ಮಂಗಳೂರು: ಕೇಂದ್ರ ಸರಕಾರ ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿರುವ ಹಿಂದೂ ವಿರೋಧಿ ಮಸೂದೆಯನ್ನು ಅನುಷ್ಠಾನಗೊಳಿಸಬಾರದು ಎಂದು ಆಗ್ರಹಿಸಿ ಹಿಂದೂ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ಸಭೆಗೂ ಮುನ್ನ ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದ ಜ್ಯೊತಿ ಸರ್ಕಲ್ ನಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು. ನೆಹರೂ ಮೈದಾನದ ವಿಶಾಲ ವೇದಿಕೆಯಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಸೇರಿದಂತೆ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.
ಕೇಂದ್ರ ಸರಕಾರ ಹಿಂದೂಗಳನ್ನು ದಮನ ಮಾಡಲು ಮತೀಯ ಹಾಗೂ ನಿರ್ದೇಶಿತ ಹಿಂಸಾಚಾರ ತಡೆ ಮಸೂದೆ – 2011ನ್ನು ಅನುಷ್ಠಾನಗೊಳಿಸಲು ಸಿದ್ದತೆ ನಡೆಸುತ್ತಿದೆ. ಹಿಂದೂ ಸಮಾಜ ಅದಕ್ಕೆ ಅವಕಾಶ ನೀಡುಬಾರದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ| ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿ ಮಸೂದೆ ಜಾರಿಗೊಂಡರೆ ಆಗಬಹುದಾದ ದುಷ್ಪರಿಣಾಮದ ಬಗ್ಗೆ ವಿವರಿಸಿದರು. ಹಿಂದು ಧರ್ಮಕ್ಕೆ ಹಾಗೂ ದೇಶದ ಗೌರವಕ್ಕೆ ಸೋನಿಯಾ ಪ್ರೇರಿತ ಸರಕಾರ ಅವಮಾನ ಮಾಡಲು ಹೊರಟಿದೆ. ದೇಶದಲ್ಲಿರುವುದು ಬಹುಸಂಖ್ಯಾಕ ಹಿಂದೂಗಳು ಎನ್ನುವುದನ್ನು ಮರೆತು ಅತ್ಯಂತ ಅನಾಗರಿಕ ಮಸೂದೆಯೊಂದನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ ಎಂದರು.
ದೇಶದಲ್ಲಿ ಕಾನೂನು ಸಮಾನವಾಗಿಬೇಕು. ನಿರ್ದೇಶಿತ ಹಿಂಸಾಚಾರ ತಡೆ ಮಸೂದೆಯಲ್ಲಿ ಅಲ್ಪಸಂಖ್ಯಾಕರು ದೂರು ನೀಡಿದ ಕೂಡಲೇ ಸತ್ಯಾಸತ್ಯತೆಗಳನ್ನು ಗಮನಿಸದೆ ಹಿಂದೂಗಳ ಮೇಲೆ ಕಠಿನ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಹಿಂದೂಗಳು ಅನ್ಯಾಯಕ್ಕೊಳಗಾದರೆ ತಮ್ಮ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಖೇದ ವ್ಯಕ್ತ ಪಡಿಸಿದರು.
ಮುಖ್ಯ ಭಾಷಣಕಾರರಾದ ಧರ್ಮ ಜಾಗರಣ ಕರ್ನಾಟಕ ಪ್ರಾಂತ ಸಂಘಟನಾ ಪ್ರಮುಖ್ ಮುನಿಯಪ್ಪ ಮಾತನಾಡಿ ದೇಶ ಎದುರಿಸುತ್ತಿರುವ ಭಯೋತ್ಪಾದನೆ, ಮತಾಂತರ, ಗೋ ಹತ್ಯೆಯಂತಹ ಗಂಭೀರ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಿರುವ ಗಟ್ಟಿಯಾದ ಕಾನೂನನ್ನು ತರಲು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರಗಳು ಆಸಕ್ತಿ ತೋರಲಿಲ್ಲ ಆದರೆ ಹಿಂದೂಗಳನ್ನು ಹತೋಟಿಯಲ್ಲಿಡಲು ಮಸೂದೆಗಳನ್ನು ಜಾರಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ದೇಶದ ಭದ್ರತೆಯ ಕುರಿತು ಕಾಳಜಿ ಇರದ ಯುಪಿಎ ಸರಕಾರ ಇದೀಗ ಅಲ್ಪಸಂಖ್ಯಾಕರ ಓಲೈಕೆಗೆ ಬಹುಸಂಖ್ಯಾಕ ಹಿಂದೂಗಳನ್ನು ದಮನಿಸಲು ಹೊಸ ಕಾನೂನನ್ನು ಜಾರಿಗೊಳಿಸಲು ಉದ್ದೇಶಿಸಿದೆ ಎಂದು ಟೀಕಿಸಿದರು.
ಕೊಲ್ಯ ಶ್ರೀ ಜಗದ್ಗುರು ರಾಜಯೋಗಿ ರಮಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಮತ್ತು ಗುರುಪುರ ಶ್ರೀ ಕ್ಷೇತ್ರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಆಶೀರ್ವಚನಗೈದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸಂಘ ಚಾಲಕ ಡಾ| ಪಿ. ವಾಮನ ಶೆಣೈ ಅಧ್ಯಕ್ಷತೆ ವಹಿಸಿದ್ದರು.
ವಿಶ್ವ ಹಿಂದೂ ಪರಿಷತ್ ರಾಜ್ಯ ಉಪಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಪ್ರಸ್ತಾವನೆಗೈದರು. ಹಿಂದೂ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಸ್. ರಮೇಶ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹರೀಶ್ ಆಚಾರ್ ವಂದಿಸಿದರು. ಉಪಾಧ್ಯಕ್ಷರಾದ ಸುನಿಲ್ ಆಚಾರ್, ರಾಜೇಶ್ ನಾೖಕ್ ಉಳಿಪಾಡಿಗುತ್ತು, ಸುಚರಿತ ಶೆಟ್ಟಿ, ಪಿ.ಪಿ. ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English