ಮುಖ್ಯಮಂತ್ರಿಯಾಗಿ ಇಷ್ಟೆಲ್ಲಾ ಕೆಲಸ ಮಾಡಿದರೂ ಜನತೆ ಯಾಕೆ ಒಪ್ಪಿಕೊಳ್ಳಲಿಲ್ಲ: ಸಿದ್ದರಾಮಯ್ಯ

1:59 PM, Wednesday, June 13th, 2018
Share
1 Star2 Stars3 Stars4 Stars5 Stars
(No Ratings Yet)
Loading...

yathindraಮೈಸೂರು: ವಿಧಾನಸಭೆ ಚುನಾವಣೆಯ ಸೋಲಿನಿಂದ ಎದೆಗುಂದಿಲ್ಲ, ಆದರೆ, ಮುಖ್ಯಮಂತ್ರಿಯಾಗಿ ಇಷ್ಟೆಲ್ಲಾ ಕೆಲಸ ಮಾಡಿದರೂ ಜನತೆ ಯಾಕೆ ಒಪ್ಪಿಕೊಳ್ಳಲಿಲ್ಲ ಎಂಬ ನೋವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಮಂಗಳವಾರ ಏರ್ಪಡಿಸಿದ್ದ ವರುಣಾ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಐದು ವರ್ಷಗಳಿಗೊಮ್ಮೆ ಚುನಾವಣೆ ಬರುತ್ತಲೇ ಇರುತ್ತದೆ. ಹೀಗಾಗಿ ಸೋಲು-ಗೆಲುವು ಸಹಜ, ಜನರ ತೀರ್ಪನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಚುನಾವಣೆ ಸೋಲು ನನಗೆ ಇದೇ ಮೊದಲೇನಲ್ಲ, ಹಿಂದೆಯೂ ಸೋತಿದ್ದೇನೆ. ಆದರೆ, ನಾನು ಹೋದಾಗ ಸಿದ್ದರಾಮಯ್ಯ ಮಾತನಾಡಿಸಲಿಲ್ಲ, ಪೊಲೀಸರು ತಡೆದು ಬಿಟ್ಟರು ಎಂಬ ಸಣ್ಣ ಸಣ್ಣ ವಿಚಾರಗಳನ್ನು ಮುಂದಿಟ್ಟುಕೊಂಡು ನನ್ನನ್ನು ಸೋಲಿಸಿದರು ಎಂದರು.

ಉತ್ತಮ ಆಡಳಿತ: ರಾಜಕೀಯವಾಗಿ ಅಧಿಕಾರ ಬಂದಾಗ ಹಿಗ್ಗಿಲ್ಲ, ಅಧಿಕಾರ ಹೋದಾಗ ಕುಗ್ಗಿಲ್ಲ. ರಾಜಕೀಯ ಪ್ರಾರಂಭ ಮಾಡಿದ ದಿನಗಳಲ್ಲಿ ಯಾವ ಮನಸ್ಥಿತಿ ಇತ್ತೋ, ಅದೇ ಮನಸ್ಥಿತಿ ಮುಖ್ಯಮಂತ್ರಿ ಆದಾಗಲೂ ಇತ್ತು. ಹೀಗಾಗಿ ಮುಖ್ಯಮಂತ್ರಿಯಾಗಿ ಐದು ವರ್ಷಗಳ ಕಾಲ ಸಿಕ್ಕ ಅವಕಾಶವನ್ನು ಬಳಸಿಕೊಂಡು ಬಡವರು, ಹಿಂದುಳಿದವರು, ದಲಿತರು, ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿದ ತೃಪ್ತಿ ತಮಗಿದೆ ಎಂದು ಹೇಳಿದರು.

ಚುನಾವಣೆ ಸೋಲಿನಿಂದ ಹೆದರಿ ಓಡಿ ಹೋಗುವುದಿಲ್ಲ. ಆದರೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಈಗಾಗಲೇ ಹೇಳಿರುವ ಮಾತಿಗೆ ಬದ್ಧನಾಗಿರುತ್ತೇನೆ. ನನ್ನ ಬೆಂಬಲಿಗರಿಗೆ ರಾಜಕೀಯವಾಗಿ ಮಾರ್ಗದರ್ಶನ ಮಾಡಿಕೊಂಡು ಇಲ್ಲಿಯೇ ಇರುತ್ತೇನೆ. ಒಳ್ಳೆಯವರಿಗೇ ಕಷ್ಟ ಬರುವುದು ಜಾಸ್ತಿ ಎಂಬ ಮಾತಿದೆ.

ಆ ಕಷ್ಟವನ್ನು ಎದುರಿಸುವ ಶಕ್ತಿ ಕೊಡುವವರು ಜನತೆ, ಹೀಗಾಗಿ ಜನ ಕೊಟ್ಟ ತೀರ್ಪನ್ನು ತಲೆ ಬಾಗಿ ಸ್ವೀಕರಿಸಿದ್ದೇನೆ. ಅದೇ ಪ್ರಜಾಪ್ರಭುತ್ವದ ತತ್ವ ಎಂದರು. ಮುಂದಿನ ಐದು ವರ್ಷ ನನ್ನ ಮತ್ತು ಯತೀಂದ್ರ ಮೇಲೆ ಜವಾಬ್ದಾರಿ ಹೆಚ್ಚಿದೆ. 2008, 2013ರಲ್ಲಿ ವರುಣಾ ಕ್ಷೇತ್ರದ ಜನತೆ ನನಗೆ ಆಶೀರ್ವಾದ ಮಾಡಿದ್ದರಿಂದ ವಿರೋಧ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿ ಆಗಲು ಸಾಧ್ಯವಾಯಿತು.

ಈ ಬಾರಿ ಅಲ್ಲಿಂದಲೇ ಸ್ಪರ್ಧಿಸಿದ್ದರೆ ಆಶೀರ್ವಾದ ಮಾಡುತ್ತಿದ್ದರು. ರಾಜಕೀಯವಾಗಿ ನನಗೆ ಅತ್ಯುನ್ನತ ಸ್ಥಾನ ಸಿಕ್ಕಿದ್ದರೆ ಅದು ವರುಣಾ ಕ್ಷೇತ್ರದ ಮತದಾರರಿಂದ, ನಿಮ್ಮನ್ನು ಯಾವತ್ತೂ ಮರೆಯಲಾಗಲ್ಲ. ಕಳೆದ ಹತ್ತು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಸಾಕಷ್ಟು ಮಾಡಿದ್ದೇನೆ, ಆದರೆ ಇನ್ನೂ ನಿಮ್ಮ ಋಣ ತೀರಿಸಬೇಕಿದೆ. ಯತೀಂದ್ರ ಮತ್ತು ನಾನು ಕ್ಷೇತ್ರದ ಜನರ ಋಣ ತೀರಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಶಾಸಕ ಡಾ.ಯತೀಂದ್ರ ಮಾತನಾಡಿ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮಾಡಿದ ಅಭಿವೃದ್ಧಿ ಕಾರ್ಯದಿಂದ ವರುಣಾ ಕ್ಷೇತ್ರದ ಜನತೆ ನನ್ನ ಕೈಹಿಡಿದರು. ಹೀಗಾಗಿ ನನ್ನ ಗೆಲುವಿನ ಶ್ರೇಯಸ್ಸು ತಂದೆಯವರಿಗೆ ಸಲ್ಲಬೇಕು ಎಂದರು. ಸಚಿವ ಪುಟ್ಟರಂಗಶೆಟ್ಟಿ ಮಾತನಾಡಿ, ಉಪ್ಪಾರ ಜನಾಂಗದ ನಾನು ಮಂತ್ರಿಯಾಗಿ ವಿಧಾನಸೌಧದ ಒಳಗೆ ಹೋಗಿದ್ದರೆ,

ಅದು ಸಿದ್ದರಾಮಯ್ಯ ಕೊಟ್ಟಿರುವ ಭಿಕ್ಷೆ. ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬಂತೆ ಹಗಲಿರುಳು ದುಡಿದ ನಾಯಕ ಸಿದ್ದರಾಮಯ್ಯ. ಅವರಂತೆ ಒಳ್ಳೆ ಕೆಲಸ ಮಾಡಿದ ನಾಯಕರು ನಮ್ಮ ಕಣ್ಣ ಮುಂದಿಲ್ಲ. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅವರನ್ನು ನೋಡುವ ಅವಕಾಶ ತಪ್ಪಿದ್ದರೂ ಇವತ್ತೂ ಅವರೇ ನಮಗೆ ಮುಖ್ಯಮಂತ್ರಿ. ಮತ್ತೆ ಅವರು ಮುಖ್ಯಮಂತ್ರಿ ಆಗುವುದನ್ನು ಕಾಣಬೇಕು ಎಂದರು.

ವಿಧಾನಪರಿಷತ್‌ ಸದಸ್ಯರಾದ ಆರ್‌.ಧರ್ಮಸೇನ, ಐವಾನ್‌ ಡಿಸೋಜಾ, ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌, ಸಂಸದ ಆರ್‌.ಧ್ರುವನಾರಾಯಣ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌ ಮಾತನಾಡಿದರು. ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್‌, ಕಳಲೆ ಎನ್‌.ಕೇಶವಮೂರ್ತಿ, ಎ.ಆರ್‌.ಕೃಷ್ಣಮೂರ್ತಿ, ಮುಡಾ ಮಾಜಿ ಅಧ್ಯಕ್ಷ ಡಿ.ಧ್ರುವಕುಮಾರ್‌, ಮುಖಂಡರಾದ ಗಣೇಶ್‌ ಪ್ರಸಾದ್‌, ಸುನೀಲ್‌ ಬೋಸ್‌ ಮೊದಲಾದವರು ಹಾಜರಿದ್ದರು.

ಮೈಸೂರು: ಎರಡಕ್ಕೆ ಎರಡು ಕೂಡಿದರೆ ನಾಲ್ಕೇ ಆಗಬೇಕು ಅಂತಿಲ್ಲ. ರಾಜಕೀಯದಲ್ಲಿ ಎರಡಕ್ಕೆ ಎರಡು ಕೂಡಿದರೆ ಐದೂ ಆಗಬಹುದು ಅಥವಾ ಆರೂ ಆಗಬಹುದು ಎಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಲೆಕ್ಕಾಚಾರ ಚರ್ಚೆಗೆ ಗ್ರಾಸವಾಗಿದೆ. ಸೋಲಿನಿಂದ ಹೆದರಿ ಓಡಿ ಹೋಗಲ್ಲ. ಆದರೆ, ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿರುವುದರಿಂದ ಆ ಮಾತಿಗೆ ಬದ್ಧನಾಗಿರುತ್ತೇನೆ.

ರಾಜಕೀಯವಾಗಿ ಸಕ್ರಿಯವಾಗಿದ್ದು ಬೆಂಬಲಿಗರಿಗೆ ಮಾರ್ಗದರ್ಶನ ಮಾಡುತ್ತೇನೆ. ಹಿಂದಿನ ನಮ್ಮ ಸರ್ಕಾರದ ಎಲ್ಲಾ ಕಾರ್ಯಕ್ರಮಗಳೂ ಈ ಸರ್ಕಾರದಲ್ಲಿ ಮುಂದುವರಿಯುತ್ತವೆ. ಇದನ್ನೆಲ್ಲಾ ನೋಡಿಕೊಳ್ಳಲು ನಾನು ಸಮನ್ವಯ ಸಮಿತಿ ಅಧ್ಯಕ್ಷನಾಗಿದ್ದೇನೆ. ಯಾರು ಧೃತಿಗೆಡಬೇಡಿ, ರಾಜಕೀಯ ನಿಂತ ನೀರಲ್ಲ ಏನು ಬೇಕಾದರೂ ಆಗಬಹುದು ಎಂದು ಸೂಚ್ಯವಾಗಿ ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English