ಹುಸೈನಬ್ಬ ಕೊಲೆ ಪ್ರಕರಣಕ್ಕೆ ಟ್ವಿಸ್ಟ್‌‌… ಪೊಲೀಸರು ಸೇರಿ 10 ಮಂದಿ ಅರೆಸ್ಟ್‌

12:08 PM, Wednesday, June 6th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

husanaibಉಡುಪಿ: ಉಡುಪಿಯಲ್ಲಿ ಇತ್ತೀಚೆಗೆ ನಡೆದ ದನದ ವ್ಯಾಪಾರಿಯ ಸಂಶಯಾಸ್ಪದ ಸಾವಿನ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಹಿರಿಯಡ್ಕ ಠಾಣಾ ಪೊಲೀಸರು, ಭಜರಂಗ ದಳದ ಕಾರ್ಯಕರ್ತರ ಜೊತೆಗೂಡಿ ದನದ ವ್ಯಾಪಾರಿ ಹುಸೇನಬ್ಬ ಸಾವಿಗೆ ಕಾರಣರಾಗಿದ್ದಾರೆ ಎಂಬ ಆರೋಪ ಹಿನ್ನಲೆ ಹಿರಿಯಡ್ಕ ಎಸ್‌‌ಐ ಸಹಿತ ಮೂವರು ಪೊಲೀಸರು ಹಾಗೂ ಏಳು ಮಂದಿ ಭಜರಂಗದಳ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಹುಸೈನಬ್ಬ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದಲ್ಲಿ ಮೇ. 30ರಂದು ಬೆಳಗ್ಗೆ ದನದ ವ್ಯಾಪಾರಿ ಹುಸೈನಬ್ಬ ಶವ ದೊರೆತಿತ್ತು. ಮೂಲತಃ ಜೋಕಟ್ಟೆಯವರಾದ ಹುಸೇನಬ್ಬ ಕಳೆದ 30 ವರ್ಷಗಳಿಂದ ಜಾನುವಾರು ವ್ಯಾಪಾರ ಮಾಡುತ್ತಿದ್ದರು. ನಿರ್ಜನ ಪ್ರದೇಶದಲ್ಲಿ ಅವರ ಶವ ಸಿಕ್ಕಾಗ, ಈ ಸಾವಿನ ಬಗ್ಗೆ ಅನೇಕ ಸಂಶಯಗಳು ವ್ಯಕ್ತವಾಗಿದ್ದವು.

ಆರಂಭದಲ್ಲಿ ಇದೊಂದು ಅಸಹಜ ಸಾವು ಎಂಬ ಪ್ರಕರಣ ಹಿರಿಯಡ್ಕ ಠಾಣೆಯಲ್ಲಿ ದಾಖಲಾಗಿತ್ತು. ಅಕ್ರಮವಾಗಿ ದನ ಸಾಗಿಸುತ್ತಿದ್ದಾಗ, ಹುಸೈನಬ್ಬ ಸಹಿತ ಮೂವರ ತಂಡವನ್ನು ಪೊಲೀಸರು ಅಡ್ಡಗಟ್ಟಿದ್ದರು. ಜೊತೆಗೆ ಭಜರಂಗದಳದ ಕಾರ್ಯಕರ್ತರೂ ಇದ್ದರು ಎನ್ನಲಾಗಿದೆ. ಈ ವೇಳೆ ವೃದ್ಧ ಹುಸೈನಬ್ಬರನ್ನು ಬಿಟ್ಟು ಉಳಿದಿಬ್ಬರು ಸ್ಥಳದಿಂದ ಓಡಿದ್ದರು. ಮೊದಲೇ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದ ಹುಸೈನಬ್ಬ, ಸುಸ್ತಾಗಿ ಕುಸಿದು ಬಿದ್ದು ಸಾವಪ್ಪಿದ್ದರು ಎಂಬ ಚಿತ್ರಣ ನೀಡಲಾಗಿತ್ತು.

ಆದರೆ, ಘಟನಾ ಸ್ಥಳದಿಂದ ತಪ್ಪಿಸಿಕೊಂಡಿದ್ದ ಹುಸೈನಬ್ಬ ಪುತ್ರ ಮಂಗಳೂರಿನ ಜೋಕಟ್ಟೆಗೆ ತೆರಳಿದ್ದ. ಬಂಧುಗಳ ಮುಂದೆ ವಾಸ್ತವಾಂಶ ತೆರೆದಿಟ್ಟಾಗ ಪ್ರಕರಣದ ತೀವ್ರತೆ ಗಮನಕ್ಕೆ ಬಂದಿದೆ. ತಕ್ಷಣವೇ ಇದೊಂದು ಕೊಲೆ ಹಾಗೂ ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆದಿದೆ. ಅಲ್ಲದೆ ಭಜರಂಗದಳದೊಂದಿಗೆ ಪೊಲೀಸರು ಶಾಮೀಲಾಗಿದ್ದಾರೆ ಎಂಬ ದೂರು ದಾಖಲಿಸಲಾಯ್ತು. ಶವ ಪರೀಕ್ಷೆಯನ್ನು ಮಣಿಪಾಲ್‌ ಆಸ್ಪತ್ರೆಯಲ್ಲೇ ನಡೆಸಲಾಗಿತ್ತು. ಭಜರಂಗದಳದವರು ಪೊಲೀಸರ ಸಮ್ಮುಖದಲ್ಲೇ ಹಲ್ಲೆ ಮಾಡಿದ್ದಾರೆ ಎಂದು ಹುಸೈನಬ್ಬ ಕುಟುಂಸ್ಥರು ಆರೋಪಿಸಿದ್ದರು. ಈ ಘಟನೆಯಲ್ಲಿ ಭಾಗಿಯಾದ ಸೂರಿ ಯಾನೇ ಸುರೇಶ್ ಮೆಂಡನ್ ಸೇರಿದಂತೆ ಮತ್ತಿತರರ ಮೇಲೆ ಸಂಶಯ ವ್ಯಕ್ತಪಡಿಸಿ ದೂರು ದಾಖಲಿಸಿದ್ರು.

ತಕ್ಷಣವೇ ಕಾರ್ಯಪ್ರವೃತ್ತರಾದ ದಕ್ಷ ಎಸ್ಪಿ ಲಕ್ಷ್ಮಣ ನಿಂಬರ್ಗಿ, ಘಟನೆಯಲ್ಲಿ ಆರೋಪ ಹೊತ್ತ ಹಿರಿಯಡ್ಕ ಎಸ್‌‌ಐ ಡಿ.ಎನ್. ಕುಮಾರ್ ಅವರನ್ನು ಅಮಾನತು ಮಾಡಿದ್ದರು. ಹುಸೈನಬ್ಬ ಬಂಧುಗಳು ನೀಡಿದ ದೂರಿನ ಆಧಾರದ ಮೇಲೆ ಸೂರಿ ಮತ್ತಿತರ ಭಜರಂಗದಳ ಕಾರ್ಯಕರ್ತರಿಗೆ ಬಲೆ ಬೀಸಿದ್ದರು.

ತನಿಖೆಯ ವೇಳೆ ಆರೋಪಿಗಳು ಬಳ್ಳಾರಿಯಲ್ಲಿ ತಲೆಮರೆಸಿಕೊಂಡಿರೋದು ಪತ್ತೆಯಾಗಿದೆ. ಬಳ್ಳಾರಿ ಪೊಲೀಸರ ಸಹಾಯ ಪಡೆದು ಇಬ್ಬರನ್ನು ದಸ್ತಗಿರಿ ಮಾಡಿದ್ದಾರೆ. ಭಜರಂಗದಳ ಮುಖಂಡ ಸೂರಿ ಯಾನೇ ಸುರೇಶ್ ಮೆಂಡನ್ ಹಾಗೂ ಪ್ರಸಾದ್ ಬಂಧಿತ ಆರೋಪಿಗಳು. ಸೂರಿ ಈ ಮೊದಲೂ ಹುಸೇನಬ್ಬ ಮೇಲೆ ಅಟ್ಯಾಕ್ ಮಾಡಿದ್ದರು. ಅಕ್ರಮ ದನ ಸಾಗಿಸುವಾಗ ಅಡ್ಡಗಟ್ಟಿ ಮೂತ್ರ ಕುಡಿಸಿ ಅವಮಾನ ಮಾಡಿದ್ದ ಘಟನೆಯೂ ಹಿಂದೊಮ್ಮೆ ನಡೆದಿತ್ತು ಎನ್ನಲಾಗಿದೆ.

ಆದ್ದರಿಂದ ಈತ ಶಾಮೀಲಾಗಿರೋದು ಖಚಿತವಾದ ನಂತರ, ವಿಚಾರಣೆಯ ಆಧಾರದಲ್ಲಿ ಮತ್ತೆ ಐದು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ಘಟನೆಯ ವೇಳೆ ಸ್ಥಳದಲ್ಲಿದ್ದ ಶೈಲೇಶ್, ಉಮೇಶ್ ಶೆಟ್ಟಿ, ರತನ್, ಚೇತನ್, ಗಣೇಶ್ ನಾಯ್ಕ ಎಂದು ಗುರುತಿಸಲಾಗಿದೆ. ಆರೋಪಿಗಳ ತನಿಖೆಯ ವೇಳೆ ಪೊಲೀಸರು ಶಾಮೀಲಾಗಿರುವ ಬಗ್ಗೆ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ವಾಸ್ತವದಲ್ಲಿ ಹಲ್ಲೆ ನಡೆದಾಗ ಹಿರಿಯಡ್ಕ ಪೊಲೀಸರು ಸ್ಥಳದಲ್ಲೇ ಇದ್ದರು. ಹಲ್ಲೆಯಲ್ಲಿ ಅವರೂ ಶಾಮೀಲಾಗಿದ್ದಾರೆ ಎನ್ನಲಾಗಿದೆ.

ಹುಸೇನಬ್ಬ ಮತ್ತು ತಂಡ13 ಹಸುಗಳನ್ನು ಸ್ಕಾರ್ಪಿಯೋ ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುವ ಮಾಹಿತಿಯನ್ನು ಭಜರಂಗದಳದವರೇ ಪೊಲೀಸರಿಗೆ ನೀಡಿದ್ದರು. ಇದೇ ಮಾಹಿತಿಯ ಆಧಾರದಲ್ಲಿ ಪೆರ್ಡೂರಿನಲ್ಲಿ ಇವರನ್ನು ಅಡ್ಡಗಟ್ಟಲಾಗಿತ್ತು. ತಪ್ಪಿಸಿಕೊಂಡು ಹೋಗಲಾಗದ ಹುಸೇನಬ್ಬ ಭಜರಂಗ ದಳ ಕಾರ್ಯಕರ್ತರ ಕೈಗೆ ಸಿಕ್ಕಿದ್ದಾರೆ. ವೃದ್ಧಾಪ್ಯದ ಕಾರಣಕ್ಕೆ ಎರಡೇಟು ಬಿದ್ದಾಗ ಸುಸ್ತಾಗಿ ಬಿದ್ದಿದ್ದಾರೆ. ಬಳಿಕ ಹಸುಗಳಿದ್ದ ವಾಹನವನ್ನು ಆರೋಪಿಗಳ ಪೈಕಿ ಸೂರಿ ಠಾಣೆಗೆ ಸಾಗಿಸಿದರೆ, ಹುಸೇನಬ್ಬ ಪೊಲೀಸರ ಜೀಪಿನಲ್ಲಿ ಕೂತಿದ್ದರು. ಆದರೆ ಹಲ್ಲೆಯ ಪರಿಣಾಮ ಅವರು ಜೀಪಿನಲ್ಲೇ ಅಸುನೀಗಿದ್ದಾರೆ.

ವಿಷಯ ತಿಳಿದ ಎಸ್‌ಐ ಕುಮಾರ್, ಶವವನ್ನು ಆಸ್ಪತ್ರೆಗೆ ಸಾಗಿಸುವ ಬದಲಾಗಿ, ಭಜರಂಗದಳ ಕಾರ್ಯಕರ್ತರ ನೆರವು ಪಡೆದು ಹಲ್ಲೆ ನಡೆದ ಸ್ಥಳದಿಂದ ಒಂದು ಕಿಮೀ ದೂರದಲ್ಲಿ ಶವವನ್ನು ಬಿಟ್ಟು ಬಂದಿದ್ದಾರೆ. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂಬಂತೆ ಬಿಂಬಿಸಿ ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದಾರೆ.

ತನಿಖೆಯಲ್ಲಿ ಈ ಆತಂಕಕಾರಿ ಸತ್ಯ ಹೊರ ಬೀಳುತ್ತಿದ್ದಂತೆ ಹಿರಿಯಡ್ಕ ಎಸ್‌‌ಐ ಕುಮಾರ್ ಅವರನ್ನು ತನಿಖೆ ನಡೆಸಲಾಗಿದೆ. ಕೃತ್ಯ ಒಪ್ಪಿಕೊಂಡಿದ್ದ ಕುಮಾರ್ ಮತ್ತು ಜೀಪು ಚಾಲಕ ಗೋಪಾಲ್, ಹೆಡ್ ಕಾನ್‌ಸ್ಟೇಬಲ್ ಮೋಹನ ಕೋತ್ವಾಲ್‌‌ರನ್ನು ಬಂಧಿಸಲಾಗಿದೆ.

ಬಂಧಿತ ಪೊಲೀಸರಿಗೆ 14 ದಿನಗಳ ನ್ಯಾಯಾಂಗ ಬಂಧನ ಘೋಷಿಸಲಾಗಿದ್ದು, ಕಾರವಾರ ಜೈಲಿಗೆ ಕರದೊಯ್ಯಲಾಗಿದೆ. ಪ್ರಕರಣದಲ್ಲಿ ಇನ್ನೂ ಕೆಲವರ ಬಂಧನ ಆಗಬೇಕಿದೆ. ಸಾವು ಸಂಭವಿಸಿದ್ದು ಹಲ್ಲೆಯಿಂದಲೋ ಅಥವಾ ಹೃದಯಾಘಾತದಿಂದಲೋ ಎನ್ನುವ ಬಗ್ಗೆ ಮರಣೋತ್ತರ ಪರೀಕ್ಷಾ ವರದಿ ಬಂದ ನಂತರವಷ್ಟೇ ತಿಳಿಯಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English