ಬೆಂಗಳೂರು: ದನಗಳ ಕಳವು ಮಾಡುತ್ತಿದ್ದ ವೇಳೆ ಹಿಡಿದುಕೊಟ್ಟ ವ್ಯಕ್ತಿ ಪೊಲೀಸ್ ಜೀಪಿನಲ್ಲೇ ಸಾವನ್ನಪ್ಪಿದ್ದರೂ ಅದನ್ನು ಬಿಜೆಪಿ ಹಾಗೂ ಸಂಘ ಪರಿವಾರದ ತಲೆಗೆ ಕಟ್ಟುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಉಡುಪಿ, ದಕ್ಷಿಣ ಕನ್ನಡದಲ್ಲಿ ನಿರಂತರವಾಗಿ ದನಗಳ ಕಳವು ನಡೆಯುತ್ತಿದೆ.ಸ್ಕಾರ್ಪಿಯೋ ಒಂದು ಪ್ರತಿದಿನ ರಾತ್ರಿ ಸಂಚರಿಸುತ್ತಿದ್ದು ದನ ಕಳವು ಮಾಡುತ್ತಿದೆ ಎನ್ನುವ ಮಾಹಿತಿಯನ್ನು ನಮ್ಮ ಕಾರ್ಯಕರ್ತರು ಪೊಲೀಸರಿಗೆ ನೀಡಿದ್ದರು. ಅದರಂತೆ ಮಧ್ಯರಾತ್ರಿ ಪೊಲೀಸ್ ಜೀಪ್ ಬಂದಿದ್ದನ್ನು ನೋಡಿ ಚಾಲಕ ಜೀಪನ್ನು ಹಿಂದಕ್ಕೆ ತೆಗೆಯುವ ಯತ್ನದಲ್ಲಿ ಅಪಘಾತಕ್ಕೀಡಾಯಿತು. ಅದರಲ್ಲಿ 15 ದನಗಳು ಇದ್ದವು, ಜೀಪಿನಲ್ಲಿದ್ದ ಮೂವರು ಪರಾರಿಯಾದರು.
ನಂತರ ಅಸನಬ್ಬ ಎನ್ನುವ ವ್ಯಕ್ತಿಯನ್ನು ಬಂಧಿಸಲಾಯಿತು, ಆತನನ್ನು ಪೊಲೀಸ್ ಜೀಪ್‌ನಲ್ಲಿ ಠಾಣೆಗೆ ಕರೆತರುವ ವೇಳೆ ಹೃದಯಾಘಾತದಿಂದ ಸತ್ತಿದ್ದ. ಆದರೆ ಇದನ್ನ ಬಿಜೆಪಿ, ಸಂಘ ಪರಿವಾರದ ಮೇಲೆ ಕಟ್ಟುವ ಷಡ್ಯಂತ್ರ ಮಾಡುತ್ತಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರುವ ಮುನ್ನವೇ ನಮ್ಮ ಏಳು ಕಾರ್ಯಕರ್ತರನ್ನು ಬಂಧಿಸಿದೆ. ಅಲ್ಲಿನ ಮೂವರು ಪೊಲೀಸರನ್ನು ಅಮಾನತು ಮಾಡಿದ್ದಾರೆ. ಹಿಂದೆ ಸಿದ್ದರಾಮಯ್ಯ ಸರ್ಕಾರದ ವೇಳೆ ಮಾಡುತ್ತಿದ್ದ ಕೆಲಸವನ್ನೇ ಈಗ ಸಮ್ಮಿಶ್ರ ಸರ್ಕಾರ ಮಾಡುತ್ತಿದೆ, ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಹಾಲಿಗೆ ನೀಡುವ ಪ್ರೋತ್ಸಾಹ ಧನದಲ್ಲಿ 2 ರೂ.ಕಡಿಮೆ ಮಾಡುವ ಹೇಳಿಕೆಯನ್ನು ಸಿಎಂ ನೀಡಿದ್ದಾರೆ. ಅಧಿಕಾರಕ್ಕೆ ಬಂದ ತಕ್ಷಣ ನಿಮಗೆ ರೈತರ ಮೇಲೇಕೆ ಸಿಟ್ಟು, 24 ಗಂಟೆಯಲ್ಲಿ ಸಾಲಮನ್ನಾ ಎಂದು ಹೇಳಿ ಕೈ ಕಟ್ಟಿದಿರಿ, ನಾವು ಬಂದ್ ಎಂದ ಕೂಡಲೇ ರೈತರ ಸಭೆ ಕರೆದಿರಿ, ಆದರೆ ಇನ್ನೂ ಯಾವ ಕ್ರಮ ಕೈಗೊಂಡಿಲ್ಲ. ಅದರ ಬೆನ್ನಲ್ಲೇ ರೈತರಿಗೆ ಮತ್ತೊಂದು ಬರೆ ಎಳೆಯುತ್ತಿದ್ದೀರಿ. ಪ್ರೋತ್ಸಾಹ ಧನದಿಂದ ಹಾಲಿನ ಉತ್ಪಾದನೆ ಹೆಚ್ಚಳವಾಗಿತ್ತು, ಈಗ ಅದನ್ನು ನಿಲ್ಲಿಸಲು ಹೊರಟಿದ್ದಾರೆ, ಯಾವ ಕಾರಣಕ್ಕೆ ಇದನ್ನು ಮಾಡಲು ಹೊರಟಿದ್ದೀರಿ, ಇದು ಜಾರಿಯಾಗಬಾರದು, ಹಿಂದಿನ ಸರ್ಕಾರ ನೀಡುತ್ತಿದ್ದ ರೀತಿಯಲ್ಲಿಯೇ ಪ್ರೋತ್ಸಾಹ ಧನ ಮುಂದುವರೆಯಬೇಕು ಮತ್ತು ಸಕಾಲದಲ್ಲಿ ರೈತರಿಗೆ ಹಣ ನೀಡಬೇಕು ಎಂದು ಒತ್ತಾಯಿಸಿದರು.
ಕಳೆದ ಒಂದು ತಿಂಗಳು ರೆಸಾರ್ಟ್ ರಾಜಕಾರಣ, ದೆಹಲಿ ರಾಜಕಾರಣ ನಡೆಯಿತು. ಅದರ ನಡುವೆ 15 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ಪರಿಹಾರ ನೀಡುವ, ಸಾಂತ್ವಾನ ಹೇಳುವ ಕೆಲಸವನ್ನು ಇವರು ಮಾಡಿಲ್ಲ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಒಂದೇ ದಿನ ದಾಖಲೆಯ ಮಳೆಯಾಗಿ ನೆರೆ, ಪ್ರವಾಹ ಬಂತು, ಜನ ಪ್ರಾಣ ಕಳೆದುಕೊಂಡರು, ಆದರೆ ಸರ್ಕಾರ ಬದುಕಿದೆ ಎಂದು ತೋರಿಸಲೇ ಇಲ್ಲ, ಸಾಂತ್ವಾನ ಹೇಳಲಿಲ್ಲ, ಅಧಿಕಾರಿಗಳೂ ಕೂಡ ಅಲ್ಲಿಗೆ ಹೋಗಲಿಲ್ಲ, ಒಂದು ರೀತಿಯ ತಾರತಮ್ಯದ ಆಡಳಿತ ನಡೆಸುತ್ತಿದೆ, ಬಿಜೆಪಿ ಹೆಚ್ಚು ಸ್ಥಾನ ಗೆದ್ದ ಜಿಲ್ಲೆಗಳನ್ನು ಕಡೆಗಣಿಸುವ ಕೆಲಸವನ್ನು ಈ ಸಮ್ಮಿಶ್ರ ಸರ್ಕಾರ ಮಾಡುತ್ತಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಪರಿಹಾರ ಕಾರ್ಯಾಚರಣೆ ಮಾಡಿದ್ದೇವೆ ಎಂದು ಸಿಎಂ ಹೇಳುತ್ತಾರೆ. ಹಾಗಾದರೆ ನೀವು ಏನು ಕೆಲಸ ಮಾಡಿದ್ದೀರಿ ಹೇಳಿ, ಹಣ ಎಲ್ಲಿಗೆ ತಲುಪಿಸಿದಿರಿ, ಯಾರಿಗೆ ಕೊಟ್ಟಿರಿ, ಎಷ್ಟು ಜನರಿಗೆ ಪರಿಹಾರ ಕೊಡಲಾಗಿದೆ ಮಾಹಿತಿ ನೀಡಿ, ನಾನು ಅಲ್ಲಿನ ಎಂಪಿ ನನಗೆ ಮಾಹಿತಿ ನೀಡಿ, ರಾಜ್ಯ ಸರ್ಕಾರ ಪರಿಹಾರ ರೂಪದಲ್ಲಿ ಏನು ಕೊಟ್ಟಿದೆ ಲೆಕ್ಕ ಕೊಡಿ ಎಂದರು.
Click this button or press Ctrl+G to toggle between Kannada and English