ಬೆಂಗಳೂರು: ಒಂದು ವರ್ಷದವರೆಗೆ ನನ್ನನ್ನೂ ಯಾರೂ ಟಚ್ ಮಾಡಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆವರೆಗೆ ನಾನೇ ಸಿಎಂ ಆಗಿರುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಖಡಕ್ ಆಗಿ ಹೇಳಿದ್ದಾರೆ.
ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ 15 ನೇ ರಾಜ್ಯಮಟ್ಟದ ಲೆಕ್ಕಪರಿಶೋಧಕರ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಕೃತಿಯು ನನ್ನ ಪರವಾಗಿದೆ. ರಾಜ್ಯದಲ್ಲಿ ಒಳ್ಳೆ ಮಳೆಯಾಗುತ್ತಿದೆ. ನಾನು ಕೆಲಸ ಮಾಡಬೇಕಾದರೆ ಬಹಳಷ್ಟು ಜನ ಕಾಲೆಳೆಯಲು ಇರುತ್ತಾರೆ ಎಂದು ಪರೋಕ್ಷವಾಗಿ ಪ್ರತಿಪಕ್ಷದ ನಾಯಕರಿಗೆ ತಿರುಗೇಟು ನೀಡಿದರು.
ರೈತರ ಸಾಲಮನ್ನಾ ವಿಚಾರದಲ್ಲಿ ಕೆಲ ಮಾಧ್ಯಮದವರು ಹಿಂದೆ ಸರಿದಿದ್ದಾರೆಂದು ಹೇಳುತ್ತಿದ್ದಾರೆ. ಆದರೆ, ನಾನು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಹಿಂದೆ ಏನಾಗಿದೆ ಅನ್ನೋ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಮುಂದೆ ಏನು ಮಾಡಬೇಕೆಂದು ನನಗೆ ಗೊತ್ತಿದೆ. ಮಾಧ್ಯಮದವರು ಕೇವಲ ರಾಜಕೀಯದ ಬಗ್ಗೆ ಮಾಧ್ಯಮದಲ್ಲಿ ಚರ್ಚೆ ಮಾಡೋದನ್ನು ಬಿಟ್ಟು, ರಾಜ್ಯದ ಅಭಿವೃದ್ಧಿಗೆ ಏನು ಮಾಡಬೇಕೆಂದು ಚರ್ಚೆ ಮಾಡಿದರೆ ಅದರಿಂದ ತುಂಬಾ ಸಹಕಾರಿಯಾಗುತ್ತದೆ ಎಂದರು.
ಮಾಧ್ಯಮಗಳಲ್ಲಿ ರೈತರ ಸಾಲ ಮನ್ನಾ ಮಾಡಲ್ಲವೆಂದು ಬಿತ್ತರಿಸಲಾಗುತ್ತಿದೆ. ಆದರೆ, ನಾನು ನೀಡಿರುವ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ. ಬಜೆಟ್ ಮಂಡನೆ ಮಾಡುತ್ತೇನೆ. ಹೊಸ ಸರ್ಕಾರವಾಗಿ ಹಲವು ಕಾರ್ಯಕ್ರಮ ನೀಡಬೇಕು. ರೈತರ ಸಾಲಮನ್ನಾ ಮಾಡುತ್ತೇವೆ. ಇದಕ್ಕೆ ಅವಶ್ಯಕವಾದ ಹಣ ಕ್ರೋಡೀಕರಣ ಮಾಡುತ್ತಿದ್ದೇವೆ. ಹಣಕಾಸು ಸಚಿವನಾಗಿ ಹೇಳುತ್ತಿದ್ದೇನೆ. ಏನು ಮಾಡಬೇಕೋ ಅದನ್ನು ನಾನು ಮಾಡೇ ಮಾಡುತ್ತೇನೆ ಎಂದು ರೈತರಿಗೆ ಅಭಯ ನೀಡಿದರು.
ಸಾಲಮನ್ನಾ ಮಾಡಲು ಕಾಂಗ್ರೆಸ್ ಕೂಡಾ ತಯಾರಿದೆ. ನಾವು ತಯಾರಿದ್ದೇವೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಜನರ ಮುಂದೆ ಹೇಳಿದ ಎಲ್ಲಾ ಕಾರ್ಯಕ್ರಮ ಜಾರಿಗೆ ತರುತ್ತೇನೆ. ಕಾಂಗ್ರೆಸ್ ಪ್ರಣಾಳಿಕೆ ಕಾರ್ಯಕ್ರಮಗಳು ಜಾರಿ ಆಗುತ್ತವೆ. ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು ಸಾಲಮನ್ನಾ ಮಾಡುವುದಿಲ್ಲವೆಂದು ಹೇಳಿಲ್ಲ. ಗಡುವು ನೀಡುವುದಕ್ಕೆ ಆಗುವುದಿಲ್ಲವೆಂದು ಪರಮೇಶ್ವರ್ ಹೇಳಿದ್ದಾರೆ ಅಷ್ಟೆ. ಇದರಲ್ಲಿ ಯಾವುದೇ ಸಂಶಯಬೇಡ ಎಂದು ಹೆಚ್‌ಡಿಕೆ ಹೇಳಿದರು.
ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿದ್ದೇನೆ. ಕೇಂದ್ರ ಸರ್ಕಾರದ ಹಲವಾರು ಕಾನೂನು ರಚನೆ ಮಾಡುವ ಸಂದರ್ಭದಲ್ಲಿ ಜಿಎಸ್‌ಟಿ ಮತ್ತು ರೇರಾ ಕಾಯ್ದೆ ತಂದಾಗ ನಿಮ್ಮ ಕೊಡುಗೆ ಅಪಾರ. ದೇಶದ ಮತ್ತು ರಾಜ್ಯದ ಅಭಿವೃದ್ಧಿಗೆ ತೆರಿಗೆ ಮೂಲಕ ಹಣವನ್ನು ನೀವು ನಿಡುತ್ತಿರುವ ಸೇವೆ ಅಪಾರ. ಎಲ್ಲರಿಗೂ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಿ ಅವರಿಗೆ ತೆರಿಗೆ ನೀಡುವಂತೆ ಪ್ರೇರೇಪಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಬಡ ಜನರಿಗೆ ಸಿಎ ಕೋರ್ಸ್ ಕಡಿಮೆ ದರದಲ್ಲಿ ಮಾರ್ಗದರ್ಶನ ನೀಡುತ್ತಿರುವುದು ತುಂಬಾ ಒಳ್ಳೆಯ ಕಾರ್ಯಕ್ರಮ. ನಿಮ್ಮ ಸಂಸ್ಥೆಯಿಂದ ಸಮಾಜಕ್ಕೆ ಒಳ್ಳೆಯ ಕೆಲಸ ಆಗುತ್ತಿದೆ. ನಿಮ್ಮ ಬೇಡಿಕೆಯಂತೆ ನೀವು ಕೇಳಿರುವ ಜಾಗವನ್ನು ಕಾನೂನಿನ ಚೌಕಟ್ಟಿನಲ್ಲಿ ನಿಮಗೆ ಮಾಡಿಕೊಡಲು ಸರ್ಕಾರ ಬದ್ಧವಾಗಿದೆ ಎಂದರು.
ನಾವು ಮಾಡುವ ಕಾನೂನು ಜನಸಾಮಾನ್ಯರಿಗೆ ಹೊರೆಯಾಗಬಾರದು. ಜನರಿಗೆ ಅದರಿಂದ ಅನುಕೂಲವಾಗುವಂತಿರಬೇಕು. ಸರ್ಕಾರಗಳು ಬಂದಾಗ ಕೇವಲ ರೈತರ ಬಗ್ಗೆ ಮತ್ತು ಬೇರೆಯವರ ಬಗ್ಗೆ ಮಾತ್ರ ಕೆಲಸ ಮಾಡುತ್ತೀರಾ ಎಂದು ಹೇಳಿದ್ದಾರೆ. ಆದರೆ, ನಾವು ನಿಮ್ಮ ಪರವಾಗಿಯೂ ಸಹ ಇದ್ದೇವೆ ಎಂದು ಸಿಎಂ ಭರವಸೆ ನೀಡಿದರು.
ರೈತರಿಗೆ ಕೇವಲ ವ್ಯವಸಾಯ ಮಾತ್ರ ಗೊತ್ತಿದೆ. ರಾಜ್ಯದ ಜನರು ನೀಡುವ ತೆರಿಗೆ ಯಾವುದೇ ಕಾರಣಕ್ಕೂ ದುರುಪಯೊಗ ಆಗಲು ಬಿಡುವುದಿಲ್ಲ. ತೆರಿಗೆ ಹಣ ಕೇವಲ ಒಂದು ಸಮುದಾಯಕ್ಕೆ ನೀಡುವುದಲ್ಲ. ರಾಜ್ಯದ ಆರೂವರೆ ಕೋಟಿ ಜನರಿಗೆ ತಲುಪುವಂತೆ ಮಾಡುತ್ತೇವೆ. ಬೆಂಗಳೂರಿನ ಅಭಿವೃದ್ಧಿಗೆ ನಾನು ಅಪಾರವಾದ ಕೊಡುಗೆ ನೀಡಬೇಕಾಗಿದೆ. ನನ್ನ 20 ತಿಂಗಳ ಅಧಿಕಾರದ ಅವಧಿಯಲ್ಲಿ ಬೆಂಗಳೂರಿಗೆ ಎಲಿವೇಟೆಡ್ ರಸ್ತೆ ಮಾಡಿಸಲು ಚಾಲನೆ ನೀಡಿದ್ದೆ. ಆದರೆ ನಾನು ಪ್ರಚಾರ ಪಡೆದುಕೊಳ್ಳಲಿಲ್ಲ. ನಾನು ಪ್ರಚಾರದಲ್ಲಿ ಎಡವಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ರಾಜಕಾಲುವೆಯ ಮೇಲೆ ಎಲಿವೇಟೆಡ್ ರಸ್ತೆ ಮಾಡಲು ಆಗಲೇ ಸೂಚಿಸಿದ್ದೆ. ಆದರೆ ಮುಂದಿನ ಸರ್ಕಾರ ಅದಕ್ಕೆ ಚಾಲನೆ ನೀಡಿಲ್ಲ. ಹೈದರಾಬಾದ್‌ನಲ್ಲಿನ ರಿಂಗ್ ರೋಡ್‌ನಂತೆ ಬೆಂಗಳೂರಿನಲ್ಲೂ ಪೆರಿಫೆರಲ್ ರಿಂಗ್ ರಸ್ತೆಯನ್ನು ಮಾಡಬೇಕಾಗಿದೆ ಎಂದು ಸಿಎಂ ಹೇಳಿದರು.
Click this button or press Ctrl+G to toggle between Kannada and English