ಪಡಿತರ ಚೀಟಿ ಪಡೆಯಲು ಆನ್‌ಲೈನ್‌ ವ್ಯವಸ್ಥೆ ಆರಂಭ

1:46 PM, Saturday, November 19th, 2011
Share
1 Star2 Stars3 Stars4 Stars5 Stars
(8 rating, 7 votes)
Loading...

Online Ration card

ಬೆಂಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಹೊಸ ವ್ಯವಸ್ಥೆ ಜಾರಿಮಾಡಿದ್ದು ಇನ್ನು ಮುಂದೆ ಪಡಿತರ ಚೀಟಿಗಾಗಿ ಕಚೇರಿ ಮುಂದೆ ಸಾಲುಗಟ್ಟಿ ನಿಲ್ಲಬೇಕಿಲ್ಲ. ನೀವು ಕುಳಿತಲ್ಲಿಂದಲೇ ಆನ್‌ಲೈನ್‌ ಮೂಲಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ (http://ahara.kar.nic.in) ಅರ್ಜಿ ಸಲ್ಲಿಸಿ ಪಡಿತರ ಚೀಟಿ ಪಡೆಯುವ ವಿನೂತನ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಇದು ನವಂಬರ್ 19 ಶನಿವಾರದಿಂದಲೇ ಆರಂಭಗೊಳ್ಳಲಿದೆ.

ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಪಡಿತರ ಚೀಟಿ ವಿತರಣೆ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಪುನಾರಂಭಿಸಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ. ದಾಖಲೆಗಳ ಪರಿಶೀಲಿಸಲು ಇಲಾಖೆಯ ಅಧಿಕಾರಿಗಳು ಮನೆ ಬಾಗಿಲಿಗೇ ಬರಲಿದ್ದಾರೆ.

ರಾಜ್ಯದಲ್ಲಿನ 5,630 ಗ್ರಾಮ ಪಂಚಾಯತ್‌, 176 ತಾಲೂಕು ಮತ್ತು ಇಲಾಖೆಯ 30 ಉಪನಿರ್ದೇಶಕರ ಕಚೇರಿಗಳಲ್ಲಿ ಮಾಹಿತಿ ಸಂಸ್ಕರಣೆ ಕೆಲಸ ನಡೆದಿದೆ. ಅನರ್ಹ ಪಡಿತ ಚೀಟಿಗಳನ್ನು ಗುರುತಿಸಿ ರದ್ದುಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದುವರೆಗೆ ಪಡಿತರ ಚೀಟಿ ಸಿಗದಿರುವ ಕುಟುಂಬಗಳಿಗೆ ಆದಷ್ಟು ಶೀಘ್ರ ಪಡಿತರ ಚೀಟಿ ನೀಡಬೇಕು ಎಂಬ ಗುರಿ ಹೊಂದಲಾಗಿದೆ ಎಂದು ಶುಕ್ರವಾರ ಬೆಂಗಳೂರಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಇಲಾಖೆಯ ವೆಬ್‌ಸೈಟ್‌ ಮೂಲಕ ಜನರು ಹಾಲಿ ಪಡಿತರ ಚೀಟಿ ಹೊಂದಿದ್ದರೆ ಅದರ ಸ್ಥಿತಿಗತಿ ಬಗ್ಗೆ ತಿಳಿದುಕೊಳ್ಳಬಹುದು. ಹೊಸದಾಗಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನಿಗದಿ ಮಾಡಿಲ್ಲ. ಎಷ್ಟು ಅರ್ಜಿ ಸಲ್ಲಿಕೆಯಾಗುತ್ತವೆ ಎಂಬುದನ್ನು ಆಧರಿಸಿ ಎಷ್ಟು ದಿನಗಳಲ್ಲಿ ಪಡಿತರ ಚೀಟಿಗಳನ್ನು ವಿತರಿಸಲಾಗುವುದು ಎಂಬ ಮಾಹಿತಿಯನ್ನು ನಂತರ ನೀಡಲಾಗುವುದು ಎಂದು ತಿಳಿಸಿದರು.

ದುರುದ್ದೇಶದಿಂದ ಪಡಿತರ ಚೀಟಿಗಳನ್ನು ಪಡೆದು, ಅರ್ಹ ಕುಟುಂಬಗಳನ್ನು ಈ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಿರುವುದು ಮಾತ್ರವಲ್ಲದೆ ಸರ್ಕಾರಕ್ಕೆ ಆರ್ಥಿಕ ಹೊರೆ ಉಂಟುಮಾಡುವುದನ್ನು ತಪ್ಪಿಸುವ ಸಲುವಾಗಿ ಈ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಯಿತು ಎಂದು ಅವರು ತಿಳಿಸಿದರು.

ಇದಕ್ಕಾಗಿ ನಗರ ಮತ್ತು ಪಟ್ಟಣ ಪ್ರದೇಶದ ಜನರು ಖಾಸಗಿ ಕಂಪ್ಯೂಟರ್‌ ವ್ಯವಸ್ಥೆಯ ಮೂಲಕ ಇಲಾಖೆಯ ವೆಬ್‌ಸೈಟ್‌ಗೆ ಸಂಪರ್ಕಿಸಿ ಸಲ್ಲಿಸಬಹುದು. ಇದು ಸಾಧ್ಯವಾಗದಿದ್ದವರು ಇಲಾಖೆಯ ಕಚೇರಿಗಳಿಗೆ ಹೋಗಿ 10 ರೂಪಾಯಿ ಶುಲ್ಕ ನೀಡುವ ಮೂಲಕ ಮಾಹಿತಿ ದಾಖಲಿಸಬಹುದು.ಇನ್ನು ಮುಂದೆ ಪಡಿತರ ಚೀಟಿಗಾಗಿ ಮುದ್ರಿತ ಅಥವಾ ಲಿಖೀತ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ತಿಳಿಸಿದರು

ಆದರೆ, ಗ್ರಾಮೀಣ ಪ್ರದೇಶಗಳ ಜನರು ಕಡ್ಡಾಯವಾಗಿ ಅವರಿಗೆ ಸಂಬಂಧಪಟ್ಟ ಪಂಚಾಯತ್‌ ಕಚೇರಿಗೆ ತೆರಳಿ ಅಲ್ಲಿರುವ ಕಂಪ್ಯೂಟರ್‌ ವ್ಯವಸ್ಥೆಯ ಮೂಲಕವೇ ಅರ್ಜಿ ಸಲ್ಲಿಸಬೇಕು. ಈ ರೀತಿ ಕಂಪ್ಯೂಟರ್‌ ವ್ಯವಸ್ಥೆ ಮೂಲಕ ಅರ್ಜಿ ಸಲ್ಲಿಸುವುದರಿಂದ ಅರ್ಜಿಗಳ ಬಗ್ಗೆ ಮಾಹಿತಿ ಸಂಗ್ರಹಣೆ, ಅನಂತರ ಸಂಸ್ಕರಣೆ ಹಾಗೂ ಪಡಿತರ ಚೀಟಿ ಒದಗಿಸುವ ಪ್ರಕ್ರಿಯೆಗಳನ್ನು ಕ್ರಮಬದ್ಧವಾಗಿ ನೆರವೇರಿಸಲು ಸಾಧ್ಯವಾಗುತ್ತದೆ.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವಾಗ ಸಾರ್ವಜನಿಕರು ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ. ಅರ್ಜಿ ಸಲ್ಲಿಕೆಯಾದ ನಂತರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಅರ್ಜಿ ಸಲ್ಲಿಸಿದವರ ಮನೆಗೇ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ. ಆಗ ದಾಖಲೆಗಳ ನಕಲು ಪ್ರತಿಗಳನ್ನು ಅಧಿಕಾರಿಗಳಿಗೆ ಒದಗಿಸಿದರೆ ಸಾಕು.

ಜನರಿಗೆ ನ್ಯಾಯ ಒದಗಿಸಲು ಹೊಸ ಪದ್ಧತಿ ಅನುಸರಿಸುತ್ತಿದ್ದೇವೆ. ಹೊಸದಾರಿಯಲ್ಲಿ ಹೊರಟಾಗ ಸಮಸ್ಯೆಗಳು ಉದ್ಭವಿಸುವುದು ಸಹಜ. ಏನೇ ಸಮಸ್ಯೆಗಳು ಬಂದರೂ ಅವುಗಳನ್ನು ಪರಿಹರಿಸುತ್ತೇವೆ. ಆರಂಭದಲ್ಲಿ ಅರ್ಜಿ ಸಲ್ಲಿಸುವವರಿಗೆ ಸ್ವಲ್ಪ ತೊಂದರೆಯಾಗಬಹುದು. ಆದರೆ, ಸದುದ್ದೇಶದಿಂದ ಎಲ್ಲರೂ ನಮ್ಮೊಂದಿಗೆ ಕೈಜೋಡಿಸಬೇಕು.

image description

1 ಪ್ರತಿಕ್ರಿಯೆ - ಶೀರ್ಷಿಕೆ - ಪಡಿತರ ಚೀಟಿ ಪಡೆಯಲು ಆನ್‌ಲೈನ್‌ ವ್ಯವಸ್ಥೆ ಆರಂಭ

  1. vivek m t, bangalore

    na

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English