ಬೆಂಗಳೂರು: ವಿಧಾನಸೌಧದಲ್ಲಿನ ಕಚೇರಿಗೆ ಸಚಿವ ಡಿ.ಕೆ. ಶಿವಕುಮಾರ್ ಇಂದು ಎಂಟ್ರಿ ಕೊಟ್ಟರು.
ಮೂರನೇ ಮಹಡಿಯಲ್ಲಿನ 336 ಸಂಖ್ಯೆಯ ಕೊಠಡಿಗೆ ಪ್ರವೇಶಿಸಿದ ಡಿಕೆಶಿ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೊಸ ಇಲಾಖೆ ತೆಗೆದುಕೊಂಡ ಮೇಲೆ ಚಿಕ್ಕಚೊಕ್ಕ ಕಚೇರಿಯನ್ನೇ ಇಟ್ಟುಕೊಂಡಿದ್ದೇನೆ. ದೊಡ್ಡ ಕಚೇರಿಗೆ ಹೋಗಿಲ್ಲ. ಸ್ವವಿಶ್ವಾಸವುಳ್ಳ ಮನುಷ್ಯ ನಾನು ಎಂದು ತಿಳಿಸಿದರು.
ಈ ಬಾರಿ ವರುಣನ ಕೃಪೆ ಚೆನ್ನಾಗಿದೆ. 114 ಟಿಎಂಸಿಯಷ್ಟು ಕಬಿನಿ ಜಲಾಶಯದಲ್ಲಿ ನೀರು ತುಂಬಿದೆ. 6.2 ಟಿಎಂಸಿ ಹೊರ ಹರಿವು ಇದ್ದು, ಮೆಟ್ಟೂರಿಗೆ ಬಿಟ್ಟಿದ್ದೇವೆ. ಯಾವುದೇ ಅನಾಹುತ ಆಗದಂತೆ ಮುಂಜಾಗ್ರತೆ ವಹಿಸಲಾಗಿದೆ. ಎಲ್ಲಾ ಡ್ಯಾಂಗಳಲ್ಲಿ ಹೆಚ್ಚು ಕಡಿಮೆಯಾಗದಂತೆ ಇಲಾಖಾಧಿಕಾರಿಗಳು, ಫೀಲ್ಡ್‌ನಲ್ಲಿರೋ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ಪ್ರಕೃತಿ ನಿಯಮ, ವಿಕೋಪ ಯಾರ ಕೈಯಲ್ಲಿ ಇಲ್ಲ. ಆತ್ಮಹತ್ಯೆ ಮಾಡಿಕೊಳ್ಳಬಾರದೆಂಬ ನಿಯಮ ಇದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಸರ್ಕಾರವನ್ನು ಹೆದರಿಸೋದು ಬೇಡ. ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿತನದ ಕೆಲಸ ಎಂದು ಇದೇ ವೇಳೆ ತಿಳಿಸಿದರು.
ಅನೇಕ ಸಮಸ್ಯೆ ಸವಾಲುಗಳಿವೆ. ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಧನಾತ್ಮಕ ಹಾದಿಯ ಚಿಂತನೆಯಲ್ಲಿದ್ದೇವೆ. ಸದ್ಯಕ್ಕೆ ಬೇಕಾಗಿರುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
Click this button or press Ctrl+G to toggle between Kannada and English