ಮೈಸೂರು: 2019ರಲ್ಲಿ ಮಾತ್ರವಲ್ಲ, 2024 ಮತ್ತು 2029ರಲ್ಲೂ ನರೇಂದ್ರ ಮೋದಿ ಗೆಲ್ಲಲೇಬೇಕು. ಇಲ್ಲವಾದರೆ ಈ ದೇಶ ಉದ್ಧಾರವಾಗುವುದಿಲ್ಲ ಎಂದು ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅಭಿಪ್ರಾಯಪಟ್ಟರು.
ಇಂದು ಸಂಸದ ಪ್ರತಾಪ್ ಸಿಂಹ ಅವರು ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅವರನ್ನ ಭೇಟಿ ಮಾಡಿ, ಕೇಂದ್ರ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯ ಪುಸ್ತಕ ನೀಡಿದರು. ಜೊತೆಗೆ ಮೈಸೂರಿಗೆ ಕೇಂದ್ರ ಸರ್ಕಾರ ನೀಡಿರುವ ಪ್ರತಿಯೊಂದು ಯೋಜನೆ ಬಗ್ಗೆ ಸಾಹಿತಿಗಳಿಗೆ ಸಂಸದರು ಮಾಹಿತಿ ನೀಡಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಾಹಿತಿ ಎಸ್.ಎಲ್ ಭೈರಪ್ಪ, ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಒಂದು ಬಾರಿಗಲ್ಲ ಮೂರು ಬಾರಿಗೆ ಮೋದಿ ಅವರನ್ನ ಗೆಲ್ಲಿಸದಿದ್ದರೆ ದೊಡ್ಡ ಅವಿವೇಕತನವಾಗುತ್ತದೆ. ಸದ್ಯ ನಾಲ್ಕೈದು ಗುಂಪುಗಳು ಒಂದಾಗಿವೆ. ಮೋದಿಯನ್ನ ಸೋಲಿಸುವುದು ಅವರ ಉದ್ದೇಶವಾಗಿದೆ. ಆದರೆ ಮೋದಿ ಅವರ ಮಟ್ಟದಲ್ಲಿ ಯಾರೂ ಸಹ ಕೆಲಸ ಮಾಡುವ ವಿಶ್ವಾಸ ಹೊಂದಿಲ್ಲ. ಆದ್ದರಿಂದ ಮೋದಿ ಅವರು ಗೆಲ್ಲಲೇಬೇಕು. ಮೋದಿ ಸರ್ಕಾರ ರಚಿಸಬೇಕಾದ್ರೆ ಅವರಿಗೆ ಸಾಕಷ್ಟು ಬಹುಮತ ಬರಲೇಬೇಕು ಎಂದರು.
ಮೋದಿ ಅವರು ಎಲ್ಲ ಕೆಲಸಗಳನ್ನ ಚೆನ್ನಾಗಿ ಮಾಡಿದ್ದಾರೆ. ಇನ್ನಷ್ಟು ಕೆಲಸಗಳಾಗಬೇಕಾದರೆ ಮೋದಿ ಗೆಲ್ಲಲೇಬೇಕು. 2019ರಲ್ಲಿ ಮಾತ್ರವಲ್ಲ, 2024 ಮತ್ತು 2029ರಲ್ಲೂ ಅವರೇ ಸರ್ಕಾರ ರಚಿಸಬೇಕು. ಇಲ್ಲವಾದರೆ ಈ ದೇಶ ಉದ್ಧಾರ ಕಷ್ಟ. ಬಹಳ ಅವಿವೇಕದ ಕೆಲಸವನ್ನ ಪ್ರತಿಪಕ್ಷಗಳು ಮಾಡುತ್ತಿವೆ. ಜನರು ಎಚ್ಚೆತ್ತುಕ್ಕೊಳಬೇಕು. ಜನರನ್ನ ಎಚ್ಚರಿಸುವ ಕೆಲಸವನ್ನ ಪ್ರತಿಯೊಬ್ಬ ವಿದ್ಯಾವಂತರು ಮಾಡಬೇಕು. ಪ್ರತಿ ಹಳ್ಳಿಗಳಿಗೆ ಹೋಗಿ ಯಾರಿಗೆ ಮತ ಕೊಡಬೇಕು. ಏಕೆ ಹಾಕಬೇಕು ಎಂಬುದನ್ನು ತಿಳಿಸಬೇಕು ಎಂದು ಭೈರಪ್ಪ ಹೇಳಿದರು.
ಮೋದಿ ಅವರಂಥ ಪ್ರಧಾನಿಯನ್ನು ಭಾರತ ಈವರೆಗೆ ಕಂಡಿಲ್ಲ. ಬೇರೆಯವರು ಬುದ್ಧಿವಂತರಿರಬಹುದು. ಆದರೆ ಈ ರೀತಿ ಕೆಲಸ ಮಾಡುವವರು, ಒಂದೇ ಸಮನೇ ದೇಶದ ಹಿತದೃಷ್ಟಿಯ ಬಗ್ಗೆ ಆಲೋಚನೆ ಮಾಡುವವರು ಯಾರು ನಮ್ಮ ದೇಶಕ್ಕೆ ಬಂದಿಲ್ಲ. ಮೋದಿ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳಲ್ಲಿ ಸಾಕಷ್ಟು ಕೆಲಸಗಳನ್ನ ಮಾಡಿದ್ದಾರೆ. ವಿದೇಶಗಳಲ್ಲಿ ಭಾರತದ ಬಗ್ಗೆ ಇದ್ದ ಮನೋಭಾವನೆಯನ್ನ ಬದಲಾವಣೆ ಮಾಡಿದ್ದಾರೆ. ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಭಾರತದ ಭವಿಷ್ಯವನ್ನ ನೋಡಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
Click this button or press Ctrl+G to toggle between Kannada and English