ಮೂಡಬಿದ್ರೆ : ಮೂಡಬಿದ್ರೆಯ ವಿದ್ಯಾಗಿರಿಯಲ್ಲಿ ಡಾ| ಎಂ. ಮೋಹನ್ ಆಳ್ವ ಅವರ ಸಾರಥ್ಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂರು ದಿನಗಳಕಾಲ ನಡೆಯಲಿರುವ ಎಂಟನೇ ಆಳ್ವಾಸ್ ನುಡಿಸಿರಿಯ ಉದ್ಘಾಟನೆಯನ್ನು ಶುಕ್ರವಾರ ಡಾ| ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು.
ನುಡಿಸಿರಿಯ ಉದ್ಘಾಟನೆಗೂ ಮುನ್ನ ವೈಭವದ ಮೆರವಣಿಯನ್ನು ಎತ್ತರದ ವೇದಿಕೆಯ ಮೇಲಿರಿಸಿದ್ದ ತುಳುನಾಡಿನ ಆರಾಧನೆ ದೈವದ ಪ್ರತಿರೂಪದ ಎದುರಿಗಿದ್ದ ದೀವಟಿಗೆ ಬೆಂಕಿ ಹಚ್ಚುವ ಮೂಲಕ ಮೂಡಬಿದರೆಯ ಶಾಸಕ ಅಭಯಚಂದ್ರ ಜೈನ್ ಅವರು ಚಾಲನೆ ನೀಡಿದರು.
ಸಮ್ಮೇಳನಾಧ್ಯಕ್ಷರು, ಉದ್ಘಾಟಕರು, ಸಂಸದರು, ಶಾಸಕರು ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ಮೆರವಣಿಗೆ ಚಾಲನೆ ಪಡೆದುಕೊಂಡಿತು. ತುಳುನಾಡಿನ ಸಾಂಪ್ರದಾಯಿಕ ಮುಂಡಾಸು ತೊಟ್ಟ ಅತಿಥಿಗಳು ಮೆರವಣಿಗೆಯಲ್ಲಿ ಸಾಗಿದರು. ಚಂಡೆ, ಕಹಳೆ, ಹುಲಿವೇಷ, ಯಕ್ಷಗಾನ ಮುಖವರ್ಣಿಕೆ, ಡೋಳು ಬಡಿಯುವವರ ತಂಡ ವೀರಗಾಸೆ, ಕರಗ, ಪಟಕುಣಿತ, ಡೋಳು ಕುಣಿತ, ಬ್ಯಾಂಡ್, ಹಸಿರುಶಾಲು ಹೊದ್ದುಕೊಂಡ ರೈತರ ಸಾಲು, ಜಟ್ಟಿಗಳು, ಕಲಶ ಹಿಡಿದ ಸ್ತ್ರೀಯರು, ಪೂಜಾ ಕುಣಿತ ಇವೇ ಮೊದಲಾದ ತಂಡಗಳು ಸಾಂಸ್ಕೃತಿಕ ಮೆರವಣಿಗೆಯಲ್ಲಿ ಸಾಗಿದವು.
ನುಡಿಸಿರಿಗಾಗಿ ಸಿದ್ಧಗೊಂಡ ವಿಶೇಷ ವೇದಿಕೆಯಲ್ಲಿ ಇರಿಸಲಾದ ಕಳಸದಲ್ಲಿ ಭತ್ತ ತುಂಬಿ ಅದರ ಮೇಲೆ ಭತ್ತದ ತೆನೆ ಇರಿಸಿ ಆ ತೆನೆಗೆ ಬೆಳ್ಳಿಯ ತಂಬಿಗೆಯಿಂದ ಹಾಲು ಎರೆದು ಸಮ್ಮೇಳನವನ್ನು ಉದ್ಘಾಟಿಸಲಾಯಿತು. ತುಳುನಾಡಿನ ಕೃಷಿ ಸಂಪ್ರದಾಯವನ್ನು ಇಲ್ಲಿ ನೆನಪಿಸಲಾಯಿತು. ಇದೇ ವೇಳೆ ಸಭಾಂಗಣದ ಪಕ್ಕದಲ್ಲಿ ರೈತಬಂಧುಗಳು ಪಡಿಮಂಚದಲ್ಲಿ ಭತ್ತದ ಸೂಡಿಗಳನ್ನು ಬಡಿದು ಭತ್ತದ ಕಾಳುಗಳನ್ನು ಚೆಲ್ಲಿ ಉದ್ಘಾಟನೆಯನ್ನು ಮತ್ತಷ್ಟು ಮೆರುಗುಗೊಳಿಸಿದರು.
ಉದ್ಘಾಟನೆಗೊಳಿಸಿದ ರಾಮಚಂದ್ರ ಬರಗೂರು ಮಾತನಾಡಿ ಕನ್ನಡನಾಡು ನುಡಿಯ ಸಂಸ್ಕೃತಿಗಾಗಿ ಮಾಡುತ್ತಿರುವ ಮೋಹನ್ ಆಳ್ವರ ಸಾಧನೆ ಅದ್ವಿತೀಯ, ನುಡಿಸಿರಿಯು ಸಂಸ್ಕಾರ ಹಾಗೂ ಸಾಂಸ್ಕೃತಿಕ ಸಾಮರಸ್ಯದ ಸಮಾವೇಶ ಎಂದು ಹೇಳಿದರು.
ಸಮ್ಮೇಳನದ ಸರ್ವಾಧ್ಯಕ್ಷ ಕಲಬುರ್ಗಿ ಅವರು ಮಾತನಾಡಿ ಕನ್ನಡದ ಶ್ರೀಮಂತಿಕೆಯನ್ನು ಸಂಸ್ಕೃತಿಯನ್ನಾಗಿ ಪರಿವರ್ತಿಸಿದ ಈ ಪ್ರಯೋಗಕ್ಕೆ ಆಳ್ವರಿಗೆ ಕನ್ನಡಿಗರ ಅಭಿನಂದನೆಗಳು’ ಎಂದರು.
ಸಾಂಸ್ಕೃತಿಕ ಹೃದಯ ನಿರಾಕಾರ ಸ್ವರೂಪ. ಈ ನಿರಾಕಾರ ಸ್ವರೂಪದಿಂದ ಅತ್ಯಪೂರ್ವ ಸಾಧನೆಯಾಗುತ್ತದೆ. ಸಾಂಸ್ಕೃತಿಕ ಶೋಧ, ಆತ್ಮಾವಲೋಕನ ಸಾಧ್ಯವಾಗುತ್ತದೆ. ಸಂಘರ್ಷ, ವೈರತ್ವವು ಚರಿತ್ರೆಯಲ್ಲಿದೆ. ವೈರತ್ವವನ್ನು ವೀರತ್ವಕ್ಕೆ, ಸಂಘರ್ಷವನ್ನು ಸ್ವಾಭಿಮಾನಕ್ಕೆ ಸಮೀಕರಿಸುವವರಿದ್ದಾರೆ. ಆದರೆ, ಇದೆಲ್ಲವನ್ನೂ ಮೀರಿ ಆರೋಗ್ಯಕರ ವೈಚಾರಿಕ ಸಂಘರ್ಷದಿಂದ ಮಾನವೀಯ ಸಾಮರಸ್ಯ ಸಾಧಿಸಬೇಕು ಎಂದವರು ಹೇಳಿದರು.
Click this button or press Ctrl+G to toggle between Kannada and English