ಮಂಗಳೂರು : ನ.13 ರಂದು ಮಧ್ಯಾಹ್ನ ಮಂಗಳೂರು ತಾಲೂಕು ಕಂದಾವರ ಗ್ರಾಮದ ಬಜಪೆ ವಿಮಾನ ನಿಲ್ದಾಣದ ಸಿಗ್ನಲ್ ಸ್ಟೇಷನ್ ಬಳಿ ಮಾರುತಿ ಓಮ್ನಿ ಕಾರಿನಲ್ಲಿ ಬಂದು ಆಟೋರಿಕ್ಷಾವನ್ನು ತಡೆದು ಚಾಲಕ ರವಿ ಯಾನೆ ರವೀಂದ್ರ ಅವರ ಮೇಲೆ ತಲವಾರು ಮತ್ತು ಮರದ ಸೊಂಟೆ, ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ನ. 21 ರಂದು ಬೆಳಗಿನ ಜಾವ ಗುರುಪುರದಲ್ಲಿ ಬಂಧಿಸಲಾಗಿದೆ.
ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಗಳನ್ನು ಮಾರಿಪಳ್ಳದ ನಿವಾಸಿ ಹನೀಫ್ ಯಾನೆ ಮಾದ ಹನೀಫ್ (26 ), ಗುರುಪುರದ ಅಬ್ದುಲ್ ಮಜೀದ್ (27) ಹಾಗೂ ಅಡೂರು ಮಾಣಿಬೆಟ್ಟು ನಿವಾಸಿ ಅಬ್ದುಲ್ ರಹಿಮಾನ್ (31) ಎಂದು ಗುರುತಿಸಲಾಗಿದೆ.
ಅಬ್ದುಲ್ ಮಜೀದ್ ಗುರುಪುರದಲ್ಲಿ ಕೊಲೆಯಾದ ಕಬೀರನ ತಮ್ಮನಾಗಿದ್ದು ದಂಗೆ ಹಾಗೂ ಕೊಲೆ ಪ್ರಕರಣ ಸೇರಿದಂತೆ ಎರಡು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಹನೀಫ್ ಮೇಲೆ ದಂಗೆ ಸೇರಿದಂತೆ ಆರು ಪ್ರಕರಣಗಳು ದಾಖಲಾಗಿವೆ. ಅಬ್ದುಲ್ ರಹಿಮಾನ್ ಕ್ಯಾಂಡಲ್ ಸಂತು ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳಿದ್ದು ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಆರೋಪಿಗಳಿಗೆ ಆಶ್ರಯ, ಆರ್ಥಿಕ ಸಹಾಯ ನೀಡುತ್ತಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಅವರ ಮೇಲೆ ನಿಗಾ ಇಡಲಾಗಿದೆ ಎಂದರು.
ಈ ಹಿಂದೆ ನಡೆದ ಗುರುಪುರದ ರೌಡಿಶೀಟರ್ ಕಬೀರ್ ಕೊಲೆಯ ಸಂದರ್ಭದಲ್ಲಿ ಕಬೀರನ ಚಲನವಲನಗಳ ಮಾಹಿತಿಯನ್ನು ಪ್ರಕರಣದ ಆರೋಪಿಗಳಿಗೆ ರಿಕ್ಷಾಚಾಲಕ ರವೀಂದ್ರ ನೀಡಿದ್ದ ಎಂದು ಶಂಕಿಸಿ ಪ್ರತಿಕಾರವಾಗಿ ಈ ಕೊಲೆಯತ್ನ ನಡೆದಿದೆ ಎಂದು ಆರೋಪಿಗಳನ್ನು ಕೂಲಂಕುಷವಾಗಿ ವಿಚಾರಣೆ ಒಳಪಡಿಸಿದಾಗ ಬಯಲಾಯಿತು ಎಂದು ಸಿಂಗ್ ತಿಳಿಸಿದರು.
ಭಾನುವಾರ ರಾತ್ರಿ ಪ್ರಮುಖ ಆರೋಪಿಗಳಲ್ಲಿ ಓರ್ವನಾದ ಹನೀಫ್‌ನನ್ನು ಫರಂಗಿಪೇಟೆ ಪರಿಸರದಲ್ಲಿ ದಸ್ತಗಿರಿ ಮಾಡಲಾಯಿತು. ಆತನ ಹೇಳಿಕೆಯಂತೆ ಕೃತ್ಯಕ್ಕೆ ಬಳಸಿದ ಆಯುಧವನ್ನು ಹಾಗೂ ಕೃತ್ಯ ನಡೆಸಲು ಬಳಸಿದ್ದ ಮಾರುತಿ ಓಮ್ನಿ ಕಾರನ್ನು ವಶಪಡಿಸಿಕೊಳ್ಳಲಾಯಿತು. ಆತ ನೀಡಿದ ಮಾಹಿತಿಯಂತೆ ಇನ್ನಿಬ್ಬರು ಆರೋಪಿಗಳನ್ನು ನ. 21 ರಂದು ಬೆಳಗಿನ ಜಾವ ಗುರುಪುರದಲ್ಲಿ ದಸ್ತಗಿರಿ ಮಾಡಲಾಯಿತು ಎಂದವರು ವಿವರಿಸಿದರು. ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಿ ಪೊಲೀಸರು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
ಹಲ್ಲೆಗೊಳಗಾದ ಗಾಯಾಳು ರವೀಂದ್ರ ಆಸ್ಪತ್ರೆ ಈಗ ಚೇತರಿಸಿಕೊಳ್ಳುತಿದ್ದಾರೆ ಎಂದು ಅವರು ವಿವರಿಸಿದರು.
ಡಿಸಿಪಿ ಎಂ. ಮುತ್ತೂರಾಯ, ಧರ್ಮಯ್ಯ, ಎಸಿಪಿ ಸುಭಾಶ್ಚಂದ್ರ, ಇನ್ಸ್‌ಪೆಕ್ಟರ್‌ಗಳಾದ ವೆಂಕಟೇಶ ಪ್ರಸನ್ನ, ವಿನಯ ಗಾಂವ್ಕರ್, ದಿನಕರ ಶೆಟ್ಟಿ ಅವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English