ಬೆಂಗಳೂರು: ಆಸ್ತಿ ವಿಚಾರವಾಗಿ ಅಣ್ಣ ಮತ್ತು ತಂಗಿಯ ಮಧ್ಯೆ ನಡೆದ ಜಗಳ ಸಾವಿನಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಆಸ್ತಿ ವಿಚಾರವಾಗಿ ಜಗಳವಾಡುತ್ತಿದ್ದಾಗ ಅಣ್ಣ ಕುಸಿದು ಮೃತಪಟ್ಟಿದ್ದಾರೆ. 58 ವರ್ಷದ ಮುದ್ದಪ್ಪ ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ಅಣ್ಣ ಮುದ್ದಪ್ಪ ಮತ್ತು ಅವರ ತಂಗಿ ಶಶಿಕಲಾ ಮಧ್ಯೆ ಆಸ್ತಿ ವಿಚಾರವಾಗಿ ಜಗಳ ನಡೆದಿತ್ತು. ಈ ವಿವಾದ ಹಲವು ವರ್ಷಗಳಿಂದಲೂ ಇತ್ತು ಎನ್ನಲಾಗಿದೆ.
ನಿನ್ನೆ ಮುದ್ದಪ್ಪ ಮನೆಗೆ ಬಂದಿದ್ದ. ಆತನ ತಂಗಿ ಶಶಿಕಲಾ ಆಸ್ತಿಯಲ್ಲಿ ಪಾಲು ಕೊಡಬೇಕೆಂದು ಪಟ್ಟು ಹಿಡಿದು ಜಗಳ ಮಾಡಿದ್ದಾರೆ. ಈ ವೇಳೆ ಜಗಳವಾಡುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮುದ್ದಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಆದರೆ, ಮುದ್ದಪ್ಪನ ಸಾವು ಸಹಜ ಸಾವಲ್ಲ ಇದು ಕೊಲೆ ಎಂದು ಆತನ ಪತ್ನಿ ಗೌರಮ್ಮ ಗಂಭೀರ ಆರೋಪ ಮಾಡಿದ್ದಾರೆ. ಘಟನೆ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ನಂತರ ಸಾವಿಗೆ ಕಾರಣ ಏನು ಅನ್ನೋದು ಸ್ಪಷ್ಟವಾಗಲಿದೆ. ಆ ನಂತರ ಈ ಬಗ್ಗೆ ಕಾನೂನು ಕ್ರಮಕ್ಕೆ ಮುಂದಾಗಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
Click this button or press Ctrl+G to toggle between Kannada and English