ಬೆಳ್ತಂಗಡಿ: ಕಳೆದ ರಾತ್ರಿಯಿಂದ ಸ್ಥಗಿತಗೊಂಡಿದ್ದ ಚಾರ್ಮಾಡಿ ಘಾಟ್ ಕೊನೆಗೂ ಜನ ಸಂಚಾರಕ್ಕೆ ಮುಕ್ತವಾಗಿದೆ. ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟ್ ನ ಎರಡನೇ ಹಾಗೂ ಮೂರನೇ ತಿರುವಿನಲ್ಲಿ ಗುಡ್ಡ ಕುಸಿದ ಪರಿಣಾಮ ನಿನ್ನೆ ರಾತ್ರಿಯಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪರಿಣಾಮ ಕಳೆದ ರಾತ್ರಿಯಿಂದ ನೂರಾರು ವಾಹನಗಳು ಘಾಟಿಯಲ್ಲಿಯೇ ಸಿಲುಕಿಕೊಂಡಿದ್ದವು. ರಸ್ತೆಗೆ ಬಿದ್ದಿದ್ದ ಭಾರೀ ಪ್ರಮಾಣದ ಮಣ್ಣನ್ನು ತೆರವುಗೊಳಿಸಲಾಗಿದ್ದು, ಘಾಟಿಯಲ್ಲಿ ಸಿಲುಕಿದ್ದ ವಾಹನಗಳು ನಿಧಾನವಾಗಿ ಸಂಚಾರ ಆರಂಭಿಸಿವೆ.
ಚಾರ್ಮಾಡಿ ಘಾಟಿ ವಾಹನ ಸಂಚಾರಕ್ಕೆ ಮುಕ್ತವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರವಿಕಾಂತೇ ಗೌಡ ತಿಳಿಸಿದ್ದಾರೆ. ಚಾರ್ಮಾಡಿ ಘಾಟ್ ಗುಡ್ಡ ಕುಸಿತ: ರಾತ್ರಿಯಿಡೀ ರಸ್ತೆಯಲ್ಲೇ ಕಳೆದ ಪ್ರಯಾಣಿಕರು ಗುಡ್ಡ ಕುಸಿದ ಪರಿಣಾಮ ಸುಮಾರು 210ಕ್ಕಿಂತಲೂ ಹೆಚ್ಚು ವಾಹನಗಳು ಘಾಟಿಯಲ್ಲಿ ಸಿಲುಕಿದ್ದವು. 1,500 ಕ್ಕೂ ಹೆಚ್ಚು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಜೆಸಿಬಿ ಯಂತ್ರಗಳ ಸಹಾಯದಿಂದ ರಸ್ತೆಗೆ ಬಿದ್ದಿದ್ದ ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.
ಕಳೆದ ರಾತ್ರಿ ರಸ್ತೆಮೇಲೆ ಗುಡ್ಡ ಕುಸಿದ ಪರಿಣಾಮ ರಾತ್ರಿಯಿಂದ ಘಾಟಿ ಉದ್ದಕ್ಕೂ ಸಾಲುಗಟ್ಟಿದ ವಾಹನಗಳು ನಿಂತಿದ್ದವು . ವಾಹನಗಳಲ್ಲಿ ನೂರಾರು ಪ್ರಯಾಣಿಕರು ಸಿಲುಕಿದ್ದರು. ಕಳೆದ ರಾತ್ರಿಯಿಂದ ಅನ್ನ ನೀರಿಲ್ಲದೇ ಉಪವಾಸ ಅನುಭವಿಸುತ್ತಿದ್ದ ಪ್ರಯಾಣಿಕರಿಗೆ ಸ್ಥಳೀಯರು ಹಾಲು, ಬ್ರೆಡ್ ವಿತರಿಸಿ ಮಾನವೀಯತೆ ಮೆರೆದಿದ್ದರು.
ಚಿಕ್ಕಮಗಳೂರು ಎಸ್ ಪಿ ಅಣ್ಣಮಲೈ ಹಾಗು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸ್ಥಳಕ್ಕೆ ಧಾವಿಸಿ ಸಂಕಷ್ಟದಲ್ಲಿ ಸಿಲುಕಿದ್ದವರಿಗೆ ನೆರವಾದರು. ಕೆಲ ಪ್ರಯಾಣಿಕರ ಆರೋಗ್ಯದಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಅವರಿಗೆ ಸ್ಥಳೀಯರು ಔಷಧ ಪೂರೈಸಿದರು. ಬಿಪಿ, ಶುಗರ್ ನಿಂದ ಬಳಲಿದ ವೃದ್ಧೆಗೆ ಬೆಳ್ತಂಗಡಿ ನಿವಾಸಿಗಳಿಂದ ಔಷಧಿ ಪೂರೈಸಲಾಯಿತು. ನಂತರ ಅವರನ್ನು ಬೆಳ್ತಂಗಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
Click this button or press Ctrl+G to toggle between Kannada and English