ಮಂಗಳೂರು : ಕರ್ನಾಟಕ ಗೃಹ ಮಂಡಳಿ ಫ್ಲಾಟ್‍ಗಳನ್ನು ಸಾರ್ವಜನಿಕರು ಇನ್ನು ಸುಲಭವಾಗಿ ಪಡೆಯಬಹುದು. ಫ್ಲಾಟ್‍ಗಳನ್ನು ಪಡೆಯಲು ವಿಧಿಸಿದ್ದ ನಿರ್ಬಂಧಗಳನ್ನು ಕರ್ನಾಟಕ ಸರ್ಕಾರದ ವಸತಿ ಇಲಾಖೆ ತೆರವುಗೊಳಿಸಿದೆ. ಠೇವಣಿ ಮೊತ್ತವನ್ನು ಕಡಿತಗೊಳಿಸಿದೆ, ಆದಾಯ ಮಿತಿಯ ನಿರ್ಬಂಧವನ್ನೂ ತೆಗೆದು ಹಾಕಿದೆ. ಒಟ್ಟಾರೆ ಯಾರಾದರೂ 50 ಸಾವಿರ ಠೇವಣಿ ಇಟ್ಟು ಸ್ಥಳದಲ್ಲೇ ಗೃಹ ಮಂಡಳಿಯ ಫ್ಲಾಟ್‍ಗಳನ್ನು ಖರೀದಿಸಬಹುದಾಗಿದೆ.
ಈ ಸಂಬಂಧ ವಸತಿ ಹಾಗೂ ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ ಇಂದು ಇಲಾಖಾ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಬೆಂಗಳೂರಿನ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗೃಹ ಮಂಡಳಿ ವತಿಯಿಂದ ನಿರ್ಮಿಸಿರುವ ಫ್ಲಾಟ್‍ಗಳನ್ನು ಖರೀದಿಸುವವರೇ ಇಲ್ಲ ಎಂಬ ಅಪವಾದಗಳಿವೆ. ಇದನ್ನು ತೆಗೆದು ಹಾಕಬೇಕು. ಸುಲಭವಾಗಿ ಸಾರ್ವಜನಿಕರಿಗೆ ಕೆಎಚ್‍ಬಿ ಫ್ಲಾಟ್‍ಗಳು ಸಿಗುವಂತಾಗಬೇಕು ಎಂದು ಹೇಳಿದರು.
ಹಾಗಾಗಿ ಹಲವು ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ ಎಂದು ಯುಟಿಕೆ ಹೇಳಿದರು. ಐದು ವರ್ಷ ಬೆಂಗಳೂರಿನಲ್ಲಿ ವಾಸವಿರಬೇಕು, 90 ಸಾವಿರ ಠೇವಣಿ ಇಡಬೇಕು, ಆದಾಯ ಮಿತಿಗೊಳಪಟ್ಟಿರಬೇಕು ಎಂಬಿತ್ಯಾದಿ ನಿಬಂಧನೆಗಳನ್ನೆಲ್ಲ ಸಡಿಲಗೊಳಿಸಲಾಗಿದೆ ಎಂದು ಯು.ಟಿ.ಖಾದರ್ ಹೇಳಿದರು.
ರಾಜೀವ್‍ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ಮಂಜೂರಾದ ನಿವೇಶನಗಳಲ್ಲಿ ಮನೆ ನಿರ್ಮಾಣ ಮಾಡಲು ಸರ್ಕಾರದಿಂದ ಅನುದಾನ ಬಿಡುಗಡೆಯಾಗುವುದು ವಿಳಂಬವಾದಾಗ ಅವರು ಖಾಸಗಿಯವರ ಮೊರೆ ಹೋಗುತ್ತಾರೆ. ಇದರಿಂದ ತೊಂದರೆಗೆ ಸಿಲುಕುತ್ತಾರೆ. ಅದನ್ನು ತಪ್ಪಿಸಲು ಸರ್ಕಾರ ಅವರಿಗೆ ಮಂಜೂರಾತಿ ಪತ್ರ ನೀಡಿದ ತಕ್ಷಣ ಆ ಮಂಜೂರಾತಿ ಪತ್ರದ ಆಧಾರದ ಮೇಲೆ ಸ್ಥಳೀಯ ಸಹಕಾರಿ ಬ್ಯಾಂಕ್‍ಗಳು ಹಾಗೂ ಇನ್ನಿತರ ಬ್ಯಾಂಕ್‍ಗಳಿಂದ ಸಾಲ ಪಡೆಯಬಹುದಾಗಿದೆ. ಸರ್ಕಾರ ನೀಡುವ ಹಂತ ಹಂತದ ಅನುದಾನದಲ್ಲಿ ಇದನ್ನು ತೀರಿಸಬಹುದಾಗಿದೆ ಎಂದು ಯು.ಟಿ.ಖಾದರ್ ಹೇಳಿದರು. ಗೃಹ ಇಲಾಖೆಯಲ್ಲಿ ವಿವಿಧ ಸೌಲಭ್ಯಗಳನ್ನು ಪಡೆಯಲು ಸಲ್ಲಿಸುತ್ತಿದ್ದ ಅರ್ಜಿಗಳನ್ನು ಈಗ ಆನ್‍ಲೈನ್ ಮೂಲಕ ಪಡೆಯಲು ಚಿಂತನೆ ನಡೆಸಲಾಗಿದೆ ಎಂದೂ ಹೇಳಿದರು. ಬೆಂಗಳೂರು ಗೃಹ ಮಂಡಳಿ ವತಿಯಿಂದ ಈ ವರೆಗೂ ಜಿ 3 ಫ್ಲಾಟ್‍ಗಳನ್ನು ನಿರ್ಮಿಸಲಾಗುತ್ತಿತ್ತು. ಈಗ ಜಿ 14 ಫ್ಲಾಟ್‍ಗಳನ್ನು ನಿರ್ಮಿಸಲು ನಿರ್ಧರಿಸಲಾಗಿದ್ದು, ಇದರಿಂದ ಹೆಚ್ಚಿನ ಫಲಾನುಭವಿಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಲಾಗುವುದು ಎಂದು ಸಚಿವರಾದ ಯು.ಟಿ.ಖಾದರ್ ಇದೇ ಸಂದರ್ಭದಲ್ಲಿ ಹೇಳಿದರು.
Click this button or press Ctrl+G to toggle between Kannada and English