ಬೆಂಗಳೂರು: ನಾಳೆ ಅಥವಾ ನಾಡಿದ್ದು ಸಿದ್ದರಾಮಯ್ಯರನ್ನು ಭೇಟಿಯಾಗಲಿದ್ದೇನೆ ಎಂದು ನವದೆಹಲಿಯಲ್ಲಿ ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಸಮ್ಮಿಶ್ರ ಸರ್ಕಾರದ ಭವಿಷ್ಯದ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸುತ್ತೇನೆ. ವಿಡಿಯೋ ಬಗ್ಗೆ ವಿಶೇಷ ಮಾಹಿತಿ ಇಲ್ಲ. ನಾನೂ ಟಿವಿಯಲ್ಲಿ ನೋಡಿದ್ದೇನೆ ಅಷ್ಟೇ. ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಅನ್ನೋದು ಗೊತ್ತಿಲ್ಲ ಎಂದಿದ್ದಾರೆ.
ವೈರಲ್ ಆಗಿರುವ ವಿಡಿಯೋವನ್ನು ತಿರುಚಿರುವ ಸಾಧ್ಯತೆ ಇದೆ. ನಿಜವಾಗಿಯೂ ಸಿದ್ದರಾಮಯ್ಯ ಹೇಳಿದ್ದಾರೋ ಎಂಬ ಬಗ್ಗೆ ಅವರನ್ನೇ ಕೇಳಬೇಕಿದೆ ಎಂದು ಹೇಳಿದ್ದಾರೆ.
ಈ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ ಕೂಡ ಗಮನಿಸುತ್ತಿದೆ. ಮೈತ್ರಿ ಸರ್ಕಾರಕ್ಕೆ ಎಲ್ಲರೂ ಶಕ್ತಿ ತುಂಬುವ ಕೆಲಸ ಮಾಡಬೇಕು. ಮೈತ್ರಿ ಸರ್ಕಾರ ಒಗ್ಗಟ್ಟಾಗಿ ಇದೆ. ಎಷ್ಟು ತೊಂದರೆಗಳು ಬಂದರು ಮೈತ್ರಿ ಸರ್ಕಾರ ಮುನ್ನೆಡಸಬೇಕಿದೆ. ಕೋಮುವಾದಿ ಬಿಜೆಪಿಯನ್ನು ದೂರ ಇಡುವುದು ನಮ್ಮ ಗುರಿ. ಅದಕ್ಕಾಗಿಯೇ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದರು.
ವಿಭಿನ್ನ ಹೇಳಿಕೆಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ಇವು ವಾಸ್ತವ ಹೇಳಿಕೆಯೋ ಅಥವಾ ಮಾಧ್ಯಮಗಳಲ್ಲಿ ತಿರುಚಲಾಗಿದೆಯೋ ಪರಿಶೀಲಿಸಲಾಗುವುದು. ಭಿನ್ನ ಹೇಳಿಕೆ ನೀಡುತ್ತಿರುವ ನಾಯಕರ ಅಭಿಪ್ರಾಯ ಕೇಳಲಿದ್ದೇವೆ ಎಂದು ತಿಳಿಸಿದರು.
Click this button or press Ctrl+G to toggle between Kannada and English