೆ. ಈ ಬಾರಿಯ 9 ನೇ ತರಗತಿಯ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಸಮಾಜ ವಿಜ್ಞಾನ ಪುಸ್ತಕದಲ್ಲಿ ಕ್ರೈಸ್ತ ಹಾಗು ಇಸ್ಲಾಂ ಧರ್ಮಗಳನ್ನು ವೈಭವೀಕರಿಸುವ ಪ್ರಯತ್ನಗಳು ನಡೆದಿದೆ ಎನ್ನುವ ಆರೋಪ ವ್ಯಕ್ತವಾಗಿದೆ.
ಈ ಕುರಿತು ಹಿಂದೂ ಸಂಘಟನೆಗಳು ಖಂಡನೆ ವ್ಯಕ್ತಪಡಿಸಿದ್ದು ರಾಜ್ಯ ಸರಕಾರದ ವಿರುದ್ದ ಹೋರಾಟಕ್ಕೆ ಅಣಿಯಾಗುತ್ತಿವೆ.
9ನೇ ತರಗತಿಯ ಪ್ರಥಮ ಅಧ್ಯಾಯದಲ್ಲೇ ಇಸ್ಲಾಂ ಹಾಗೂ ಕ್ರಿಶ್ಚಿಯನ್ ಮತಗಳ ಬಗ್ಗೆ ವಿಸ್ತೃತ ಮಾಹಿತಿ ನೀಡುವ ಮೂಲಕ ಎಳೆವ ಮನಸ್ಸಿನಲ್ಲೇ ತಾರತಮ್ಯ ನೀತಿ ಅನುಸರಿಸುವ ಯತ್ನ ನಡೆದಿದೆ. ಆದರೆ ಈ ಪಠ್ಯದಲ್ಲಿ ಹಿಂದೂ ಧರ್ಮದ ಕುರಿತು ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ ಎನ್ನುವ ಆರೋಪ ಇದೀಗ ವ್ಯಕ್ತವಾಗಿದೆ .
ಎಳೆಯ ಮನಸ್ಸಿನ ಮಕ್ಕಳಿಗೆ ಧರ್ಮದ ಕುರಿತ ಪಾಠ ಯಾಕೆ ಎಂಬ ಪ್ರಶ್ನೆ ವ್ಯಕ್ತವಾಗುತ್ತಿದೆ.
ಸೈನಿಕರನ್ನು ಅತ್ಯಾಚಾರಿಗಳು ಎಂದು ಬಿಂಬಿಸಿದ ಪಠ್ಯವನ್ನು ಪಿ.ಯು.ಸಿ ಪಠ್ಯ ಪುಸ್ತಕದಲ್ಲಿ ಸೇರಿಸಿದ್ದ ರಾಜ್ಯ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ವಿರುದ್ದ ರಾಜ್ಯದೆಲ್ಲೆಡೆ ಭಾರೀ ಪ್ರತಿಭಟನೆಗಳು ನಡೆದಿದ್ದವು. ಈ ಪರಿಣಾಮ ಆ ಪಠ್ಯವನ್ನೇ ಪುಸ್ತಕದಿಂದ ತೆಗೆದು ಹಾಕಲಾಗಿತ್ತು. ಆದರೆ ಈ ಬಾರಿ ಮತ್ತದೇ ರೀತಿಯ ಒಂದು ವಿವಾದಾತ್ಮಕ ಪಠ್ಯವನ್ನು ಒಂಬತ್ತನೇ ತರಗತಿಯ ಪಠ್ಯ ಪುಸ್ತಕದಲ್ಲಿ ಸೇರಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಅಲ್ಲದೆ ವಿಧ್ಯಾರ್ಥಿಗಳಿಗೆ ಮಸೀದಿ ಹಾಗೂ ಚರ್ಚ್ ಗಳಿಗೆ ತೆರಳಿ ಅಲ್ಲಿ ನಡೆಯುವ ವಿಧಿ ವಿಧಾನಗಳನ್ನು ನೋಡಿ ಟಿಪ್ಪಣಿ ಬರೆಯುವಂತೆಯೂ ಸೂಚಿಸಲಾಗಿದೆ. ಶಾಲೆ ಎಂದಾಗ ಅಲ್ಲಿ ಜಾತಿ, ಧರ್ಮದ ವಿಚಾರ ಬರುವುದಿಲ್ಲ. ಎಲ್ಲಾ ಜಾತಿಯ, ಧರ್ಮದ ಮಕ್ಕಳು ಶಾಲೆಗೆ ಬರುತ್ತಿದ್ದು, ಇಂಥ ಪಠ್ಯಗಳು ಸಾಮರಸ್ಯದ ಬದಲು ತಾರತಮ್ಯವನ್ನು ತರುವ ಪ್ರಯತ್ನ ನಡೆಸುತ್ತವೆ ಎಂದು ಕೆಲವರು ಆಕ್ಷೇಪಿಸಿದ್ದಾರೆ.
ಮತ-ಧರ್ಮಗಳ ಬಗ್ಗೆ ಮಾಹಿತಿ ನೀಡುವುದೇ ಆದಲ್ಲಿ ಎಲ್ಲಾ ಧರ್ಮದ ಬಗ್ಗೆಯೂ ಮಾಹಿತಿ ನೀಡಬೇಕಿತ್ತು. ಅದು ಬಿಟ್ಟು ಕೇವಲ ಎರಡು ಧರ್ಮಗಳ ಬಗ್ಗೆ ಮಾತ್ರ ಮಾಹಿತಿ ನೀಡುವುದರಿಂದ ಸಮಾಜಕ್ಕೆ ಹಾಗೂ ಎಳೆಯ ಮನಸ್ಸಿಗೆ ತಪ್ಪು ಸಂದೇಶ ಕಳುಹಿಸಿದಂತಾಗುತ್ತದೆ ಎನ್ನುವ ಆಭಿಪ್ರಾಯ ವ್ಯಕ್ತವಾಗಿದೆ. ಈ ಪಾಠ್ಯವನ್ನು ಪುಸ್ತಕದಿಂದ ತೆಗೆದು ಹಾಕುವಂತೆ ಒತ್ತಾಯ ಕೇಳಿಬರುತ್ತಿದೆ.
ಈ ವಿವಾದಿತ ಪಾಠ್ಯವನ್ನು ಈ ಕೂಡಲೇ ಪುಸ್ತಕದಿಂದ ತೆಗೆದು ಹಾಕುವಂತೆ ಹಿಂದೂ ಸಂಘಟನೆಗಳೂ ಒತ್ತಾಯಿಸಿದ್ದು, ರಾಜ್ಯ ಸರಕಾರದ ವಿರುದ್ದ ಉಗ್ರ ಹೋರಾಟಕ್ಕೆ ಅಣಿಯಾಗುತ್ತಿವೆ.
Click this button or press Ctrl+G to toggle between Kannada and English