ಬೆಂಗಳೂರು: ಹಲವು ಕಸರತ್ತಿನ ಮೂಲಕ ರಚನೆಗೊಂಡ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವು ಕೊನೆಗೂ ಸಚಿವ ಸಂಪುಟ ರಚನೆಯ ಕಸರತ್ತು ಪೂರ್ಣಗೊಳಿಸಿದೆ. ಸಮ್ಮಿಶ್ರ ಸರ್ಕಾರದ ಸಚಿವರಾಗಿ ಜೆಡಿಎಸ್ ನ 10 ಮಂದಿ ಮತ್ತು ಕಾಂಗ್ರೆಸ್ ನ 15 ಮಂದಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅತ್ತ ಸಂಪುಟದಲ್ಲಿ ಸ್ಥಾನ ಪಡೆದವರು ಸಂಭ್ರಮಿಸುತ್ತಿದ್ದರೆ, ಹಲವು ಲಾಬಿಗಳನ್ನು ನಡೆಸಿದ ಹೊರತಾಗಿಯೂ ಸ್ಥಾನ ವಂಚಿತರಾದವರು ಬಹಿರಂಗವಾಗಿಯೇ ತಮ್ಮ ಅಸಮಾಧಾನಗಳನ್ನು ಹೊರಹಾಕುತ್ತಿದ್ದಾರೆ.
ಸಚಿವ ಸಂಪುಟಕ್ಕೆ ಆಯ್ಕೆ ಸಂದರ್ಭದಲ್ಲಿ ಎರಡೂ ಪಕ್ಷಗಳಲ್ಲಿ ಹಲವು ಹಿರಿಯರನ್ನು ದೂರ ಇಡಲಾಗಿದೆ. ಅವರ ಸ್ಥಾನದಲ್ಲಿ ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಅವರ ನೆರವಿನಿಂದ ಕಾಂಗ್ರೆಸ್ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಾರಿ ಸಚಿವ ಸಂಪುಟ ಹಂಚಿಕೆ ವೇಳೆ ಅನೇಕ ಘಟಾನುಘಟಿ ನಾಯಕರಿಗೇ ಕೊಕ್ ನೀಡಲಾಗಿದೆ. ಮಾಜಿ ಸಚಿವರಾದ ದಿನೇಶ್ ಗುಂಡೂರಾವ್, ಎಂಬಿ ಪಾಟೀಲ್, ಈಶ್ವರ್ ಖಂಡ್ರೆ, ಎಸ್. ಆರ್. ಪಾಟೀಲ್, ರಾಮಲಿಂಗಾ ರೆಡ್ಡಿ, ಎಂ ಕೃಷ್ಣಪ್ಪ, ಹೆಚ್. ಕೆ. ಪಾಟೀಲ್, ಸತೀಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ದೂರ ಇಡಲಾಗಿದೆ.
ಇನ್ನು ಜೆಡಿಎಸ್ ನಲ್ಲಿ ಹಿರಿಯ ಮುಖಂಡರಾದ ಮಾಜಿ ಸಚಿವ ಬಸವರಾಜ್ ಹೊರಟ್ಟಿ, ಎ.ಟಿ. ರಾಮಸ್ವಾಮಿ, ಎಚ್.ವಿಶ್ವನಾಥ್, ಬಿಎಂ ಫಾರೂಕ್ ಅವರನ್ನು ಸಂಪುಟದಿಂದ ದೂರ ಇಡಲಾಗಿದೆ.
ಹೊಸಬರಿಗೆ ಅವಕಾಶ ನೀಡಿ ಹಳಬರನ್ನು ಮೂಲೆಗುಂಪು ಮಾಡಿರುವ ಕ್ರಮಕ್ಕೆ ಎರಡೂ ಪಕ್ಷಗಳಲ್ಲಿ ಅಪಸ್ವರಗಳು ಕೇಳಿಬಂದಿವೆ. ಆದರೆ ಎರಡೂ ಪಕ್ಷಗಳು ತಂತ್ರಗಾರಿಕೆಯ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಂಡಿವೆ ಎನ್ನಲಾಗಿದ್ದು, ಮುಂದಿನ ನಡೆಯ ಬಗ್ಗೆ ವ್ಯಾಪಕ ಕುತೂಹಲ ಮೂಡಿದೆ.
Click this button or press Ctrl+G to toggle between Kannada and English