ಬೆಂಗಳೂರು: ಆರ್ಥಿಕ ಶಿಸ್ತಿಗೆ ಒತ್ತು ನೀಡಲು ಮುಂದಾಗಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಅನಗತ್ಯ ದುಂದುವೆಚ್ಚಗಳಿಗೆ ಕಡಿವಾಣ ಹಾಕಲು ಚಿಂತನೆ ನಡೆಸಿದ್ದಾರೆ.
ಯಾವುದೇ ಸಚಿವರು ಹೊಸ ಕಾರು ಹಾಗೂ ತಮ್ಮ ಮನೆಗಳ ನವೀಕರಣ ಮಾಡಿಸಿಕೊಳ್ಳದಂತೆ ಸೂಚಿಸಿದ್ದಾರೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಹಾಗೂ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯ ಕಾರ್ಯದರ್ಶಿಗೆ ಮೌಖಿಕ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಸಚಿವರ ಸರ್ಕಾರಿ ನಿವಾಸಗಳ ನವೀಕರಣಕ್ಕೆ ಮತ್ತು ಹೊಸ ಕಾರುಗಳ ಖರೀದಿಗೆ ಪತ್ರ ಬಂದರೆ ಮಾನ್ಯ ಮಾಡದಂತೆ ಹೇಳಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸೇರಿದಂತೆ ಒಟ್ಟು 27 ಮಂದಿ ಸಂಪುಟದಲ್ಲಿದ್ದು, ಪ್ರತಿಯೊಬ್ಬರಿಗೂ ಟಯೋಟೊ ಕ್ರೈಸ್ಟ್ ಹಾಗೂ ಫಾರ್ಚೂನ್ ಕಾರು ಖರೀದಿ ಮಾಡಲು ಕನಿಷ್ಠ ಒಂದು ವಾಹನಕ್ಕೆ 25ರಿಂದ 30 ಲಕ್ಷ ಬೇಕಾಗುತ್ತದೆ. ಎಲ್ಲ ಸಚಿವರಿಗೆ ಹೊಸ ವಾಹನಗಳನ್ನೇ ಖರೀದಿ ಮಾಡಬೇಕೆಂದರೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅಂದಾಜು 18 ರಿಂದ 20 ಕೋಟಿ ರೂ. ವೆಚ್ಚ ತಗಲುತ್ತದೆ. ಹೊಸ ಸರ್ಕಾರ ಬಂದ ಸಂದರ್ಭದಲ್ಲಿ ಸಚಿವರು ಸಾಮಾನ್ಯವಾಗಿ ಹಳೇ ವಾಹನಗಳನ್ನು ಬಳಸದೆ ಹೊಸ ಕಾರುಗಳನ್ನು ಖರೀದಿ ಮಾಡುತ್ತಾರೆ. ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ತಮ್ಮ ತಮ್ಮ ಗಾಡ್ ಫಾದರ್‌ಗಳ ಮೇಲೆ ಒತ್ತಡ ಹಾಕಿ ವಾಹನ ಖರೀದಿ ಮಾಡುವುದು ಹಾಗೂ ತಮಗೆ ಇಷ್ಟ ಬಂದ ಕಡೆ ಮನೆ ಪಡೆದುಕೊಳ್ಳುತ್ತಿರುವ ನಿದರ್ಶನಗಳು ಸಾಕಷ್ಟಿವೆ.
ಆದರೆ ಈ ಬಾರಿ ಇದಕ್ಕೆಲ್ಲಾ ಕಡಿವಾಣ ಹಾಕಲು ಮುಂದಾಗಿರುವ ಮುಖ್ಯಮಂತ್ರಿಗಳು, ಹೊಸ ವಾಹನಗಳ ಖರೀದಿಗೆ ಬ್ರೇಕ್ ಹಾಕಿದ್ದಾರೆ.
ಸಚಿವರಾದ ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್, ಪ್ರಿಯಾಂಕ ಖರ್ಗೆ, ಯು.ಟಿ.ಖಾದರ್, ಶಿವಾನಂದ ಪಾಟೀಲ್, ರಾಜಶೇಖರ ಪಾಟೀಲ್ ಹುಮ್ನಾಬಾದ್, ಜಯಮಾಲ, ಜಮೀರ್ ಅಹಮದ್ ಖಾನ್ ಸೇರಿದಂತೆ ಅನೇಕರು ಹೊಸ ಕಾರುಗಳಿಗೆ ಬೇಡಿಕೆ ಇಟ್ಟಿದ್ದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಸಹ ವಾಹನಗಳ ಖರೀದಿಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಸ್ವಯಂ ಆರ್ಥಿಕ ದುಂದುವೆಚ್ಚಕ್ಕೆ ಕಡಿವಾಣ ಹಾಕಿಕೊಂಡಿರುವ ಕುಮಾರಸ್ವಾಮಿ ಅವರು, ಈಗಾಗಲೇ ಇತರರಿಗೆ ಮಾದರಿಯಾಗುವಂತೆ ನಡೆದುಕೊಂಡಿದ್ದಾರೆ.
ಮುಖ್ಯಮಂತ್ರಿಯಾದ ಮೇಲೆ ತಾವು ಕೆಲವು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ವಿಶೇಷ ವಿಮಾನ ಬಳಕೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದರು. ಮಾತಿಗೆ ತಕ್ಕಂತೆ ನಡೆದುಕೊಂಡಿರುವ ಮುಖ್ಯಮಂತ್ರಿಗಳು, ಎರಡು ಬಾರಿ ದೆಹಲಿಗೆ ಹೋದರೂ ಸಾಮಾನ್ಯರಂತೆ ಪ್ರಯಾಣಿಸಿದ್ದಾರೆ.
ಈಗ ಇದೇ ಮಾದರಿಯನ್ನು ತಮ್ಮ ಸಂಪುಟದ ಸಹೋದ್ಯೋಗಿಗಳು ಅನುಸರಿಸಬೇಕೆಂದು ಸೂಚಿಸಿರುವ ಕುಮಾರಸ್ವಾಮಿ, ಸಚಿವರ ಹೊಸ ಕಾರುಗಳ ಖರೀದಿ ಹಾಗೂ ಮನೆಗಳ ನವೀಕರಣಕ್ಕೆ ಕತ್ತರಿ ಹಾಕಿದ್ದಾರೆ.
ವಿಧಾನಸಭೆ ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಕುಮಾರಸ್ವಾಮಿ ಬ್ಯಾಂಕ್‌ನಿಂದ ರೈತರು ಪಡೆದ ಸಾಲವನ್ನು ಮನ್ನಾ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಸರ್ಕಾರದ ದುಂದುವೆಚ್ಚಕ್ಕೆ ಕಡಿವಾಣ ಹಾಕುವುದು ಕುಮಾರಸ್ವಾಮಿಯವರ ಉದ್ದೇಶವಾಗಿದೆ.
Click this button or press Ctrl+G to toggle between Kannada and English