ಮಂಗಳೂರು: ವಿಧಾನಪರಿಷತ್ ನೈಋತ್ಯ ಶಿಕ್ಷಕ ಕ್ಷೇತ್ರದ ಅಭ್ಯರ್ಥಿಯಾಗಿರುವ ಒಬ್ಬರು ಅಂಚೆ ಇಲಾಖೆಯನ್ನೆ ಯಾಮಾರಿಸಿ ಮತದಾರರನ್ನು ತಲುಪಲು ಯತ್ನಿಸಿರುವ ಘಟನೆಯೊಂದು ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಅಭ್ಯರ್ಥಿ ಮತದಾರರಿಗೆ ಕಳುಹಿಸಿದ ಮನವಿ ಪತ್ರಗಳಿಗೆ ನಕಲಿ ಅಂಚೆ ಚೀಟಿಗಳನ್ನು ಬಳಸಿದ್ದು, ಈ ಕುರಿತು ಮಂಗಳವಾರ ಬಲ್ಮಠದ ಅಂಚೆ ವಿಭಾಗೀಯ ಕಚೇರಿಗೆ ಬೆಂಗಳೂರಿನ ಪ್ರಾದೇಶಿಕ ಕಚೇರಿಯಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅವರ ಎಲ್ಲಾ ಮನವಿ ಪತ್ರಗಳನ್ನು ತಡೆಹಿಡಿಯಲಾಗಿದೆ.
ವಿಧಾನ ಪರಿಷತ್ ನೈಋತ್ಯ ಶಿಕ್ಷಕ ಪದವೀಧರ ಕ್ಷೇತ್ರಕ್ಕೆ ಜೂ.8ರಂದು ಚುನಾವಣೆ ನಡೆಯಲಿದೆ. ಮತದಾರರನ್ನು ತಲುಪಲು ಹೆಚ್ಚಿನ ಅಭ್ಯರ್ಥಿಗಳು ಅಂಚೆ ಇಲಾಖೆಯನ್ನೆ ಆಶ್ರಯಿಸಿದ್ದಾರೆ. ನೈಋತ್ಯ ಶಿಕ್ಷಕ ಕ್ಷೇತ್ರದಿಂದ ಸ್ಪರ್ಧಿಸಿರುವ ಶಿವಮೊಗ್ಗ ಜಿಲ್ಲೆಯ ಡಿ.ಕೆ ತುಳಸಪ್ಪ ಕೂಡ ಅಂಚೆ ಮೂಲಕ ಮನವಿ ಪತ್ರಗಳನ್ನು ಕಳುಹಿಸಿದ್ದು, ಅವುಗಳಿಗೆ ಜೆರಾಕ್ಸ್ ಮಾಡಲಾದ ಅಂಚೆ ಚೀಟಿಗಳನ್ನು ಬಳಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಂಬೇಡ್ಕರ್, ಸಿ ವಿ ರಾಮನ್, ಶಿವಾಜಿ ಭಾವಚಿತ್ರವಿರುವ ಅಂಚೆ ಚೀಟಿಯನ್ನು ನಕಲಿ ಮಾಡಿ ಅಂಚೆ ಮಾಡಲಾಗಿದೆ. ಈಗಾಗಲೇ ನಕಲಿ ಅಂಚೆ ಚೀಟಿ ಬಳಸಿರುವ 150 ಪತ್ರಗಳನ್ನು ತಡೆಹಿಡಿಯಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಅಂಚೆ ಅಧೀಕ್ಷಕ ಜಗದೀಶ್ ಪೈ, ಬೆಂಗಳೂರಿನಿಂದ ಬಂದ ಮಾಹಿತಿ ಆಧಾರದ ಮೇಲೆ ನಕಲಿ ಅಂಚೆ ಚೀಟಿ ಬಳಕೆ ಮಾಡಿರುವ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಈ ಪ್ರಕರಣ ಕುರಿತು ಇಲಾಖೆ ತನಿಖೆ ನಡೆಸುತ್ತಿದೆ. ಇನ್ನು ಮುಂದೆ ಬರುವ ಪತ್ರಗಳನ್ನು ತಡೆಹಿಡಿಯಲಾಗುವುದು ಎಂದು ತಿಳಿಸಿದರು.
Click this button or press Ctrl+G to toggle between Kannada and English