ಬೆಂಗಳೂರು: ಕಳೆದ 8 ವರ್ಷಗಳಿಂದ ನಿರಂತರವಾಗಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ನಿಭಾಯಿಸುತ್ತಿರುವ ಡಾ. ಜಿ.ಪರಮೇಶ್ವರ್ ಇದೀಗ ಇದರ ಜತೆ ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕೂಡ. ಮೂರು ಜವಾಬ್ದಾರಿಯುತ ಹುದ್ದೆಯನ್ನು ಸದ್ಯ ನಿಭಾಯಿಸುತ್ತಿದ್ದರೂ ಆದಷ್ಟು ಬೇಗ ಪಕ್ಷದ ಹುದ್ದೆಯಿಂದ ನಿರಾಳರಾಗುವ ಆಶಯ ಹೊಂದಿದ್ದಾರೆ
ಒಂದೆಡೆ ಪಕ್ಷದ ಚಟುವಟಿಕೆ ನಿಭಾಯಿಸುವ ಕೆಪಿಸಿಸಿ ಅಧ್ಯಕ್ಷ ಗಾದಿ, ಇನ್ನೊಂದೆಡೆ ರಾಜ್ಯ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪರಮೇಶ್ವರ್ ಸರ್ಕಾರದ ಭಾಗವಾಗುತ್ತಿದ್ದಂತೆ ಕೆಪಿಸಿಸಿಗೆ ಹೊಸ ಸಾರಥಿಯ ಹುಡುಕಾಟ ನಡೆದಿದೆ. ಆದರೆ ಇಲ್ಲಿಯೂ ತೀವ್ರಗೊಂಡಿರುವ ಸ್ಪರ್ಧೆಯಿಂದಾಗಿ ಸಮಸ್ಯೆ ಉಂಟಾಗಿದೆ.
ಒಂದೆಡೆ ಪರಮೇಶ್ವರ್ ಅವರನ್ನು ಪಕ್ಷದ ಜವಾಬ್ದಾರಿಯಿಂದ ನಿರಾಳರಾಗಿಸುವ ಸಿದ್ಧತೆ ನಡೆದಿದೆ. ಆದರೆ ನೇತೃತ್ವವನ್ನು ಹೊಸ ನಾಯಕರಿಗೆ ನೀಡುವ ಸಿದ್ಧತೆ ನಡೆದಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಜವಾಬ್ದಾರಿ ಯಾರ ಹೆಗಲೇರಲಿದೆ ಎಂಬ ಕುತೂಹಲ ಕಾಂಗ್ರೆಸ್ ವಲಯದಲ್ಲಿ ಗರಿಗೆದರಿದೆ.
ಸದ್ಯ ಕೆಪಿಸಿಸಿ ಗಾದಿ ಏರುವ ಪೈಪೋಟಿಯಲ್ಲಿ ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಸ್.ಆರ್. ಪಾಟೀಲ್, ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ಹೆಚ್.ಕೆ.ಪಾಟೀಲ್, ಸಂಸದರಾದ ಕೆ.ಹೆಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್ ಮತ್ತಿತರರ ಹೆಸರು ಚಾಲ್ತಿಯಲ್ಲಿದೆ.
ಕೆಪಿಸಿಸಿ ನೂತನ ಅಧ್ಯಕ್ಷರ ಆಯ್ಕೆ ಸಂಬಂಧ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಇಂದು ಪಕ್ಷದ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಪ್ರಸ್ತುತ ಕೆಪಿಸಿಸಿ ರೇಸ್‌ನಲ್ಲಿ ಕಡೆಯ ಹಂತದಲ್ಲಿ ಮುಖಂಡರಾದ ದಿನೇಶ್ ಗುಂಡೂರಾವ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಕೆ.ಹೆಚ್.ಮುನಿಯಪ್ಪ, ಹರಿಪ್ರಸಾದ್ ಹೆಸರಿದ್ದು, ಈ ನಾಯಕರು ದೆಹಲಿ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ. ಇವರಲ್ಲಿ ಯಾರನ್ನಾದರೂ ಅಂತಿಮಗೊಳಿಸುವ ನಿಟ್ಟಿನಲ್ಲಿ ಇಂದು ಮಾತುಕತೆ ನಡೆಸಲಿದ್ದಾರೆ. ರಾಜ್ಯದ ಕಾಂಗ್ರೆಸ್ ಸಂಸದರ ನಿಯೋಗ ಕೂಡ ಇಂದು ಭೇಟಿ ಮಾಡಿ ತಮ್ಮ ಅಭಿಪ್ರಾಯ ತಿಳಿಸಲಿದೆ. ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದ ಇವರ ಭೇಟಿ ಪ್ರಮುಖವಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಡಾ. ಜಿ.ಪರಮೇಶ್ವರ್ ಅವರನ್ನು ಬುಧವಾರ ಭೇಟಿ ಮಾಡಿ ರ್ಚಚಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೆಪಿಸಿಸಿಗೆ ಶೀಘ್ರದಲ್ಲೇ ಅಧ್ಯಕ್ಷರ ನೇಮಕ ಆಗಲಿದೆ. ಇದರಲ್ಲಿ ಗುಂಪುಗಾರಿಕೆ ಇಲ್ಲ. ಲೋಕಸಭಾ ಚುನಾವಣೆ ತಯಾರಿ, ಪಕ್ಷ ಬಲವರ್ಧನೆ, ಸಂಘಟನೆ ಆಗಬೇಕಿದೆ. ಎಐಸಿಸಿ ನಿರ್ಧಾರಕ್ಕೆ ತಾವು ಸದಾ ಬದ್ಧ. ಅಧ್ಯಕ್ಷ ಸ್ಥಾನದ ಪೈಪೋಟಿ ಮುಂದುವರಿದಿದೆ. ಆದರೆ ನಾನಂತೂ ಪೈಪೋಟಿ ಮಾಡುವುದಿಲ್ಲ. ಮುಂದೆಯೂ ಪಕ್ಷ ನೀಡುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ’ ಎಂದಿದ್ದಾರೆ.
ಒಟ್ಟಾರೆ ಇನ್ನೊಂದು ವಾರದಲ್ಲಿ ಪರಮೇಶ್ವರ್ ಮೇಲಿನ ಒಂದು ಹೊರೆ ತಗ್ಗಲಿದೆ. ಅಲ್ಲಿಗೆ ಸರ್ಕಾರದ ಆಗುಹೋಗುಗಳ ಜವಾಬ್ದಾರಿ ಮಾತ್ರ ಅವರ ಮೇಲಿರಲಿದೆ.
Click this button or press Ctrl+G to toggle between Kannada and English