ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅನಧಿಕೃತ ಪೂಜೆ ವಿರೋದಿಸಿ ಬೈಕ್ ರ‍್ಯಾಲಿ, ಕರಪತ್ರ ಹಂಚಿಕೆ

8:08 PM, Saturday, June 16th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Kukke Subrahmanya ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ನಾಗದೋಷ ಪರಿಹಾರಕ್ಕೆ ಹೆಸರುವಾಸಿಯಾಗಿರುವ ಕ್ಷೇತ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ಕುಕ್ಕೆ ಕ್ಷೇತ್ರದಲ್ಲಿ ನಡೆಸಲಾಗುವ ಪೂಜೆಗಳನ್ನು ಸಂಪುಟ ನರಸಿಂಹ ಮಠದಲ್ಲೂ ಹಾಗೂ ಅನ್ಯಕಡೆಗಳಲ್ಲಿ ನಡೆಸಲಾಗುತ್ತಿದೆ. ಕ್ಷೇತ್ರದ ಹೆಸರಿನಲ್ಲಿ ಮಠವು ಅಕ್ರಮವಾಗಿ ಸರ್ಪಸಂಸ್ಕಾರ ಪೂಜೆಗಳನ್ನು ನಡೆಸುತ್ತಿದೆ ಎನ್ನುವ ಆರೋಪದ ನಡುವೆ ಇದೀಗ ಸುಬ್ರಹ್ಮಣ್ಯ ಕ್ಷೇತ್ರದ ಭಕ್ತರ ಹಿತರಕ್ಷಣಾ ವೇದಿಕೆ ಈ ಬಗ್ಗೆ ಜನತೆಗೆ ತಿಳುವಳಿಕೆ ನೀಡುವ ಕುರಿತಾಗಿ ಕ್ಷೇತ್ರದ ಸುತ್ತಮುತ್ತ ಪ್ರದೇಶಗಳಲ್ಲಿ ಬೈಕ್ ರ‍್ಯಾಲಿ ಹಾಗೂ ಕರಪತ್ರಹಂಚುವ ಕಾರ್ಯ ಹಮ್ಮಿಕೊಂಡಿದೆ ಎಂದು ವೇದಿಕೆಯ ಕಾನೂನು ಸಲಹೆಗಾರ ಶಿವರಾಮ ರೈ ಹೇಳಿದರು.

ಭಕ್ತರ ಹಿತರಕ್ಷಣಾ ವೇದಿಕೆ ವತಿಯಿಂದ ಶುಕ್ರವಾರ ಹಮ್ಮಿಕೊಂಡ ಬೈಕ್ ರ‍್ಯಾಲಿ ಹಾಗೂ ಕರಪತ್ರ ಹಂಚಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಾಗದೋಷ ನಿವಾರಣೆಗಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವಂತಹ ಸರ್ಪ ಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷ ಬಲಿ ಪೂಜೆಗಳನ್ನು ಇದೀಗ ಕ್ಷೇತ್ರದ ಅನ್ಯಕಡೆಗಳಲ್ಲಿ ಅಕ್ರಮವಾಗಿ ನಡೆಸುತ್ತಿರುವುದು ಹೆಚ್ಚಾಗುತ್ತಿದೆ. ಅದರಲ್ಲೂ ದೇವಳದ ಆವರಣದಲ್ಲೇ ಇರುವಂತಹ ಸಂಪುಟ ನರಸಿಂಹ ಮಠವು ಈ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಅವರು ಆರೋಪಿಸಿದರು.

ರಾಜ್ಯದ ಹಲವು ಭಾಗಗಳಿಂದ ಬರುವ ಭಕ್ತಾಧಿಗಳಲ್ಲಿ ನಾಗದೋಷ ಪರಿಹಾರ ಪೂಜೆ ನಡೆಸುವುದಾಗಿ ಸಾವಿರಾರು ರೂಪಾಯಿಗಳನ್ನು ದೋಚುವ ಕಾರ್ಯವನ್ನು ಮಠ ನಡೆಸುತ್ತಿದೆ ಎನ್ನುವ ಆರೋಪಗಳು ಕೇಳಿ ಬರತೊಡಗಿದೆ. ಸುಬ್ರಹ್ಮಣ್ಯ ದೇವರ ಹೆಸರಿನಲ್ಲಿ ಮಠದಲ್ಲಿ ನಡೆಯುತ್ತಿರುವ ಈ ಪೂಜೆಗಳ ಬಗ್ಗೆ ಈ ಹಿಂದೆ ಮಾದ್ಯಮವೊಂದು ವರದಿ ಬಿತ್ತರಿಸಿತ್ತು. ಆ ಬಳಿಕ ಸುಬ್ರಹ್ಮಣ್ಯ ಕ್ಷೇತ್ರದ ಆಡಳಿತ ಮಂಡಳಿ ಮಠದಲ್ಲಿ ನಡೆಯುವ ಸರ್ಪಸಂಸ್ಕಾರ ಹಾಗೂ ಮುಂತಾದ ಪೂಜೆಗಳಿಗೂ, ಕ್ಷೇತ್ರಕ್ಕೂ ಯಾವುದೇ ಸಂಭಂಧವಿಲ್ಲ ಎಂಬ ಮಾಹಿತಿಯನ್ನು ನೀಡಿದೆ. ಅಲ್ಲದೆ ಇದೀಗ ಕುಕ್ಕೆ ಸುಬ್ರಹ್ಮಣ್ಯ ಭಕ್ತರ ಹಿತರಕ್ಷಣಾ ವೇದಿಕೆ ಕ್ಷೇತ್ರದ ಭಕ್ತರಿಗೆ ಮಠದಲ್ಲಿ ಮಾಡುವ ಅನಧಿಕೃತ ಪೂಜೆ ಸುಬ್ರಹ್ಮಣ್ಯ ದೇವರಿಗೆ ಸಲ್ಲುವುದಿಲ್ಲ ಎನ್ನುವ ಮಾಹಿತಿಯನ್ನು ಮನವರಿಕೆ ಮಾಡುವ ಕಾರ್ಯವನ್ನು ಮಾಡುತ್ತಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ಭಕ್ತರ ಹಿತರಕ್ಷಣ ವೇದಿಕೆ ಅಧ್ಯಕ್ಷ ಮೋನಪ್ಪ ಮಾನಾಡು ಹೇಳಿದರು.

Kukke Subrahmanya ಬೈಕ್ ರ‍್ಯಾಲಿ:
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಅನಧಿಕೃತ ಸರ್ಪಸಂಸ್ಕಾರ ಪೂಜೆಯ ವಿರುದ್ದ ಜಾಗೃತಿ ಆಂದೋಲನದ ಬೈಕ್ ರ‍್ಯಾಲಿ ದೇವಳದ ಮುಂಬಾಗದಿಂದ ಆರಂಭವಾಯಿತು. ದೇವಳದ ವ್ಯವಸ್ಥಾಪನಾ ಮಂಡಳಿ ಸದಸ್ಯ ಬಾಲಕೃಷ್ಣ ಬಳ್ಳೇರಿ ಕೇಸರಿ ರಿಬ್ಬನ್ ನೀಡುವುದರ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಬೈಕ್ ಜಾಥವು ಸುಬ್ರಹ್ಮಣ್ಯದಿಂದ ಹೊರಟು ಕೈಕಂಬ, ಬಿಳಿನೆಲೆ, ಮರ್ದಾಳ, ಕಡಬ, ಪಂಜ, ಬಳ್ಪ, ಗುತ್ತಿಗಾರು ಮಾರ್ಗವಾಗಿ ಬಳಿಕ ಸುಬ್ರಹ್ಮಣ್ಯಲ್ಲಿ ಸಮಾಪನಗೊಂಡಿತು.

ಮುಂದಿನ ಹೋರಾಟದ ನಡೆ:
ಭಾನುವಾರ(ಜು.17)ರಂದು ಬೆಳಿಗ್ಗಿನಿಂದ ಸಂಜೆಯ ತನಕ ಕುಮಾರಧಾರದ ಧ್ವಾರದ ಬಳಿ ದೇವಳಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಕ್ಷೇತ್ರದಲ್ಲಿ ನಡೆಯುವ ಪೂಜಾ ವಿಧಿವಿದಾನಗಳ ಬಗ್ಗೆ ತಿಳುವಳಿಕೆ ಮೂಡಿಸುವುದು.ದೇವಸ್ಥಾನದ ವಸತಿ ಗೃಹ, ಖಾಸಗಿ ವಸತಿ ಗೃಹ ಅಲ್ಲದೆ ಕ್ಷೇತ್ರದಲ್ಲಿರುವ ಖಾಸಗಿ ವಾಹನಗಳಲ್ಲಿ ದೇವಸ್ಥಾನದಲ್ಲಿ ನಡೆಯುವ ವಿವಿಧ ಪೂಜೆಗಳ ವಿವರಗಳನ್ನು ಮಾಹಿತಿ ಫಲಕಗಳ ಮೂಲಕ ಎಲ್ಲಾ ಕಡೆಗಳಲ್ಲಿ ಅಳವಡಿಸಿ ಭಕ್ತಾಧಿಗಳಿಗೆ ಜಾಗೃತಿ ಮೂಡಿಸುವುದು.ಧಾರ್ಮಿಕ ದತ್ತಿ ಇಲಾಖಾ ಆಯುಕ್ತರು, ಕಾರ್ಯದರ್ಶಿ ಹಾಗೂ ಸಚಿವರಿಗೆ ಸೂಕ್ತ ತನಿಖೆಗಾಗಿ ಪತ್ರ ಬರೆಯುವುದು.ಉಡುಪಿ ಪೇಜಾವರ ಮಠದ ಶಾಖೆ ಎಂದು ಮಾಧ್ಯಮದಲ್ಲಿ ಬಂದಿರುವುದರಿಂದ ಪೇಜಾವರ ಶ್ರೀಗಳಲ್ಲಿ ಇದನ್ನು ಸರಿಪಡಿಸುವಂತೆ ಮನವಿ ಮಾಡುವುದು.ಪ್ರತೀ ಗ್ರಾಮದಲ್ಲಿ ಭಕ್ತರ ಸಮಿತಿಯನ್ನು ರಚನೆ ಮಾಡುವುದು.

ವೇದಿಕೆ ಸಂಚಾಲಕ ಕಿಶೋರ್ ಕೂಜುಗೋಡು, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಬಳ್ಳೇರಿ, ಮಾಜಿ ಸದಸ್ಯ ಕಿಶೋರ್ ಶಿರಾಡಿ, ಸುಬ್ರಹ್ಮಣ್ಯ ಘಟಕದ ಬಜರಂಗದಳ ಸಂಚಾಲಕ ಪ್ರಸಾದ್ ಕೆ.ರೈ, ವಿಶ್ವಹಿಂದೂ ಪರಿಷತ್ ಕಾರ್ಯದರ್ಶಿ ಶ್ರೀ ಕುಮಾರ್ ಬಿಲದ್ವಾರ, ಹಿಂದೂ ರಕ್ಷಣಾ ವೇದಿಕೆ ಕಾರ್ಯದರ್ಶಿ ಚಿದಾನಂದ ದೇವರಗದ್ದೆ, ವೇದಿಕೆ ಸದಸ್ಯರಾದ ಹರೀಶ್ ಇಂಜಾಡಿ, ಸತೀಶ್ ಕೂಜುಗೋಡು, ಗಣೇಶ್ ದೇವರಗದ್ದೆ, ಕಾರ್ಯಪ್ಪ ಗೌಡ ಪುಂಡಿಗದ್ದೆ, ಅಶೋಕ್ ಆಚಾರ್ಯ, ಮೋಹನ್ ದಾಸ್ ರೈ, ಶೇಖರ್ ದೇವರಗದ್ದೆ, ಸುರೇಶ್ ಭಟ್ ನೂಚಿಲ, ಶ್ರೀನಾಥ್ ಭಟ್ ಬೆಂಗಳೂರು, ನಿತ್ಯಾನಂದ ಕೋಡಿಕಜೆ,s ಮೊದಲಾದವರು ಉಪಸ್ಥಿತರಿದ್ದರು. 100ಕ್ಕೂ ಅಧಿಕ ಮಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English