ಬೆಂಗಳೂರು: ಸಾಲ ಮನ್ನಾ ಬಗ್ಗೆ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕೆಲವರು ಟೀಕೆ ಮಾಡುತ್ತಿದ್ದಾರೆ. ಅವರಿಗೆ ಇದೇ ಬಜೆಟ್ನಲ್ಲಿ ಪ್ರತ್ಯುತ್ತರ ನೀಡುವೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ.
ಕಾಸಿಯಾ ಸಂಸ್ಥೆಯ ಕಾಸಿಯಾ ಶ್ರೇಷ್ಠತೆ ಮತ್ತು ನಾವಿನ್ಯತೆ ಕೇಂದ್ರ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನನಗೆ ಸ್ವತಂತ್ರವಾಗಿ ಸರ್ಕಾರ ರಚನೆಗೆ ರಾಜ್ಯದ ಜನತೆ ಆಶೀರ್ವಾದ ಮಾಡಿದ್ದರೆ 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡುತ್ತಿದ್ದೆ. ಆದರೆ ಕೆಲವರು ಅನೇಕ ಟೀಕೆಗಳನ್ನು ಮಾಡುತ್ತಿದ್ದಾರೆ. ಅವರಿಗೆ ನನ್ನ ಸಮಸ್ಯೆ ಗೊತ್ತಿಲ್ಲ. ಇದು ಸ್ವತಂತ್ರ ಸರ್ಕಾರ ಅಲ್ಲ, ನಾನು ಯಾವುದೇ ನಿರ್ಧಾರ ಸ್ವತಂತ್ರವಾಗಿ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ತಿರುಗೇಟು ನೀಡಿದರು.
ನಾನು ಯಾವುದೇ ಕಾರ್ಯಕ್ರಮದಲ್ಲಿಯಾಗಲಿ ಯಾರೇ ಸನ್ಮಾನ ಮಾಡಬೇಕಾದರೆ ಮೈಸೂರು ಪೇಟ ಹಾಕಿಸಿಕೊಳ್ಳುವುದಿಲ್ಲ. ಕಾರಣ, ನಾನು ನನ್ನದೇ ಆದ ಕನಸುಗಳನ್ನು ಇಟ್ಟುಕೊಂಡಿದ್ದೇನೆ. ನಾನು ನಿರೀಕ್ಷೆ ಮಾಡಿದಷ್ಟು ಜನರ ಸೇವೆ ಮಾಡಿದ್ದೇನೆ ಅಂತಾ ಯಾವಾಗ ಅನಿಸುತ್ತದೆಯೋ ಆ ಸಂದರ್ಭದಲ್ಲಿ ನಾನು ಮೈಸೂರು ಪೇಟ ಧರಿಸುತ್ತೇನೆ. ಮೈಸೂರು ಪೇಟಕ್ಕೆ ಅದರದ್ದೆ ಆದ ಬೆಲೆ ಇದೆ ಎಂದು ಸ್ಪಷ್ಟನೆ ನೀಡಿದರು.
ಅಧಿಕಾರಿಗಳು ಉತ್ತಮವಾಗಿದ್ದಾರೆ. ಆದರೆ ರಾಜಕಾರಣಿಗಳೇ ಅಧಿಕಾರಿಗಳನ್ನು ದಾರಿ ತಪ್ಪಿಸುತ್ತಾರೆ. ರಾಜಕಾರಣಿಗಳಿಂದಾದ ತಪ್ಪನ್ನು ಸರಿ ಮಾಡುವ ಕೆಲಸ ಮಾಡಬೇಕಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಸಣ್ಣ ಕೈಗಾರಿಕೆಗಳು ಸರ್ಕಾರಕ್ಕಿಂತಲೂ ಹೆಚ್ಚಿನ ಜನರಿಗೆ ಕೆಲಸ ನೀಡಿವೆ. ನಾನು ಪ್ರಚಾರಕ್ಕೆ ಹೋದಾಗ ಅನೇಕ ಜನರು ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದು ಕರೆದ್ರು, ಆದರೆ ಮತ ಹಾಕಬೇಕಾದಾಗ ಜನ ನಮ್ಮನ್ನು ಮರೆತರು. ಆದರೆ ಅವರ ಹಾರೈಕೆಯಂತೆ, ದೇವರ ದಯೆಯಿಂದ ನಾನು ಮುಖ್ಯಮಂತ್ರಿ ಆಗಿದ್ದೇನೆ. ನಾನು ಪುಣ್ಯವಂತ ರಾಜಕಾರಣಿ, ಯಾಕೆಂದ್ರೆ ರಾಜ್ಯದಲ್ಲಿ ಎರಡು ಬಾರಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಆಗಿರುವುದು ಎಂದರು.
Click this button or press Ctrl+G to toggle between Kannada and English