ಮಂಗಳೂರು: ಪೇಜಾವರ ಸ್ವಾಮೀಜಿಯವರು ಸನ್ಯಾಸಿಗಳು. ಅವರು ಹೆಚ್ಚಾಗಿ ಟಿವಿ ನೋಡೋದಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳು ಹಾಗೂ ಸಾಧನೆಗಳ ಬಗ್ಗೆ ಅವರಿಗೆ ಅರಿವಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ನಿರೀಕ್ಷಿತ ಮಟ್ಟದ ಸಾಧನೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಕೇಂದ್ರ ಸರಕಾರ ದಾಖಲೆ ಪ್ರಮಾಣದ ಸಾಧನೆಗಳನ್ನು ಮಾಡಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗರಿಮೆ ಹೆಚ್ಚಿಸಿದೆ. ದೇಶದಾದ್ಯಂತ ಹಲವಾರು ಜನಪರ ಅಭಿವೃದ್ಧಿ ಯೋಜನೆಗಳನ್ನು ನರೇಂದ್ರ ಮೋದಿ ನೇತೃತ್ವದ ಸರಕಾರ ಕೈಗೊಂಡಿದೆ. ಈ ಎಲ್ಲಾ ಕೇಂದ್ರ ಸರ್ಕಾರದ ಸಾಧನೆ ಬಗ್ಗೆ ಪಕ್ಷದ ಹಿರಿಯರಿಂದ ಪೇಜಾವರ ಸ್ವಾಮಿಗಳಿಗೆ ಮನವರಿಕೆ ಮಾಡಲಾಗುವುದೆಂದು ಅವರು ಹೇಳಿದರು.
ಗಂಗಾ ಶುದ್ಧೀಕರಣದಲ್ಲಿ ಸರಕಾರ ಕೈಗೊಂಡ ಕಾರ್ಯ, ದೊರೆತ ಸಫಲತೆಯ ಬಗ್ಗೆಯೂ ಅವರಿಗೆ ಮನವರಿಗೆ ಮಾಡಲಾಗುವುದೆಂದು ಅವರು ಸ್ಪಷ್ಟಪಡಿಸಿದರು. ಪೇಜಾವರ ಸ್ವಾಮಿಗಳನ್ನು ಭೇಟಿಯಾಗುವವರು ಸರ್ಕಾರದ ಯೋಜನೆಗಳ ಬಗ್ಗೆ ಮಾತನಾಡದೇ ಇರೋದ್ರಿಂದ ಪೇಜಾವರ ಸ್ವಾಮಿಗಳು ತಪ್ಪು ಅಭಿಪ್ರಾಯ ಹೊಂದಿರಬಹುದು ಎಂದು ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು. ರಾಜ್ಯ ದಲ್ಲಿ ಅಸ್ತಿತ್ವಕ್ಕೆ ಬಂದ ಸರಕಾರ ಕೇವಲ ರೆಸಾರ್ಟ್ ಹಾಗೂ ದೆಹಲಿ ರಾಜಕಾರಣ ಮಾಡಿಕೊಂಡು ಕಾಲ ಕಳೆಯುತ್ತಿದೆ.
ರಾಜ್ಯದ ಜನರ ಸಮಸ್ಯೆ ಆಲಿಸಲು ಯಾರಿಗೂ ಸಮಯವಿಲ್ಲ . ಎಲ್ಲರೂ ಖಾತೆಗಾಗಿ ಲಾಬಿ ನಡೆಸುವುದರಲ್ಲೇ ತಲ್ಲಿನರಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಅವರು ಕಿಡಿಕಾರಿದರು. ರಾಜ್ಯದ ಇಂಧನ ಖಾತೆಗಾಗಿ ಭಾರೀ ಕಚ್ಚಾಟ ನಡೆಸಲಾಗುತ್ತಿದೆ. ಈ ಹಿಂದಿನ ಸರಕಾರದ ಸಂದರ್ಭದಲ್ಲಿ ಇಂಧನ ಇಲಾಖೆಯಲ್ಲಿ ನಡೆದ ಅವ್ಯವಹಾರಗಳನ್ನು ಮುಚ್ಚಿಹಾಕಲು ಈ ಕಸರತ್ತು, ಸ್ಪರ್ಧೆ ನಡೆಸಲಾಗುತ್ತಿದೆ ಎಂದು ಅವರು ಪರೋಕ್ಷವಾಗಿ ಡಿಕೆ ಶಿವಕುಮಾರ್ ಅವರನ್ನು ಕುಟುಕಿದರು. ರಾಜ್ಯದಲ್ಲಿ ಮತ್ತೆ ರೈತರ ಆತ್ಮಹತ್ಯೆ ಮುಂದುವರೆದಿದೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮಾತ್ರ ಇದರ ಪರಿವೆಯೇ ಇಲ್ಲದಂತೆ ವರ್ತಿಸುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
Click this button or press Ctrl+G to toggle between Kannada and English