ಬೆಂಗಳೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮಂತ್ರಿಮಂಡಲ ರಚನೆಯ ಮೊದಲ ಹಂತದಲ್ಲಿ ಜಾತ್ಯತೀತ ಜನತಾ ದಳದ 9 ಮಂದಿ ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಥಮ ಹಂತದಲ್ಲಿ ತಮ್ಮ ಪಕ್ಷದ 8 ರಿಂದ 9 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ಚೀಕರಿಸಲಿದ್ದಾರೆ. ಇನ್ನು ಮೂರು ನಾಲ್ಕು ಸಚಿವ ಸ್ಥಾನಗಳ ಬಗ್ಗೆ ಆಯ್ಕೆ ನಡೆಯಲಿದೆ. ಸಂಪುಟದಲ್ಲಿ ಸ್ಥಾನ ಮತ್ತು ಖಾತೆಗಳ ಹಂಚಿಕೆ ಬಗ್ಗೆ ಜೆಡಿಎಸ್ ಶಾಸಕರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮುಂದಿನ ಹಂತದ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಶಾಸಕರ ಆಯ್ಕೆ ಕುರಿತು ಮಾಜಿ ಪ್ರಧಾನಿ, ಪಕ್ಷದ ವರಿಷ್ಠ ದೇವೇಗೌಡರಿಗೆ ಸಂಪೂರ್ಣ ಸ್ವಾತಂತ್ರ ನೀಡಲಾಗಿದೆ ಎಂದು ಹೇಳಿದರು.
ನಾವು ಇಂದು ನಮ್ಮ ಶಾಸಕರೊಂದಿಗೆ ಸಭೆ ನಡೆಸಿ ಚರ್ಚಿಸಿದ್ದೇವೆ. ಪರಸ್ಪರ ಸಹಕಾರದೊಂದಿಗೆ ಉತ್ತಮ ಆಡಳಿತ ನೀಡುವಂತೆ ದೇವೇಗೌಡರು ಎಲ್ಲ ಶಾಸಕರಿಗೆ ಸಲಹೆ ಮಾಡಿದ್ದಾರೆ ಎಂದು ಸಿಎಂ ತಿಳಿಸಿದರು.
Click this button or press Ctrl+G to toggle between Kannada and English