ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನನಗೆ ಯಾವುದೇ ಅಸಮಾಧಾನವಿಲ್ಲ. ಕೆಲ ಮಾಧ್ಯಮಗಳು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿವೆ. ಸಂಪೂರ್ಣ ಸಮಾಧಾನ ಇಲ್ಲ ಅಂತಷ್ಟೆ ನಾನು ಹೇಳಿದ್ದೆ ಎಂದು ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರು ಸ್ಪಷ್ಟನೆ ನೀಡಿದರು.
ಮೈಸೂರು ಮಾಧ್ವ ವಿದ್ಯಾರ್ಥಿ ನಿಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಾಧನೆಗಳು ಸಮಾಧಾನ ತಂದಿಲ್ಲ ಅಂತ ನಾನು ಹೇಳಿಲ್ಲ. ಕಪ್ಪು ಹಣ, ಗಂಗಾ ನದಿ ಶುದ್ಧೀಕರಣ ಆಗಿಲ್ಲ ಎಂದು ನನಗೆ ಮಾಹಿತಿ ಬಂತು. ಈ ಎರಡು ವಿಷಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ನಿಜ. ಪೂರ್ಣ ಪ್ರಮಾಣದಲ್ಲಿ ಸಾಧನೆ ಮಾಡಿಲ್ಲ ಅಂತ ಹೇಳಿದ್ದೆ. ಈ ಮಾತಿನ ಹಿಂದೆ ಕೇಂದ್ರ ಸರ್ಕಾರಕ್ಕೆ ಉತ್ತೇಜನ ನೀಡುವ ಉದ್ದೇಶವಿದೆ ಎಂದು ಹೇಳಿದರು.
ಆದ್ರೆ ಕೆಲ ಬಿಜೆಪಿ ನಾಯಕರು ನನ್ನ ಹೇಳಿಕೆಯನ್ನು ಬೇರೆ ರೀತಿ ಅರ್ಥ ಮಾಡಿಕೊಂಡು ಪ್ರತಿಕ್ರಿಯೆ ನೀಡಿದರು.
ಕೇಂದ್ರ ಸಚಿವ ಸದಾನಂದಗೌಡ ಮಾತ್ರ ನನ್ನ ಹೇಳಿಕೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಇನ್ನೂ ಒಂದು ವರ್ಷ ಕಾಲಾವಕಾಶ ಇದೆ. ಈ ಅವಧಿಯಲ್ಲಿ ಇನ್ನೂ ಸಾಧನೆ ಮಾಡಬಹುದು. ಕೇಂದ್ರ ಸರ್ಕಾರ ಇನ್ನು ಹೆಚ್ಚಿನ ಸಾಧನೆ ಮಾಡಲಿ ಎಂಬ ಉದ್ದೇಶ ನನ್ನದು ಎಂದರು.
ಜೆಡಿಎಸ್- ಕಾಂಗ್ರೆಸ್ ಸರ್ಕಾರವೂ ಐದು ವರ್ಷ ಪೂರೈಸಲಿ. ಕೇಂದ್ರ ಸರ್ಕಾರ ಐದು ವರ್ಷ ಪೂರೈಸಬೇಕು ಅಂತ ಹೇಳಿದ್ದೆ.
ಕೇಂದ್ರ ಸರ್ಕಾರ ಮಾತ್ರವಲ್ಲ, ಈಗಿನ ರಾಜ್ಯ ಸರ್ಕಾರವೂ ಐದು ವರ್ಷ ಪೂರೈಸಲಿ ಎಂಬುದು ನನ್ನ ಅಪೇಕ್ಷೆ. ಯಾವುದೇ ಸರ್ಕಾರ ಇರಲಿ, ಅಧಿಕಾರದ ಪೂರ್ಣ ಅವಧಿ ಆಡಳಿತ ನಡೆಸಬೇಕು. ಪದೇ ಪದೆ ಚುನಾವಣೆ ನಡೆಯಬಾರದು ಎಂದು ಹೇಳಿದರು.
ಚುನಾವಣೆಯಿಂದ ದುಂದು ವೆಚ್ಚ, ಗಲಾಟೆ, ಗದ್ದಲ ಆಗುತ್ತೆ. ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಪಕ್ಷಗಳು ಸೇರಿ ಸರ್ಕಾರ ರಚಿಸಿವೆ. ಇದಕ್ಕಾಗಿ ರೆಸಾರ್ಟ್ ರಾಜಕಾರಣ ಮಾಡಿವೆ. ಆದ್ರೆ ಈಗಲೂ ಆ ಪಕ್ಷಗಳಿಗೆ ಭಯ ಇದೆ. ಹಾಗಾಗಿ ರೆಸಾರ್ಟ್ ರಾಜಕಾರಣ ನಿಲ್ಲಬೇಕು ಎಂದರು.
Click this button or press Ctrl+G to toggle between Kannada and English