ಬೆಂಗಳೂರು: ಬಳ್ಳಾರಿಯಲ್ಲಿನ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ, ಆನಂದ್ ಸಿಂಗ್, ಸುರೇಶ್ ಬಾಬು ಮತ್ತು ಸತೀಶ್ ಸೈಲ್ ಸೇರಿದಂತೆ 30 ಕ್ಕೂ ಹೆಚ್ಚು ಆರೋಪಿತರು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಸಿಟಿ ಸಿವಿಲ್ ಕೋರ್ಟ್ನಲ್ಲಿರುವ ಹಾಲ್ ನಂಬರ್ 80 ರಲ್ಲಿ ಈ ವಿಚಾರಣೆ ನಡೆಯಿತು. ಕೇಸಿಗೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಿದೆ. ಪ್ರಕರಣದ ವಿಚಾರಣೆ ಇತ್ತೀಚೆಗಷ್ಟೇ ಸಿಬಿಐ ಕೋರ್ಟ್ನಿಂದ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣ ವಿಶೇಷ ನ್ಯಾಯಾಲಯಕ್ಕೆ ವರ್ಗವಾಗಿದೆ.
ಕೇಸಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಲು ಮಾಜಿ ಸಚಿವ ಜನಾರ್ದನ ರೆಡ್ಡಿ, ಶಾಸಕ ಆನಂದ್ ಸಿಂಗ್, ಮಾಜಿ ಶಾಸಕ ಸತೀಶ್ ಸೈಲ್, ಸುರೇಶ್ ಬಾಬು ಸೇರಿದಂತೆ ಹಲವು ಆರೋಪಿಗಳು ಕೋರ್ಟ್ನಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣದ ಎಲ್ಲ ಆರೋಪಿತರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು.
ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲಿನ ಪ್ರಕರಣ ಕೈ ಬಿಡುವಂತೆ ಜನಾರ್ದನ ರೆಡ್ಡಿ, ಆಲಿಕಲಾನ್, ಸುರೇಶ್ ಬಾಬು, ಬಿ.ಎಲ್.ರಾಣಿ ಸಂಯುಕ್ತ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಧೀಶ ಬಿ.ವಿ.ಪಾಟೀಲ್ ಅವರ ಪೀಠದ ಮುಂದೆ ಸಂಯುಕ್ತ ಅರ್ಜಿ ಸಲ್ಲಿಸಲಾಗಿದೆ. ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಈ ಪ್ರಕರಣ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ಆರೋಪಗಳನ್ನು ಕೈಬಿಡುವಂತೆ ಸಂಯುಕ್ತ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಈ ಸಂಬಂಧ ಆಕ್ಷೇಪಣೆ ಸಲ್ಲಿಸಲು ಕೋರ್ಟ್ ಸರ್ಕಾರಿ ವಿಶೇಷ ಅಭಿಯೋಜಕರಿಗೆ ಸೂಚಿಸಿ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 11 ಕ್ಕೆ ಮುಂದೂಡಿತು.
Click this button or press Ctrl+G to toggle between Kannada and English