ಸುಬ್ರಹ್ಮಣ್ಯ: ರಾಜ್ಯದಲ್ಲಿ 10ಕೋಟಿ ಸಸಿಗಳನ್ನು ನೆಡಲು ಯೋಜನೆ ರೂಪಿತವಾಗಿದೆ. ರಾಜ್ಯವನ್ನು ಹಸಿರು ಹೊದೆಕೆಯನ್ನಾಗಿಸಲು ಪ್ರಯತ್ನ ಮಾಡುತ್ತೇನೆ. ಈ ಯೋಜನೆ ಜಾರಿಗೊಂಡಲ್ಲಿ ಅರಣ್ಯ ಸಂರಕ್ಷಣೆಯಲ್ಲಿ ರಾಜ್ಯವು ದೇಶದಲ್ಲೇ ಮಾದರಿಯಾಗಲಿದೆ. ಅರಣ್ಯ ಇಲಾಖೆಗೆ ಬಜೆಟ್‌ನಲ್ಲಿ 1500 ಕೋಟಿ ದೊರಕುತ್ತಿತ್ತು. ಈ ಮೊತ್ತವು ಕಡಿಮೆಯಾಗುತ್ತದೆ. ಈ ಬಾರಿ ಬಜೆಟ್‌ನಲ್ಲಿ ಅರಣ್ಯ ಸಂರಕ್ಷಣೆಗೆ ೫೦೦ಕೋಟಿ ಹೆಚ್ಚುವರಿ ಅನುದಾನ ಒದಗಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಅರಣ್ಯ ಸಂರಕ್ಷಣೆಗೆ ಪ್ರಾಧಾನ ಆದ್ಯತೆ ನೀಡುವುದು ನನ್ನ ಧ್ಯೇಯ ಎಂದು ರಾಜ್ಯ ಅರಣ್ಯ ಸಚಿವ ಆರ್.ಶಂಕರ್ ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಅರಣ್ಯ ಸಚಿವರು ನಡೆಸಿದ ಉತ್ತಮ ಯೋಜನೆಗಳನ್ನು ಮುಂದುವರೆಸುತ್ತಾ ಮತ್ತಷ್ಟು ಅಭಿವೃದ್ಧಿಗೊಳಿಸಲಿದ್ದೇನೆ. ಅರಣ್ಯ ಸಂರಕ್ಷಣೆಗೆ ವಿನೂತನ ಕಾರ್ಯಕ್ರಮಗಳನ್ನು ರೂಪಿತಗೊಳಿಸಲಾಗುವುದು. ಅರಣ್ಯವಾಸಿಗಳು ಮತ್ತು ಅರಣ್ಯದ ತಪ್ಪಲಲ್ಲಿ ಇರುವ ಜನತೆಯ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಡಮಕಲ್ಲು ರಸ್ತೆ ಅಭಿವೃದ್ಧಿ:
ಕಡಮಕಲ್ಲು-ಗಾಳಿಬೀಡು-ಮಡಿಕೇರಿಯ 18ಕಿ.ಮೀ ರಸ್ತೆಯು ಅಭಯಾರಣ್ಯದೊಳಗೆ ಬರುವುದರಿಂದ ಈ ರಸ್ತೆ ನಿರ್ಮಾಣಕ್ಕೆ ಸಮಸ್ಯೆಯಾಗುತ್ತಿದೆ. ಹತ್ತಿರವಾದ ಈ ರಸ್ತೆಯನ್ನು ಸಮರ್ಪಕಗೊಳಿಸಲು ಇಲಾಖೆಯು ಪ್ರಯತ್ನಿಸಲಿದೆ. ಅಲ್ಲದೆ ಈ ರಸ್ತೆಗೆ ಬೇಕಾಗುವಷ್ಟು ಭೂಮಿಯನ್ನು ಇತರ ಕಡೆ ಅರಣ್ಯ ಇಲಾಖೆಗೆ ಬಿಟ್ಟುಕೊಟ್ಟರೆ ಈ ರಸ್ತೆಯನ್ನು ರಚಿಸಲು ಸಹಕಾರಿಯಾಗುತ್ತದೆ. ಹಲವು ಶತಮಾನಗಳಿಂದ ಇದ್ದ ಸಮಸ್ಯೆಯನ್ನು ಬಗೆಹರಿಸಲು ಶೀಘ್ರ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ನುಡಿದರು.
ಜಂಟಿ ಸರ್ವೆ:
ಅರಣ್ಯ ಮತ್ತು ಕಂದಾಯ ಭೂಮಿಗಳ ನಡುವಿರುವ ಸಮಸ್ಯೆಗಳ ನಿವಾರಣೆಗೆ ಜಂಟಿ ಸರ್ವೆಗೆ ಶೀಘ್ರ ಕ್ರಮ ವಹಿಸಲಾಗುವುದು. ಈ ಬಗೆಗಿನ ಕಡತಗಳು ವಿಳಂಬವಾಗುತ್ತಿದೆ ಅನ್ನುವ ಮಾಹಿತಿ ನನಗೆ ಲಭಿಸಿದೆ. ಶೀಘ್ರವೇ ಜಂಟಿ ಸರ್ವೆ ನಡೆಸಿ ಈ ಭಾಗದಲ್ಲಿ ವಾಸಿಸುವ ಜನತೆಗೆ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಅರಣ್ಯ ಮತ್ತು ಕಂದಾಯ ಎಂಬ ಗೊಂದಲಗಳನ್ನು ಈ ಮೂಲಕ ನಿವಾರಣೆ ಮಾಡಿ ಬಾಧಿತರಿಗೆ ೯೪ಸಿಯಲ್ಲಿ ಹಕ್ಕುಪತ್ರ ವಿತರಿಸಲು ಅನುಕೂಲತೆ ಸೃಷ್ಠಿಸಲಾಗುವುದು ಎಂದು ಸಚಿವರು ಹೇಳಿದರು.
ಗೋಶಾಲೆ ನಿರ್ಮಾಣಕ್ಕೆ ಸ್ಥಳ:
ಕುಕ್ಕೆ ದೇವಳಕ್ಕೆ ಕೈಕಂಬ ಸಮೀಪದ ಪಳ್ಳಿಗದ್ದೆ ಎಂಬಲ್ಲಿ ಗೋಶಾಲೆ ನಿರ್ಮಾಣಕ್ಕೆ ಭೂಮಿಯನ್ನು ನೀಡಲಾಗಿತ್ತು. ಆದರೆ ಈ ಭೂಮಿಯು ಅರಣ್ಯ ಇಲಾಖೆಯ ವ್ಯಾಪಿಯಲ್ಲಿರುವುದರಿಂದ ಇಲ್ಲಿ ಗೋಶಾಲೆ ನಿರ್ಮಾಣ ವಿಳಂಭವಾಗುತ್ತಿದೆ. ಗೋಶಾಲೆಗೆ ಕಾಯ್ದಿರಿಸಿದ 9 ಎಕರೆ ಭೂಮಿಗೆ ಬದಲಾಗಿ ದೇವಳವು ಬೇರೆ ಕಡೆ ಸಮ ಪ್ರಮಾಣದ ಭೂಮಿಯನ್ನು ನೀಡಿದರೆ ಕಾನೂನಿಗೆ ತೊಡಕಾಗದಂತೆ ಈ ಸ್ಥಳವನ್ನು ಇಲಾಖೆಯು ದೇವಳಕ್ಕೆ ಬಿಟ್ಟುಕೊಡಲಿದೆ ಎಂದು ಆರ್.ಶಂಕರ್ ಭರವಸೆ ನೀಡಿದರು.
ನಕ್ಸಲ್ ಹಾವಳಿ ನಿವಾರಣೆಗೆ ಕ್ರಮ:
ನಕ್ಸಲ್ ಬಾಧಿತ ಸ್ಥಳಗಳಲ್ಲಿನ ಜನತೆಯ ರಕ್ಷಣೆಗೆ ಅರಣ್ಯ ಇಲಾಖೆ ಮತ್ತು ಗೃಹ ಇಲಾಖೆ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತದೆ. ಈ ಭಾಗದಲ್ಲಿರುವ ನಕ್ಸಲ್ ಸಮಸ್ಯೆಗಳ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಕ್ಸಲರ ಮನ ಪರಿವರ್ತನೆ ಮಾಡಿ ಮುಖ್ಯವಾಹಿನಿಗೆ ತರಲು ಸರಕಾರವು ಪ್ರಯತ್ನಿಸಲಿದೆ. ಈ ಮೂಲಕ ನಕ್ಸಲ್ ಹಾವಳಿಯನ್ನು ಸಂಪೂರ್ಣ ತಡೆಗಟ್ಟಲು ಪ್ರಯತ್ನಿಸಲಾಗುವುದು. ನಕ್ಸಲ್ ಸಮಸ್ಯೆ ನಿವಾರಣೆ ಬಗ್ಗೆ ಈಗಾಗಲೇ ಗೃಹಮಂತ್ರಿಗಳು ಸಭೆ ಕರೆದು ಚರ್ಚಿಸಿದ್ದಾರೆ ಎಂದು ತಿಳಿಸಿದರು.
ಆನೆ ಹಾವಳಿಗೆ ಜೇನುಪೆಟ್ಟಿಗೆ ಯೋಜನೆ:
ಆನೆಗಳು ನಾಡಿಗೆ ಬಂದು ಹಾನಿಮಾಡದಂತೆ ತಡೆಯಲು ಇಲಾಖೆಯು ಪ್ರಯತ್ನ ಮಾಡಿದೆ. ಆನೆಯು ಬಹಳ ಬುದ್ದಿವಂತ ಪ್ರಾಣಿ. ಅವುಗಳು ಕೂಡ ನಾವು ಹಾಕಿದ ತಡೆಗಳನ್ನು ದಾಟಿ ಊರಿಗೆ ಬರುತ್ತಿವೆ. ಇವುಗಳನ್ನು ತಡೆಯಲು ಈಗಾಗಲೇ ಆನೆ ಕಂದಕ ರಚಿಸಲಾಗಿದೆ. ಇದೀಗ ನೂತನವಾಗಿ ಆನೆಗಳನ್ನು ತಡೆಯಲು ಜೇನು ಪೆಟ್ಟಿಗೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಅದೇ ರೀತಿ ಅರಣ್ಯದಲ್ಲಿ ಫಲ ವಸ್ತುಗಳ ಗಿಡಗಳನ್ನು ನೆಟ್ಟು ಪ್ರಾಣಿಗಳಿಗೆ ಕಾಡಿನಲ್ಲೇ ಹೆಚ್ಚು ಆಹಾರ ದೊರಕುವಂತೆ ಮಾಡುವ ಯೋಜನೆ ಇದೆ. ಇದನ್ನು ಈಗಾಗಲೇ ಫಲ ವೃಕ್ಷ ಆಂದೋಲನ ಮತ್ತು ಬೀಜದುಂಡೆ ಬಿತ್ತನೆ ಮೂಲಕ ಸಾಕಾರಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.
ಶೀಘ್ರ ಸಿಬ್ಬಂಧಿಗಳ ನೇಮಕ:
ಗ್ರಾಮೀಣ ಭಾಗದಲ್ಲಿ ಅರಣ್ಯ ಪ್ರದೇಶವು ವಿಶಾಲವಾಗಿದೆ. ಆದರೆ ಇಲ್ಲಿ ಸಿಬ್ಬಂದಿಗಳ ಕೊರತೆ ಇದೆ ಎಂದು ತಿಳಿದಿದೆ. ರಾಜ್ಯದಲ್ಲಿ ಸುಮಾರು 9000 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶೀಘ್ರವೇ 3000 ಸಿಬ್ಬಂದಿಗಳನ್ನು ನೇಮಿಸಲಾಗುವುದು. ಈ ಪ್ರಕಿಯೇಯು ಈಗಾಗಲೆ ಆರಂಭಗೊಂಡಿದೆ. ಮುಂದೆ ಹಂತ ಹಂತವಾಗಿ ಇಲಾಖೆಗೆ ಸಿಬ್ಬಂದಿಗಳನ್ನು ನೇಮಿಸಲಾಗುವುದು.
ಪರಿಸರ ಸೂಕ್ಷ್ಮ ವಲಯ ಯೋಜನೆಗೆ ರಾಜ್ಯ ಸರಕಾರವು ಅವಕಾಶ ನೀಡುವುದಿಲ್ಲ. ಆದರೂ ಈ ಯೋಜನೆಗಳಿಂದ ಅರಣ್ಯ ಭಾಗದಲ್ಲಿ ತಲೆತಲಾಂತರದಿಂದ ಜೀವನ ಸಾಗಿಸುವ ಜನತೆಗೆ ತೊಂದರೆ ಅಗುವುದಿಲ್ಲ. ದೊಡ್ಡ ದೊಡ್ಡ ಉದ್ದಿಮೆಗಳಿಗೆ ಮತ್ತು ಗಣಿಗಾರಿಕೆಗೆ ಅವಕಾಶ ಇಲ್ಲ. ಈಗಾಗಲೇ ಅಭಯಾರಣ್ಯದಲ್ಲಿ ಸಾಕಷ್ಟು ಕೈಗಾರಿಕೆಗಳು ತಲೆ ಎತ್ತಿವೆ ಎಂಬ ಮಾಹಿತಿ ಲಭಿಸಿದೆ ಅವುಗಳ ಮೇಲೆ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಚಾರಣಿಗರಿಗೆ ಶುಲ್ಕ ವಿನಾಯಿತಿ:
ಕುಕ್ಕೆ ಕ್ಷೇತ್ರದ ಕುಮಾರ ಪರ್ವತ ಚಾರಣ ತಾಣವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಚಾರಣ ಆರಂಭದ ಸ್ಥಳದಲ್ಲಿ ಸ್ಥಳೀಯ ಗ್ರಾಮ ಅರಣ್ಯ ಸಮಿತಿಯ ಸಹಕಾರದೊಂದಿಗೆ ಗೇಟ್‌ನ್ನು ನಿರ್ಮಿಸಿ ಪ್ಲಾಸ್ಟಿಕ್ ವಸ್ತುಗಳನ್ನು ಕೊಂಡೊಯ್ಯದಂತೆ ಚಾರಣಿಗರಲ್ಲಿ ಜಾಗೃತಿ ಮೂಡಿಸಲಾಗುವುದು. ಅಲ್ಲದೆ ಪುಷ್ಪಗಿರಿ ವನ್ಯದಾಮದ ವ್ಯಾಪ್ತಿಗೆ ಬರುವ ಕುಮಾರ ಪರ್ವತಕ್ಕೆ ತೆರಳಲು ಈ ಇಲಾಖೆಗೆ ಸಲ್ಲಿಸಬೇಕಾದ ಶುಲ್ಕವನ್ನು ಸ್ಥಳೀಯರಿಗೆ ರಿಯಾಯಿತಿ ದರದಲ್ಲಿ ಪಾವತಿಸಲು ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಬೇಕು. ಶೀಘ್ರವೇ ರಿಯಾಯಿತಿ ಒದಗಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಶಂಕರ್ ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ರಾಜೀವಿ ಆರ್.ರೈ, ಮಾಧವ.ಡಿ, ಮಾಸ್ಟರ್‌ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವರಾಮ ರೈ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕರಿಕಾಲ, ಸುಳ್ಯ ತಾಲೂಕಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಪುತ್ತೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಸುಬ್ರಹ್ಮಣ್ಯ ರಾವ್, ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ತ್ಯಾಗರಾಜ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English